ಇನ್ನೇನು ಎರಡು ಗಂಟೆಯಲ್ಲಿ ಸಾಯ್ತೀಯಾ, ಬೇಕಾ ಇದೆಲ್ಲಾ ; ಜಾವೇದ್ ಅಖ್ತರ್ ವಿರುದ್ದ ಕಿಡಿ ಕಾರಿದ ಪಾಕಿಸ್ತಾನದ ನಟಿ..!
ಪಾಕಿಸ್ತಾನ ಬೆಳೆಸಿದ ಪಾಪಿ ಉಗ್ರರ ಆತಂಕಕ್ಕೆ ಕಡಿವಾಣ ಹಾಕಲು, ಅವರ ಅಟ್ಟಹಾಸವನ್ನು ಮಟ್ಟ ಹಾಕಲು, ಭಾರತೀಯ ವೀರ ಯೋಧರು ಕಟಿ ಬದ್ದರಾಗಿ ನಿಂತಿದ್ದಾರೆ. ಆದರೂ ಕೂಡ ಇವರ ಉಪಟಳ ಕಡಿಮೆಯಾಗಿಲ್ಲ. ಸದಾ ಒಂದಿಲ್ಲೊಂದು ವಿಚಾರವಾಗಿ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನದ ವಿರುದ್ಧ ಪೆಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ಅನೇಕರು ಕೆಂಡ ಕಾರುತ್ತಿದ್ದಾರೆ.
ಕೇವಲ ಜನ ಸಾಮಾನ್ಯರು ಮಾತ್ರವಲ್ಲದೇ ಚಿತ್ರರಂಗದ ಅನೇಕ ತಾರೆಯರು ಕೂಡ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಇದೇ ಸರಿಯಾದ ಸಮಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಮನವಿಯನ್ನು ಕೂಡ ಮಾಡಿದ್ದಾರೆ.

ವಿಶೇಷ ಅಂದರೆ ನಿನ್ನೆ ಮೊನ್ನೆಯವರೆಗೆ ಭಾರತ-ಪಾಕಿಸ್ತಾನದ ನಡುವೆ ಸಾಮರಸ್ಯ ಮತ್ತು ಸಹಬಾಳ್ವೆಯ ಅಗತ್ಯ ಇದೆ ಎಂದು ಹೇಳುತ್ತಿದ್ದವರು, ಶಾಂತಿಯ ಮಂತ್ರವನ್ನು ಪಠಿಸುತ್ತಿದ್ದವರು ಕೂಡ ಈಗ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಾಪಿ ಪಾಕಿಸ್ತಾನಕ್ಕೆ ಹಿಡಿ ಶಾಪ ಹಾಕುತ್ತಿದ್ಧಾರೆ.
ಸ್ನೇಹ-ಸಹೋದರತ್ವದ ಮಾತುಗಳನ್ನಾಡುತ್ತಿದ್ದ ಕಲಾವಿದರ ಬಾಯಲ್ಲಿ ಯುದ್ಧದ ಮಾತುಗಳನ್ನು ಕೇಳಿ ಪಾಕಿಸ್ತಾನದ ಚಿತ್ರರಂಗದ ತಾರೆಯರು ಸಹಜವಾಗಿ ಭಾರತೀಯ ಚಿತ್ರರಂಗದವರ ಮೇಲೆ ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಜಾವೇದ್ ಅಖ್ತರ್ ಕುರಿತು ಅಲ್ಲಿನ ನಟಿ ಬುಶ್ರಾ ಅನ್ಸಾರಿ ಮಾತನಾಡಿರುವ ಮಾತು ಸಾಕ್ಷಿ.
ಹೌದು, ಸುದ್ದಿ ಸಂಸ್ಥೆ ANI ಉಲ್ಲೇಖಿಸಿದಂತೆ ಗ್ಲೋರಿಯಸ್ ಮಹಾರಾಷ್ಟ್ರ ಉತ್ಸವದಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಭಾರತದ ಖ್ಯಾತ ಗೀತರಚನೆಕಾರ, ಚಿತ್ರಕಥೆಗಾರ, ಎಡಪಂಥೀಯ, ಚಿಂತಕ, ಜಾವೇದ್ ಅಖ್ತರ್ ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನ ಖಂಡಿಸಿದ್ದರು. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕೆಂದು ಹೇಳಿದ್ದರು. ಪಾಕಿಸ್ತಾನದ ಕಲಾವಿದರಿಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ನೀಡದಿರುವುದೇ ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಈ ತರಹದ ದಾಳಿಯನ್ನು ಪಾಕಿಸ್ತಾನ ಮಾಡಿರುವುದು ಇದು ಮೊದಲೇನಲ್ಲ. ಹಿಂದೆ ಕೂಡ ಹಲವಾರು ಬಾರಿ ಪಾಕಿಸ್ತಾನ ತನ್ನ ಬಾಲ ಬಿಚ್ಚಿದೆ ಎಂದು ಹೇಳಿದ್ದ ಜಾವೇದ್ ಅಖ್ತರ್ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡುತ್ತೇನೆ ಎಂದು ಹೇಳಿದ್ದರು.ಗಡಿಯಲ್ಲಿ ಕೆಲ ಪಟಾಕಿ ಸಿಡಿಸಿದರೆ ಪ್ರಯೋಜನ ಇಲ್ಲ. ಮುಟ್ಟಿ ನೋಡಿಕೊಳ್ಳುವಂತೆ ಈ ಬಾರಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕಿದೆ ಎಂದು ಹೇಳಿದ್ದರು. ಪಾಕಿಸ್ತಾನದ ವಿರುದ್ದ ಮಾತನಾಡುತ್ತಾ ಮಾತನಾಡಿತ್ತಾ ಭಾವುಕರಾಗಿ ನಿಗಿ ನಿಗಿ ಕೆಂಡ ಕಾರಿದ್ದರು.
ಜಾವೇದ್ ಅಖ್ತರ್ ಅವರ ಈ ಮಾತುಗಳನ್ನು ಕೇಳಿ ಇದೀಗ ಪಾಕಿಸ್ತಾನದ ನಟಿ ಬುಶ್ರಾ ಅನ್ಸಾರಿ ಕೆರಳಿದ್ದಾರೆ. ಜಾವೇದ್ ಅಖ್ತರ್ ಹೆಸರನ್ನೇಳದೇ ವಿಡಿಯೋ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಜಾವೇದ್ ಅಖ್ತರ್ ಆಯಸ್ಸು ಇನ್ನೆರಡೇ ಗಂಟೆ ಎಂದು ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಬುಶ್ರಾ ಅನ್ಸಾರಿ ಮುಂಬೈನಲ್ಲಿ ಬಾಡಿಗೆ ಮನೆ ಕೂಡ ಪಡೆಯುವಲ್ಲಿ ವಿಫಲವಾಗುವ ನಮ್ಮ ಬರಹಗಾರನಿಗೆ ಏನಾದರು ಮಾತನಾಡಲು ಒಂದು ನೆಪ ಬೇಕಿತ್ತು ಎಂದು ಹೇಳಿದ್ದಾರೆ.
ತನ್ನ ಅಸ್ತಿತ್ವಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವ ಈ ವ್ಯಕ್ತಿ ಸುಖಾ ಸುಮ್ಮನೆ ಉಪಯೋಗಕ್ಕೆ ಬಾರದ ವಿಚಾರಗಳನ್ನೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿರುವ ಬುಶ್ರಾ ಇನ್ನೇನು ನೀವು ಸಾಯೋಕೆ ಎರಡು ಗಂಟೆ ಮಾತ್ರ ಬಾಕಿ ಇದೆ ಆದರೂ ನಿಮಗೆ ಯಾಕೆ ಇಷ್ಟೊಂದು ಭಯ, ಇಷ್ಟೊಂದು ದುರಾಸೆ ಎಂದು ಪ್ರಶ್ನೆ ಮಾಡಿದ್ದಾರೆ. ನಾಸಿರುದ್ದೀನ್ ಶಾ ಸುಮ್ಮನೆ ಇದ್ದಾರೆ ತಾನೇ ? ಬೇರೆ ಕಲಾವಿದರು ಕೂಡ ಸುಮ್ಮನೆ ಇದ್ದಾರೆ ತಾನೇ ? ನೀವು ಅವರಂತೆ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳಿ ಎಂದು ಬುಶ್ರಾ ಅನ್ಸಾರಿ ಮಾತನಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜಾತಿ ಧರ್ಮವನ್ನು ನೋಡದೇ ಬುಶಾ ಅನ್ಸಾರಿ ವಿರುದ್ಧ ಅನೇಕ ಭಾರತೀಯರು ತಿರುಗಿ ಬಿದ್ದಿದ್ದಾರೆ. ಬುಶ್ರಾ ಅನ್ಸಾರಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಜಾವೇದ್ ಅಖ್ತರ್ ಮತ್ತು ಪಾಕಿಸ್ತಾನದ ಸಂಬಂಧ
ಅಂದ್ಹಾಗೇ ಜಾವೇದ್ ಅಖ್ತರ್ ಮುಸ್ಲಿಮರಾದರೂ ಕೂಡ ಅವರು ನಾಸ್ತಿಕರು. ಅವರೇ ಅನೇಕ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ ಕೂಡ. ಭಾರತದಲ್ಲಿ ಇಸ್ಲಾಂ ಮತ್ತು ಹಿಂದೂ ಮೂಲಭೂತವಾದಿಗಳಿಬ್ಬರನ್ನೂ ಸಮಾನವಾಗಿ ಟೀಕಿಸುವ ದಿಟ್ಟ ವ್ಯಕ್ತಿತ್ವ ಜಾವೇದ್ ಅಖ್ತರ್ ಅವರದ್ದು. ಇಂತಹ ಜಾವೇದ್ ಅಖ್ತರ್ ಹೆಚ್ಚೇನು ಇಲ್ಲ ಈಗ ಎರಡು ವರ್ಷದ ಹಿಂದೆ ಉರ್ದು ಕವಿ ಫಾಯಜ್ ಅಹ್ಮದ್ ಅವರ ಸ್ಮರಣಾರ್ಥ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆ ಸಮಯದಲ್ಲಿ ಅವರದ್ದೇ ನೆಲದಲ್ಲಿ ನಿಂತು ಜಾವೇದ್ ಅಖ್ತರ್ ಪಾಕಿಸ್ತಾನದವರಿಗೆ ತಪರಾಕಿ ಹಾಕಿದ್ದರು. ಭಾರತಕ್ಕೆ ಮರಳಿ ಹೋದ ನಂತರ ಪಾಕಿಸ್ತಾನದ ಕುರಿತು ಒಳ್ಳೆಯ ಮಾತುಗಳನ್ನು ನೀವು ಹೇಳುತ್ತೀರಾ ಎಂದು ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಜಾವೇದ್ ಅಖ್ತರ್, ಪರಸ್ಪರ ವಾದ ಪ್ರತಿವಾದ ಮಾಡುವುದರಿಂದ ಪ್ರಯೋಜನ ಇಲ್ಲ, ಸಮಸ್ಯೆಗಳಿಗೆ ಇದೆರಿಂದ ಪರಿಹಾರ ಕೂಡ ಸಿಗುವುದಿಲ್ಲ ಆದರೆ ಮುಂಬೈ ದಾಳಿ ಹೇಗಾಯ್ತು ಎಂದು ಎಲ್ಲರೂ ನೋಡಿದ್ದೇವೆ ಎಂದು ಹೇಳಿದ್ದರು. ಮುಂಬೈ ಮೇಲೆ ದಾಳಿ ಮಾಡಿದ್ದ ಉಗ್ರರು ಈಜಿಪ್ಟ್ ಅಥವಾ ನಾರ್ವೆಯಿಂದ ಬಂದವರಲ್ಲ ಅವರೆಲ್ಲ ನಿಮ್ಮ ದೇಶದಲ್ಲಿಯೇ ಓಡಾಡಿಕೊಂಡು ಆರಾಮಾಗಿದ್ದಾರೆ ಎಂದು ಹೇಳಿದ್ದರು.
ಪಾಕಿಸ್ತಾನದ ನೆಲದಲ್ಲಿ ಅಬ್ಬರಿಸಿದ್ದರು ಜಾವೇದ್ ಅಖ್ತರ್
ಮುಂದುವರೆದು ಪಾಕಿಸ್ತಾನದ ಗಾಯಕರಾದ ನುಸ್ರತ್ ಮತ್ತು ಮೆಹದಿ ಹಸನ್ ಅವರಿಗೆ ಭಾರತದಲ್ಲಿ ನಾವು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ, ಆದರೆ ಭಾರತದ ಸುಪ್ರಸಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ನಿಮ್ಮ ದೇಶ ಯಾವತ್ತಾದರೂ ಅವರಿಗೆ ಕಾರ್ಯಕ್ರಮ ಆಯೋಜನೆ ಮಾಡಿದೆಯಾ ಎಂದು ಪ್ರಶ್ನೆಯನ್ನು ಕೂಡ ಜಾವೇದ್ ಅಖ್ತರ್ ಮಾಡಿದ್ದರು.
ಇಷ್ಟೇ ಅಲ್ಲ ಪಾಕಿಸ್ತಾನದ ಅದೆಷ್ಟೋ ಕಲಾವಿದರಿಗೆ ಭಾರತ ಆತಿಥ್ಯ ವಹಿಸಿದೆ, ಅವರಿಗೆ ಆಶ್ರಯ ಕಲ್ಪಿಸಿದೆ ಎಂದಿದ್ದ ಜಾವೇದ್ ಅಖ್ತರ್ ನಿಮ್ಮ ನೆಲದ ಸುಪ್ರಸಿದ್ದ ಗಾಯಕ ಅದ್ನಾನ್ ಸಾಮಿ ನಿಮ್ಮ ನೆಲ ತೊರೆದು ನಮ್ಮ ನೆಲದಲ್ಲಿ ವಾಸವಾಗಿದ್ದಾರೆ ಎಂದು ಹೇಳಿದ್ದರು. ನಿಮ್ಮ ನುಸ್ರತ್ ಫತೇ ಅಲಿ ಖಾನ್, ಗುಲಾಮ್ ಅಲಿ ಅವರನ್ನು ನೀವು ಮೆಚ್ಚಿಕೊಳ್ಳದಿದ್ದರೂ ಕೂಡ ಭಾರತದವರು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದ್ದರು.
ಬುಶ್ರಾ ಅನ್ಸಾರಿ ಹೇಳಿಕೆಗೆ ತಿರುಗೇಟು ನೀಡುತ್ತಾರಾ ಜಾವೇದ್ ಅಖ್ತರ್ ?
ಇನ್ನುಳಿದಂತೆ ಸದ್ಯ ಜಾವೇದ್ ಅಖ್ತರ್ ವಿರುದ್ಧ ಪಾಕಿಸ್ತಾನದ ನಟಿ ಬುಶ್ರಾ ಅನ್ಸಾರಿ ಕೆರಳಿ ಕೆಂಡವಾಗಿದ್ದು, ವಿಡಿಯೋ ಮೂಲಕ ಜಾವೇದ್ ಅಖ್ತರ್ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಬುಶ್ರಾ ಅನ್ಸಾರಿಯ ಈ ಮಾತುಗಳಿಗೆ ಜಾವೇದ್ ಅಖ್ತರ್ ಹೇಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಾಗಿದೆ.
ಮಿಕ್ಕಂತೆ ಚಿತ್ರರಂಗದ ವಿಚಾರಕ್ಕೆ ಬಂದರೆ ಜಾವೇದ್ ಅಖ್ತರ್ ಸದ್ಯ ಬಾಲಿವುಡ್‌ನಲ್ಲಿ ಈಗಲೂ ಸಕ್ರಿಯರಾಗಿದ್ದಾರೆ. ಹಲವಾರು ಚಿತ್ರಗಳಿಗೆ ಹಾಡುಗಳನ್ನು ಬರೆಯುತ್ತಿದ್ದಾರೆ. ಇನ್ನು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೇ ರಾಜಕೀಯದ ವಿಚಾರಗಳನ್ನು ಕೂಡ ಜಾವೇದ್ ಅಖ್ತರ್ ನಾನು ರಾಜಕಾರಣಿಯಲ್ಲ ನನಗೇನು ಗೊತ್ತಿಲ್ಲ ಎಂದು ಹೇಳುತ್ತಲೇ ಆಗಾಗ ಮಾತನಾಡುತ್ತಾರೆ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ.


Click it and Unblock the Notifications











