ನನಗೊಬ್ಬ ಸಂಗಾತಿ ಬೇಕು ಆದರೆ ನಾನು ಅವನ ಜೊತೆ ಮದುವೆಯಾಗಲ್ಲ- 48ನೇ ವರ್ಷದಲ್ಲಿ ಮನದ ಬಯಕೆ ಹಂಚಿಕೊಂಡ ದಿವ್ಯಾ ದತ್ತಾ
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ..
ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ದಿವ್ಯಾ ದತ್ತಾ ಅವರ ವ್ಯೆಯಕ್ತಿಕ ಬದುಕು ಸದ್ಯದ ಮತ್ತೊಂದು ಉದಾಹರಣೆ. ಹೌದು, ದಿವ್ಯಾ ದತ್ತಾ.. ಬಾಲಿವುಡ್‌ನ ಖ್ಯಾತ ಚೆಲುವೆ. ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಹತ್ತು ಹಲವು ಪಾತ್ರಗಳನ್ನು ಮಾಡಿರುವ ದಿವ್ಯಾ ದತ್ತಾ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್, ಐಫಾ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.

ಇಂಥಾ ದಿವ್ಯಾ ದತ್ತಾಗೆ ಈಗ 48ರ ಹರೆಯ. ಆದರೆ.. ಇನ್ನೂ ಕೂಡ ದಿವ್ಯಾ ಮದುವೆಯಾಗಿಲ್ಲ. ದಿವ್ಯಾ ದತ್ತಾ ಮದ್ವೆಯಾಗದಿರಲು ಕಾರಣಗಳು ಏನೇ ಇರಬಹುದು ಆದರೆ ಈ ಕುರಿತು ಹಲವರಲ್ಲಿ ಪ್ರಶ್ನೆಗಳು ಇದ್ದೇ ಇವೆ. ಈ ಪ್ರಶ್ನೆಗಳಿಗೆ ಈಗ ದಿವ್ಯಾ ದತ್ತ ಉತ್ತರವನ್ನು ನೀಡಿದ್ದಾರೆ. 48 ವಯಸ್ಸಾದರೂ ಕೂಡ ಮದುವೆ ಯಾಕೆ ಆಗಿಲ್ಲ ಎಂದು ಹೇಳಿದ್ದಾರೆ.
''ಪಿಂಕ್‌ವಿಲ್ಲಾ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ದಿವ್ಯಾ ದತ್ತ ಮದುವೆಗೆ ನಾನು ಯಾವತ್ತು ಮಹತ್ವ ನೀಡಿಲ್ಲ ಎಂದು ಹೇಳಿದ್ದಾರೆ. ನಾನು ಮಾಡಿದ ತಪ್ಪುಗಳಿಂದ ನಾನು ಪಾಠ ಕಲಿತ ಹಿನ್ನೆಲೆ ನಾನು ಮದುವೆಗೆ ಆದ್ಯತೆ ನೀಡುವುದಿಲ್ಲ ಎಂದು ಹೇಳಿರುವ ದಿವ್ಯಾ ದತ್ತಾ ಹಿಂದೆ ನಾನು ಹಲವರ ಜೊತೆ ಸಂಬಂಧದಲ್ಲಿದ್ದೆ, ಆದರೆ ಯಾರೊಂದಿಗೂ ಕೂಡ ಹೊಂದಾಣಿಕೆ ಆಗಲಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರಕಾರ ಒಂದು ಸಂಬಂಧ ಅಂದರೆ ಜೀವನ ಪರ್ಯಂತ ಜೊತೆಯಾಗಿ ಹೆಜ್ಜೆ ಹಾಕಬೇಕು, ಕಷ್ಟದ ಸಮಯದಲ್ಲಿ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲಬೇಕು, ಇಬ್ಬರು ಖುಷಿಯಲ್ಲಿ ಕೂಡ ಜೊತೆಯಾಗಿರಬೇಕು, ಆದರೆ ನನ್ನ ಹಿಂದಿನ ಸಂಬಂಧಗಳಲ್ಲಿ ಇವೆಲ್ಲ ಅಂಶಗಳು ಮರೆಯಾಗಿದ್ದವು ಎಂದು ಹೇಳಿರುವ ದಿವ್ಯಾ ದತ್ತಾ, ಕೊರೊನಾ ಕಾಲದಲ್ಲಿ ನನಗೇನು ಬೇಕು ಎನ್ನುವುದು ನನಗೆ ಮನವರಿಕೆಯಾಯ್ತು ಎಂದಿದ್ದಾರೆ.
ಮುಂದುವರೆದು ನಾನು ನಟಿ, ಚಿತ್ರರಂಗದಲ್ಲಿ ಯಾವತ್ತು ಏನಾಗುತ್ತೆ ಎಂದು ಹೇಳಲಿ ಸಾಧ್ಯ ಇಲ್ಲ, ನನ್ನ ವೃತ್ತಿಯಲ್ಲಿ ಸ್ಥಿರತೆ ಇಲ್ಲ ಎಂದು ಹೇಳಿರುವ ದಿವ್ಯಾ ದತ್ತಾ ನನ್ನ ಜೀವನ ಶೈಲಿ ಮತ್ತು ವೃತ್ತಿ ಬದುಕಿಗೆ ಹೊಂದಿಕೊಳ್ಳುವಂತಹ ವ್ಯಕ್ತಿ ಬೇಕು ಎಂದಿದ್ದಾರೆ. ನಾನು ಈಗಲೂ ಪ್ರೀತಿಯಲ್ಲಿ ಬೀಳುವುದಕ್ಕೆ.. ಪ್ರೀತಿಸುವುದಕ್ಕೆ.. ರೆಡಿಯಾಗಿದ್ದೇನೆ ಆದರೆ ನನಗೆ ಮದುವೆಯಾಗುವ ಮನಸ್ಸು ಇಲ್ಲ ಎಂದು ಹೇಳಿರುವ ದಿವ್ಯಾ ದತ್ತಾ ಪ್ರೀತಿ ಎನ್ನುವುದು ಹೃದಯದ ವಿಷಯ, ಹೃದಯದಲ್ಲಿ ಪ್ರೀತಿ ಹುಟ್ಟಿದಾಗ ಗಟ್ಟಿಯಾದ ಸಂಬಂಧ ರೂಪಗೊಳ್ಳುತ್ತೆ ಎಂದು ಹೇಳಿದ್ದಾರೆ. ಮದುವೆಯ ಬಂಧನಕ್ಕಿಂತ ಶಾಂತಿ ನೆಮ್ಮದಿ ಮುಖ್ಯ ಎಂದಿದ್ದಾರೆ.

ಅಂದ್ಹಾಗೇ 1994 ರಲ್ಲಿ ಚಿತ್ರರಂಗಕ್ಕೆ ಬಂದ ದಿವ್ಯಾ ದತ್ತಾ 2005 ರ ಸುಮಾರು ಲೆಫ್ಟಿನೆಂಟ್ ಕಮಾಂಡರ್ ಸಂದೀಪ್ ಶೆರ್ಗಿಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಂಢೀಗಡದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಆದರೆ ಆ ನಂತರ ಅದೇನಾಯ್ತೋ..? ಈ ನಿಶ್ಚಿತಾರ್ಥ ಮುರಿದು ಬಿತ್ತು. ದಿವ್ಯಾ ದತ್ತಾ ನಿಶ್ಚಿತಾರ್ಥ ನಡೆದಿದೆ ಎನ್ನುವ ಸುದ್ದಿಯನ್ನು ಕೂಡ ಒಪ್ಪಲಿಲ್ಲ. ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿಯನ್ನು ಕೂಡ ಅಲ್ಲಗೆಳೆದಿರಲಿಲ್ಲ.
ಬದಲಿಗೆ ''ಇಂಡಿಯಾ ಫೋರಂ''ಗೆ ನೀಡಿದ ಸಂದರ್ಶನದಲ್ಲಿ ಸಂದೀಪ್ ಮತ್ತು ನಾನು ಕಳೆದ ವರ್ಷ ಚಂಡೀಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಜನರಿಗೆ ವಿವರಿಸುವುದು ತುಂಬಾ ಮುಜುಗರದ ವಿಷಯ ಎಂದು ಹೇಳಿದ್ದರು. ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದರು.
ಇನ್ನು ಇದೇ ಸಮಯದಲ್ಲಿ ದಿವ್ಯಾ ದತ್ತಾ ಬೆಳ್ಳಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ್ದರು. ''ಶನ್ನೋ ಕಿ ಶಾದಿ'' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದರು. ಈ ಸಮಯದಲ್ಲಿ ಧಾರಾವಾಹಿಯ ಸಹನಟ ವಿಕಾಸ್ ಭಲ್ಲಾ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ನಿಶ್ಚಿತಾರ್ಥ ಮುರಿದು ಬೀಳಲು ಇವರಿಬ್ಬರ ನಡುವೆ ಇದ್ದ ಆಪ್ತ ಸಂಬಂಧ ಕಾರಣವೆಂದು ಹೇಳಲಾಯ್ತು. ಈ ಸುದ್ದಿಯನ್ನು ಕೂಡ ದಿವ್ಯಾ ದತ್ತಾ ತಳ್ಳಿ ಹಾಕಲಿಲ್ಲ.
ಆ ನಂತರ ವಿಕಾಸ್ ಭಲ್ಲಾ, ಹಿರಿಯ ನಟ ಪ್ರೇಮ್ ಚೋಪ್ರಾ ಅವರ ಮಗಳು ಪುನಿತಾ ಅವರನ್ನು ಮದುವೆಯಾದರು. ಹೀಗೆ ಮುರಿದು ಬಿದ್ದ ನಿಶ್ಚಿತಾರ್ಥ ಮತ್ತು ಸಹನಟನ ಜೊತೆಗಿನ ಅಫೇರ್ ಕಾರಣಕ್ಕೆ ಆಗ ಸುದ್ದಿಯಾಗಿದ್ದ ದಿವ್ಯಾ ದತ್ತಾ ಆ ನಂತರ ತಮ್ಮ ಚಿತ್ರಗಳಿಂದ ಮತ್ತು ಪಾತ್ರಗಳಿಂದ ಸುದ್ದಿಯಾದರು. ಸದ್ಯ ತಮ್ಮ ಮದುವೆ ಕುರಿತು ಹೇಳಿಕೆಯನ್ನು ನೀಡಿ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.


Click it and Unblock the Notifications











