Padma Awards 2026 ; ಧರ್ಮೇಂದ್ರ ಅವರಿಗೆ ಪದ್ಮವಿಭೂಷಣ- ಮುಮ್ಮುಟ್ಟಿ, ಮಾಧವನ್‌ಗೂ ಪದ್ಮಭೂಷಣ ಗರಿ
ಭಾರತದ ಅತ್ಯುತ್ತಮ ಪ್ರಶಸ್ತಿಗಳಲ್ಲಿ ಪದ್ಮ ಪ್ರಶಸ್ತಿ ಕೂಡ ಒಂದು ಮತ್ತು ಪ್ರಮುಖವಾದದ್ದು. ಸಾಹಿತ್ಯ, ಕಲೆ, ಶಿಕ್ಷಣ, ವಿಜ್ಞಾನ, ಕ್ರೀಡೆ, ಸಮಾಜ ಸೇವೆ, ವೈದ್ಯಕೀಯ, ಉದ್ಯಮ, ಹೀಗೆ ಹಲವು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರನ್ನು ಗುರತಿಸಿ, ಅವರ ಸಾಧನೆಗಳಿಗೆ ಸಲಾಂ ಹೊಡೆದು ಕೇಂದ್ರ ಸರ್ಕಾರ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ.
ಈ ವರ್ಷ ಕೂಡ ಈ ಪರಂಪರೆ ಮುಂದುವರೆದಿದ್ದು 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಗೃಹ ಸಚಿವಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಈ ವರ್ಷ 131 ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಆ ಪೈಕಿ 5 ಪದ್ಮ ವಿಭೂಷಣ ಪ್ರಶಸ್ತಿ ಆದರೆ 13 ಪದ್ಮಭೂಷಣ ಪ್ರಶಸ್ತಿಗಳಿವೆ. 113 ಪದ್ಮಶ್ರೀ ಗೌರವ ಸೇರಿವೆ.

''ಶೋಲೆ''.. ''ಮೇರಾ ಗಾವ್ ಮೇರಾ ದೇಶ್''.. ''ಧರ್ಮ ವೀರ್''.. ''ಪ್ರತಿಗ್ಯಾ''.. ''ಇನ್ಸಾನಿಯತ್ ಕೆ ದುಷ್ಮನ್''.. ''ಅನುಪಮಾ''.. ''ಬಂಧಿನಿ''.. ''ಫೂಲ್ ಔರ್ ಪತ್ಥರ್''.. ''ಲೋಹಾ''.. ''ದಾದಾಗಿರಿ''.. ''ಹುಕುಮತ್''.. ''ಖತ್ರೋನ್ ಕೆ ಖಿಲಾಡಿ''.. ''ದಿ ಬರ್ನಿಂಗ್ ಟ್ರೈನ್''.. ''ಡ್ರೀಮ್ ಗರ್ಲ್''..ಹೀಗೆ ತಮ್ಮ ಜೀವಿತಾವಧಿಯಲ್ಲಿ ನಾಯಕನಾಗಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ, ಕಳೆದ ವರ್ಷ ಇಹಲೋಜ ತ್ಯಜಿಸಿದ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.
400ಕ್ಕೂ ಅಧಿಕ ಚಿತ್ರಗಳಲ್ಲಿ ಆಕ್ಟ್ ಮಾಡಿರುವ,ಒಂದೇ ವರ್ಷದಲ್ಲಿ 36 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ದಾಖಲೆಯನ್ನು ಕೂಡ ಬರೆದ ಮಲಯಾಳಂನ ದಂತಕತೆ ಮಮ್ಮುಟ್ಟಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 90ರ ದಶಕದ ಸುಮಧುರ ಧ್ವನಿ, "ಮೆಲೋಡಿ ಕ್ವೀನ್" ಅಲ್ಕಾ ಯಾಗ್ನಿಕ್ ಅವರಿಗೂ ಪದ್ಮ ಭೂಷಣ ಒಲಿದಿದೆ.
ಇನ್ನು ''ಫೆವಿಕೋಲ್''ನಿಂದ ಹಿಡಿದು ''ಕ್ಯಾಡ್ಬರಿ''ವರೆಗೆ ಮರೆಯಲಾಗದ ಹಲವು ಜಾಹೀರಾತುಗಳ ಮೂಲಕ ಮನ ಗೆದ್ದಿದ್ದ, ಭಾರತೀಯರ ನಾಡಿಮಿಡಿತ ಅರಿತಿದ್ದ ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ಅವರಿಗೆ ಮರಣೋತ್ತರವಾಗಿ ಪದ್ಮ ಭೂಷಣ ಗೌರವ ಧಕ್ಕಿದೆ. ಪಿಯೂಷ್ ಪಾಂಡೆ ಅವರ ಹೆಸರು ಈ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ.
ಕರ್ನಾಟಕದ ಶತಾವಧಾನಿ ಗಣೇಶ್ (ಡಾ.ರಾಮಚಂದ್ರ ಗಣೇಶ್) ಅವರಿಗೆ ಕಲಾ ಕ್ಷೇತ್ರದ ಸಾಧನೆಗಾಗಿ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಇನ್ನೂ ಚಿತ್ರರಂಗದ ಚಿರಯುವಕರಲ್ಲಿ ಒಬ್ಬರಾದ ಆರ್.ಮಾಧವನ್ ಅವರಿಗೆ ಕೂಡ ಈ ಬಾರಿ ಮನ್ನಣೆ ಸಿಕ್ಕಿದೆ. ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಬಂಗಾಳದ ಪ್ರಖ್ಯಾತ ತಾರೆ ಪ್ರೋಸೆನ್‌ಜಿತ್ ಚಟರ್ಜಿಕೂಡ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ಇನ್ನು ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ವಿಶಿಷ್ಟ ನಟನಾ ಶೈಲಿಗೆ ಹೆಸರುವಾಸಿಯಾಗಿದ್ದ, ''ಯೇ ಜೋ ಹೈ ಜಿಂದಗಿ''.. ''ಮೈ ಹೂ ನಾ''.. ''ಕಹೋ ನಾ ಪ್ಯಾರ್ ಹೈ''.. ''ಕಲ್ ಹೋ ನಾ ಹೋ''.. ''ಫನಾ''.. ''ಹಮ್ ಆಪ್ಕೇ ಹೈ ಕೌನ್''.. ''ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ''.. ''ಸಾತಿಯಾ''.. ''ಚಲ್ತೇ ಚಲ್ತೇ''.. ''ಭೂತನಾಥ್''.. ''ರಾ ಒನ್''.. ಹೀಗೆ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದ ಸತೀಶ್ ಶಾ ಅವರಿಗೆ ಮರಣೋತ್ತರ ಪದ್ಮಶ್ರೀ ಘೋಷಿಸಲಾಗಿದೆ.
ಇನ್ನುಳಿದಂತೆ ಕ್ರೀಡಾ ಲೋಕದಲ್ಲಿ ರೋಹಿತ್ ಶರ್ಮಾ, ಹರ್ಮನ್ ಪ್ರೀತ್ ಕೌರ್ ಅವರಿಗೆ ಕೂಡ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


Click it and Unblock the Notifications











