ಧ್ರುವ ಸರ್ಜಾ 'ಕೆಡಿ'ಯಲ್ಲಿ 'ಧಕ್ ದೇವ'ನಾದ ಬಾಲಿವುಡ್ 'ಬಾಬಾ', ಕಿಕ್ಕೇರಿಸಿದ ಫಸ್ಟ್ ಲುಕ್...!
ಚಿತ್ರರಂಗ ಮತ್ತು ಪ್ರೇಕ್ಷಕರ ಗಮನವನ್ನು ತೀವ್ರವಾಗಿ ತಮ್ಮತ್ತ ಸೆಳೆಯುವ ಕಲೆ ಶೋಮ್ಯಾನ್ ಜೋಗಿ ಪ್ರೇಮ್ ಅವರಿಗೆ ಯಾವತ್ತೋ ಸಿದ್ಧಿಸಿದೆ. ಪ್ರೇಮ್ ಹೊಸಬರನ್ನೂ ಗೆಲ್ಲಿಸುತ್ತಲೇ, ತಾವೂ ಗೆದ್ದವರು. ಸೂಪರ್ ಸ್ಟಾರ್ ಗಳನ್ನು ಒಟ್ಟೊಟ್ಟಿಗೇ ಹ್ಯಾಂಡಲ್ ಮಾಡಿದವರು.
ಇಂಥಾ ಪ್ರೇಮ್ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಪ್ಯಾನ್ ಇಂಡಿಯಾ ಲೆವಲ್ಲಿಗೆ ಕೆಡಿ ಚಿತ್ರವನ್ನೂ ಶುರು ಮಾಡಿದಾಗಲೇ ಸಂಚಲನ ಸೃಷ್ಟಿಯಾಗಿತ್ತು. ದೊಡ್ಡ ದೊಡ್ಡವರೆಲ್ಲ ಒಬ್ಬರಾದ ಮೇಲೊಬ್ಬರಂತೆ ಈ ಚಿತ್ರತಂಡವನ್ನೂ ಸೇರಿಕೊಳ್ಳುತ್ತಿದ್ದಂತೆ ಚಿತ್ರದ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗತೊಡಗಿತು. ಈ ನಿರೀಕ್ಷೆ ಎಂಬ ಪರೀಕ್ಷೆಯಲ್ಲಿ ಪ್ರೇಮ್ ಪಡೆಯಲಿರುವ ಅಂಕ ಎಷ್ಟು ಎನ್ನುವುದು ಡಿಸೆಂಬರ್‌ನಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ .. ಸಂಜಯ್ ದತ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಪ್ರೇಮ್ ಅವರ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿದ್ಧಾರೆ. ಚಿತ್ರದಲ್ಲಿನ ಸಂಜಯ್ ದತ್ ಅವರ ಫಸ್ಟ್ ಲುಕ್‌ನ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನೂ ತಮ್ಮತ್ತ ಸೆಳೆದಿದ್ದಾರೆ ಪ್ರೇಮ್.

ಸಂಜಯ್ ದತ್ ಇಲ್ಲಿ ʻಧಕ್ ದೇವಾʼ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನೂ .. ಇವರದ್ದು ಇಲ್ಲಿ ಖಾಕಿ ವೇಷದಲ್ಲಿರುವ ಗೋಮುಖ ವ್ಯಾಘ್ರನ ಪಾತ್ರನಾ ಅಥವಾ ಕೆಡಿ ಚಿತ್ರದ ನಿಜವಾದ ರೌಡಿನಾ ಅನ್ನುವ ಪ್ರಶ್ನೆ ಈ ಫಸ್ಟ್ ಲುಕ್ ನೋಡಿದ ನಂತರ ಅನೇಕರನ್ನೂ ಕಾಡುತ್ತಿದೆ. ರಾಕ್ಷಸ ಸಾಮ್ರಾಜ್ಯದ ರಾಜಾ ಈ ಧಕ್ ದೇವಾ ಎಂದು ಚಿತ್ರತಂಡ ಹೇಳಿರುವ ಹಿನ್ನೆಲೆ ಸಂಜಯ್ ದತ್ ಅವರ ಪಾತ್ರ ವಿನ್ಯಾಸದ ಕುರಿತು ಕುತೂಹಲ ಕೂಡ ಗರಿಗೇದರಿದೆ. ಬಾಲಿವುಡ್ 'ಬಾಬಾ'ನ ಈ ಲುಕ್ ಅವರ ಅಭಿಮಾನಿಗಳಿಗೆ ಸದ್ಯಕ್ಕೆ ಸಿಕ್ಕಾಪಟ್ಟೆ ಕಿಕ್‌ನ್ನೂ ನೀಡುತ್ತಿದೆ.
ಉಳಿದಂತೆ ಕೆಡಿ ಚಿತ್ರದಲ್ಲಿ ಸಂಜಯ್ ದತ್ ಜೊತೆ ಶಿಲ್ಪಾ ಶೆಟ್ಟಿ ಕೂಡ ಇದ್ಧಾರೆ. 17 ವರ್ಷಗಳ ನಂತರ ಕೆಡಿ' ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಶಿಲ್ಪಾ ಶೆಟ್ಟಿ ಅವರನ್ನು ಕರೆತಂದಿದ್ದು ಪ್ರೇಮ್ ಅವರ ಮತ್ತೊಂದು ಹೆಗ್ಗಳಿಕೆ. ಬಾಲಿವುಡ್‌ನ ಈ ಎರಡು ಆಕರ್ಷಣೆಯನ್ನು ಹೊರತು ಪಡಿಸಿದರೆ, ಪ್ರೇಕ್ಷಕರನ್ನು ಸೆಳೆಯಲು ಕನ್ನಡ ಚಿತ್ರರಂಗದ ಹಿರಿಯರಾದ ರಮೇಶ್ ಅರವಿಂದ್ ಮತ್ತು ಡಾ.ರವಿಚಂದ್ರನ್ ಚಿತ್ರದಲ್ಲಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಹೃದಯ ಕದಿಯುವ ಕೆಲಸವನ್ನು ರೀಷ್ಮಾ ನಾಣಯ್ಯ ಮಾಡಿದ್ದಾರೆ.

ಇನ್ನೂ.. ಸಾಮಾನ್ಯವಾಗಿ ಚಿತ್ರದ ಆಡಿಯೋ ಹಕ್ಕು ಅಷ್ಟು ಕೋಟಿ, ಇಷ್ಟು ಕೋಟಿಗೆ ಮಾರಾಟವಾಯಿತು ಎಂದು ಎಲ್ಲರೂ ಹೇಳುತ್ತಾರೆ. ಆದರೆ.. ಇದೇ ಮೊದಲ ಬಾರಿಗೆ ನಿರ್ದೇಶಕ ಪ್ರೇಮ್ ತಮ್ಮ ಕೆಡಿ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು 17.70 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ ಎಂದು ಹಿಂದೆ ಹೇಳಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿಯನ್ನೂ ಪ್ರೇಮ್ ಬರೆದಿದ್ಧಾರೆ. ಮಿಕ್ಕಂತೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಸಿದ್ಧವಾದ ಕೆಡಿ -ದಿ ಡೆವಿಲ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಎಪ್ಪತ್ತು, ಎಂಭತ್ತರ ದಶಕದ ಕಥೆ ವಿಲಿಯಂ ಡೇವಿಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











