'ಆಪರೇಷನ್ ಸಿಂಧೂರ್' ಸಿನಿಮಾ ಘೋಷಣೆ; ನಿರ್ದೇಶಕ, ನಿರ್ಮಾಪಕ, ಹೀರೊ ಯಾರು?

ಕಳೆದ ಮೂರ್ನಾಲ್ಕು ದಿನಗಳಿಂದ 'ಆಪರೇಷನ್ ಸಿಂಧೂರ್' ಹೆಸರು ಮಾರ್ಧನಿಸುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ವಿರುದ್ಧ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ನಡೆಸಿತ್ತು. ಅದರ ಬೆನ್ನಲ್ಲೇ ಈಗ ಗಡಿ ಭಾಗದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದರು. ಪುರುಷರನ್ನು ಕೊಂದು ಪತ್ನಿಯರ ಕುಂಕುಮ ಅಳಿಸಿದ್ದರು. ಅದೇ ಕಾರಣಕ್ಕೆ ಪಾಕ್ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿ ಭಾರತ ಸೇನೆ ನಡೆಸಿದ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ್' ಎಂದು ಹೆಸರು ಕೊಡಲಾಗಿದೆ. ಇದೇ ಹೆಸರು ಆಯ್ಕೆ ಮಾಡಿಕೊಂಡಿದ್ದಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ವೈರಲ್ ಆಗುತ್ತಿದ್ದಂತೆ ಇದೇ ಟೈಟಲ್‌ನಲ್ಲಿ ಸಿನಿಮಾ ಮಾಡಲು ಕೆಲವರು ಮುಗಿಬಿದ್ದಿದ್ದಾರೆ.

Operation Sindoor Film Announced First Poster goes viral

ಇತ್ತೀಚೆಗೆ 'ಆಪರೇಷನ್ ಸಿಂಧೂರ್' ಟೈಟಲ್‌ಗಾಗಿ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ದೊಡ್ಡ ದೊಡ್ಡ ಸಂಸ್ಥೆಗಳು ಈ ಹೆಸರನ್ನು ರಿಜಿಸ್ಟರ್ ಮಾಡಿಸಲು ಮುಂದಾಗಿದ್ದವು. ಇದೀಗ ಪೋಸ್ಟರ್ ಸಮೇತ ಸಿನಿಮಾ ಕೂಡ ಘೋಷಣೆಯಾಗಿದೆ. ಈ ಬಗ್ಗೆ ಭಾರೀ ಟೀಕೆ ಸಹ ವ್ಯಕ್ತವಾಗುತ್ತಿದೆ. ಗಡಿಯಲ್ಲಿ ಭಾರೀ ಯುದ್ಧದ ವಾತಾವರಣ ಇರುವಾಗ ಸಿನಿಮಾ ಮಾಡುವ ಹುಚ್ಚಾಟ ಯಾಕೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

ಚಿತ್ರದ ಪೋಸ್ಟರ್‌ನಲ್ಲಿ ಮಹಿಳಾ ಸೈನಿಕರೊಬ್ಬರು ಸೇನಾ ಸಮವಸ್ತ್ರದಲ್ಲಿ ರೈಫಲ್ ಹಿಡಿದು ತಮ್ಮ ಹಣೆಗೆ ಸಿಂಧೂರ ಹಚ್ಚಿಕೊಳ್ಳುತ್ತಿರುವ ಪವರ್‌ಫುಲ್ ಪೋಸ್ ನೋಡಬಹುದು. ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳು, ಮುಳ್ಳುತಂತಿ ಹಾಗೂ ಮೇಲೆ ಫೈಟರ್ ಜೆಟ್‌ಗಳು ಹೀಗೆ ಸಂಪೂರ್ಣ ಯುದ್ಧದ ಚಿತ್ರಣ ನೋಡಬಹುದು. ಪೋಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಇಂತಹ ಸಮಯದಲ್ಲಿ ಇಷ್ಟು ದಾವಂತದಲ್ಲಿ ಸಿನಿಮಾ ಘೋಷಿಸುವ ಅಗತ್ಯ ಏನಿತ್ತು ಎನ್ನುವ ಚರ್ಚೆ ನಡೀತಿದೆ.

ಉತ್ತಮ್ ಮಹೇಶ್ವರಿ ನಿರ್ದೇಶನದ 'ಆಪರೇಷನ್ ಸಿಂಧೂರ್' ಚಿತ್ರವನ್ನು ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ & ದಿ ಕಂಟೆಂಟ್ ಎಂಜಿನಿಯರ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲು ಮುಂದಾಗಿವೆ. ನಿಕ್ಕಿ ಮತ್ತು ವಿಕಿ ಭಗ್ನಾನಿ ಈ ಹಿಂದೆ 'ನಿಖಿತಾ ರಾಯ್' ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ಅಂದಹಾಗೆ 'ಆಪರೇಷನ್ ಸಿಂಧೂರ್' ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ವಿಚಾರ ಆಧರಿಸಿ 'ಉರಿ' ಸಿನಿಮಾ ಬಂದು ಗೆದ್ದಿತ್ತು. ಇದೀಗ ಪಹಲ್ಗಾಮ್ ಉಗ್ರರ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಭಾರತ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಆಧರಿಸಿ 'ಆಪರೇಷನ್ ಸಿಂಧೂರ್' ಸಿನಿಮಾ ಮಾಡುವ ಪ್ರಯತ್ನ ಶುರುವಾಗಿದೆ.

'ಉರಿ' ನಿರ್ದೇಶಕ ಆದಿತ್ಯ ಧರ್ ಬ್ಯಾನರ್, ಮಹಾವೀರ್ ಜೈನ್ ಸ್ಟುಡಿಯೋ, ಬಾಲಿವುಡ್ ನಿರ್ಮಾಪಕ ಅಶೋಕ್ ಪಂಡಿತ್, ಜಾನ್‌ ಅಬ್ರಾಹಂ ಪ್ರೊಡಕ್ಷನ್ ಹೌಸ್, ನಿರ್ದೇಶಕ ಮಧುರ್ ಭಂಡಾರ್ಕರ್, ಜೀ ಸ್ಟುಡಿಯೋ, ಜೆಪಿ ಸ್ಟುಡಿಯೋ, ಬಾಂಬೆ ಶೋ ಸ್ಟುಡಿಯೋ ಸೇರಿದಂತೆ ಹಲವರು ಇತ್ತೀಚೆಗೆ 'ಆಪರೇಷನ್ ಸಿಂಧೂರ್' ಟೈಟಲ್‌ಗಾಗಿ ಪೈಪೋಟಿ ನಡೆಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಇನ್ನು 'ಆಪರೇಷನ್ ಸಿಂಧೂರ್' ಸಿನಿಮಾ ಘೋಷಿಸಿದ್ದಕ್ಕೆ ಎದುರಾಗಿರುವ ಟೀಕೆ ಬಗ್ಗೆ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ. "ನಮ್ಮ ಭಾರತೀಯ ಸಶಸ್ತ್ರ ಪಡೆಗಳ ವೀರೋಚಿತ ಹೋರಾಟವನ್ನು ಆಧರಿಸಿ 'ಆಪರೇಷನ್ ಸಿಂಧೂರ್' ಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರ ಭಾವನೆಗಳನ್ನು ನೋಯಿಸುವುದು ಅಥವಾ ಕೆರಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ" ಎಂದು ನಿರ್ದೇಶಕ ಉತ್ತಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

"ನಮ್ಮ ಸೈನಿಕರು ಮತ್ತು ನಾಯಕತ್ವದ ಧೈರ್ಯ, ತ್ಯಾಗ ಮತ್ತು ಬಲದಿಂದ ನಾನು ಪ್ರಭಾವಿತನಾಗಿದ್ದೇನೆ. ಈ ಪವರ್‌ಫುಲ್ ಕಥೆಯನ್ನು ಬೆಳಕಿಗೆ ತರಲು ಬಯಸುತ್ತೇನೆ. ನನಗೆ ಗೊತ್ತು ಇಂತಹ ಸಮಯದಲ್ಲಿ ಸಿನಿಮಾ ಘೋಷಿಸಿದ್ದು ಕೆಲವರಿಗೆ ಸರಿ ಅನ್ನಿಸದೇ ಇರಬಹುದು, ನೋವುಂಟು ಮಾಡಿರಬಹುದು. ಅದಕ್ಕಾಗಿ ನಾನು ವಿಷಾದಿಸುತ್ತೇನೆ" ಎಂದು ಉತ್ತಮ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

More from Filmibeat

Read more about: poster hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X