'ಆಪರೇಷನ್ ಸಿಂಧೂರ್'; ಇದು ಹೇಡಿತನದ ಕೃತ್ಯ ಎಂದು ಪಾಕ್ ಕಲಾವಿದರ ಆಕ್ರೋಶ
ಪಹಲ್ಗಾಮ್‌ನ ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಉಗ್ರರ ವಿರುದ್ಧ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯರು ಇದನ್ನು ಸ್ವಾಗತಿಸಿದ್ದಾರೆ. ಸಿನಿಮಾ ತಾರೆಯರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಸಂತಸ ನ್ಯಾಯ ಸಿಕ್ತು ಎನ್ನುತ್ತಿದ್ದಾರೆ. ಆದರೆ ಪಾಕ್ ಕಲಾವಿದರು ಮಾತ್ರ ಇದನ್ನು ಖಂಡಿಸಿದ್ದಾರೆ.
ಮಹಿರಾ ಖಾನ್, ಫವಾದ್ ಖಾನ್, ಹನಿಯಾ ಖಾನ್ 'ಆಪರೇಷನ್ ಸಿಂಧೂರ್' ಕ್ಷಿಪಣಿ ದಾಳಿಯ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ದಾಳಿಯಲ್ಲಿ ಸತ್ತವರ ಬಗ್ಗೆ ಸಂತಾಪ ಸೂಚಿಸಿ ಭಾರತ ಸೇನೆಗೆ ನಡೆಯನ್ನು ಟೀಕಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಭಾರತದಲ್ಲಿ ಇವರು ಇನ್‌ಸ್ಟಾಗ್ರಾಮ್ ಖಾತೆ ಬ್ಲಾಕ್ ಆಗಿದೆ. ಪಾಕ್ ನಟ ಫವಾದ್ ಖಾನ್ ಬಾಲಿವುಡ್ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

ಈ ವಾರ ಫಹಾದ್ ಖಾನ್ ನಟಿಸಿರುವ 'ಅಬೀರ್ ಗುಲಾಲ್' ಬಾಲಿವುಡ್ ಸಿನಿಮಾ ಈ ವಾರ ತೆರೆಗೆ ಬರಬೇಕಿತ್ತು. ಆದರೆ ಪಹಲ್ಗಾಮ್ ಘಟನೆ ಬೆನ್ನಲ್ಲೇ ಸಿನಿಮಾ ಬ್ಯಾನ್ ಮಾಡಲಾಗಿದೆ. ಇದೆಲ್ಲದರ ನಡುವೆ 'ಆಪರೇಷನ್ ಸಿಂಧೂರ್' ಬಗ್ಗೆ ಫಹಾದ್ ಖಾನ್ ಕೆಂಡ ಕಾರಿದ್ದಾರೆ. "ಈ ನಾಚಿಕೆಗೇಡಿನ ದಾಳಿಯಲ್ಲಿ ಗಾಯಗೊಂಡ ಹಾಗೂ ಸಾವನ್ನಪ್ಪಿದವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ. ಮುಂದಿನ ದಿನಗಳಲ್ಲಿ ಅವರ ಪ್ರೀತಿಪಾತ್ರರಿಗೆ ಶಕ್ತಿ ತುಂಬಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಫವಾದ್ ಪೋಸ್ಟ್ ಆರಂಭಿಸಿದ್ದಾರೆ.
"ಎಲ್ಲರಿಗೂ ಗೌರವಯುತ ವಿನಂತಿ. ಗಲಭೆಯನ್ನು ಕೆರಳಿಸುವ ಮಾತುಗಳಿಂದ ಬೆಂಕಿಯನ್ನು ಹೊತ್ತಿಸುವುದನ್ನು ನಿಲ್ಲಿಸಿ. ಇದು ಮುಗ್ಧ ಜನರ ಜೀವಕ್ಕೆ ಒಳ್ಳೆಯದ್ದಲ್ಲ. ಉತ್ತಮ ಪ್ರಜ್ಞೆ ಮೇಲುಗೈ ಸಾಧಿಸಲಿ. ಇನ್ಶಾ ಅಲ್ಲಾಹ್. ಪಾಕಿಸ್ತಾನ ಜಿಂದಾಬಾದ್" ಎಂದು ಫವಾದ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನದ ಮತ್ತೊಬ್ಬ ನಟ ಬಿಲಾಲ್ ಅಬ್ಬಾಸ್ ಖಾನ್ ಪ್ರತಿಕ್ರಿಯಿಸಿ, "ಇಂದು ಭಾರತ ಮಾಡಿದ್ದು ಅವಮಾನಕರ ಮತ್ತು ಹೇಡಿತನದ ಕೃತ್ಯ. ಮುಗ್ಧ ನಾಗರಿಕರ ಮೇಲೆ ದಾಳಿ ಮಾಡುವುದು, ಮುಗ್ಧ ಜೀವಗಳನ್ನು ಬಲಿ ತೆಗೆದುಕೊಳ್ಳುವುದು - ಇದು ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ಇದನ್ನು ಸಮರ್ಥಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಂದು ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಪ್ರತಿಯೊಂದು ಪಾಕಿಸ್ತಾನಿ ಕುಟುಂಬಕ್ಕೂ ನನ್ನ ಹೃದಯ ನೋವುಂಟುಮಾಡಿದೆ" ಎಂದಿದ್ದಾರೆ.
"ಈ ಕ್ರೌರ್ಯವನ್ನು ನಾವು ಮರೆಯುವುದಿಲ್ಲ ಹಾಗೂ ಅಂತಹ ಅನ್ಯಾಯದ ಬಗ್ಗೆ ಮುಂದೆ ನಾವು ಮೌನವಾಗಿರುವುದಿಲ್ಲ. ನಾವು ಕಳೆದುಕೊಂಡ ಆತ್ಮಗಳಿಗಾಗಿ, ನಮ್ಮ ಜನರ ಸುರಕ್ಷತೆಗಾಗಿ ಮತ್ತು ಪಾಕಿಸ್ತಾನದ ಭವಿಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಇಂದು, ನಾವು ಒಗ್ಗಟ್ಟಿನಿಂದ, ಬಲಶಾಲಿಯಾಗಿ ಮತ್ತು ಎಂದಿಗಿಂತಲೂ ಹೆಚ್ಚು ಹೆಮ್ಮೆಯಿಂದ ನಿಂತಿದ್ದೇವೆ" ಎಂದು ಅಬ್ಬಾಸ್ ಬೇಸರ ವ್ಯಕ್ತಪಡಿಸಿದ್ದಾರೆ. ಅಬ್ಬಾಸ್ ಕೆಲ ದಿನಗಳ ಹಿಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದರು.
ಭಾರತ ಸೇನೆಯ ದಾಳಿಯನ್ನು ಟೀಕಿಸಿ ಲೇಖಕಿ ಫಾತಿಮಾ ಭುಟ್ಟೋ ಮಾಡಿದ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ ನಟಿ ಮಹಿರಾ ಖಾನ್, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. "ನಿಜಕ್ಕೂ ಇದು ಹೇಡಿತನ. ಅಲ್ಲಾ ನಮ್ಮ ದೇಶವನ್ನು ರಕ್ಷಿಸಲಿ, ಉತ್ತಮ ಪ್ರಜ್ಞೆ ಮೇಲುಗೈ ಸಾಧಿಸಲಿ. ಆಮೀನ್" ಎಂದು ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದ ಯೂಟ್ಯೂಬರ್, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹನಿಯಾ ಆಮಿರ್ ಇನ್‌ಸ್ಟಾಗ್ರಾಮ್‌ನಲ್ಲಿ "ಹೇಡಿತನ" ಎಂದು ಬರೆದುಕೊಂಡಿದ್ದಾರೆ. ಪಹಲ್ಗಾಮ್ ಘಟನೆ ಬಳಿಕ ಪಾಕ್ ಕಲಾವಿದರು ಸೋಶಿಯಲ್ ಮೀಡಿಯಾ ಖಾತೆಗಳನ್ನು ಭಾರತದಲ್ಲಿ ವೀಕ್ಷಣೆಗೆ ಸಿಗುತ್ತಿಲ್ಲ. ಇನ್ನು ಪಾಕ್ ಕಲಾವಿದರ ಖಂಡನೆ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಹಲ್ಗಾಮ್ ಘಟನೆ ನಡೆದಾಗ ಸುಮ್ಮನಿದ್ದು ಈಗ ಮಾತನಾಡುತ್ತಿದ್ದೀರಾ? ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











