ಮದುವೆ ರದ್ದು, ಕಾರಣ ಇನ್ನೂ ನಿಗೂಢ ; ಸ್ಮೃತಿ ಮಂಧಾನ ಮರೆತು ಹೊಸ ಅಧ್ಯಾಯ ಶುರು ಮಾಡಿದ ನಿರ್ದೇಶಕ ಪಲಾಶ್ ಮುಚ್ಚಲ್
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ..
ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಕಹಿ ನೆನಪುಗಳನ್ನು ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಕೆಲಸದ ಮೂಲಕ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಪಲಾಶ್ ಮುಚ್ಚಲ್.

ಹೌದು, ಪಲಾಶ್ ಮುಚ್ಚಲ್.. ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸಹೋದರ. ಬಾಲಿವುಡ್‌ನಲ್ಲಿ ಈಗಾಗಲೇ ಸಂಗೀತ ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿರುವ ಪಲಾಶ್ ''ಡಿಶ್ಕ್ಯಾಂವ್''.. ''ಅರ್ಧ''.. ''ಭೂತನಾಥ್ ರಿಟರ್ನ್ಸ್''.. ''ಅಮಿತ್ ಸಹಾನಿ ಕಿ ಲಿಸ್ಟ್''.. ''ಮಿಸ್ ತನಕಪುರ ಹಾಜಿರ್ ಹೋ''.. ಅಂತಹ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.
ಬಾಲಿವುಡ್‌ನ ಅತೀ ಕಿರಿಯ ಸಂಗೀತ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಪಲಾಶ್ ''ಆರ್ಧ'' ಮತ್ತು ''ಕಾಮ್ ಚಾಲೂ ಹೈ'' ಚಿತ್ರಗಳ ನಿರ್ದೇಶಕ ಕೂಡ ಹೌದು. ಸದ್ಯ ''ರಾಜು ಬಾಜೇವಾಲಾ'' ಎಂಬ ಇವರ ನಿರ್ದೇಶನದ ಚಿತ್ರ ತೆರೆಗೆ ಬರಬೇಕಿದೆ.
ಇಂಥಾ ಪಲಾಶ್ ಮುಚ್ಚಲ್ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಜೊತೆ ಕಳೆದ ವರ್ಷದ ಅಂತ್ಯದಲ್ಲಿ ಮದುವೆಯಾಗಬೇಕಿತ್ತು. ಸಪ್ತಪದಿ ತುಳಿಯಬೇಕಿತ್ತು.
ಆದರೆ, ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇದ್ದಾಗ ಈ ಮದುವೆ ಮುರಿದು ಬಿತ್ತು. ಇದಕ್ಕೆ ಕಾರಣವೇನು ಎನ್ನುವುದು ಇವರಿಬ್ಬರಿಗೆ ಗೊತ್ತಾದರೂ ಹಲವರು ಸ್ಮೃತಿ ಮಂಧಾನ ಬೆನ್ನಿಗೆ ಪಲಾಶ್ ಚೂರಿ ಹಾಕಿದ್ದಾರೆ ಎಂದು ಮಾತನಾಡಿದರು. ಇದಕ್ಕೆ ಪೂರಕವಾಗಿ ಬೇರೆ ಯುವತಿಗೆ ಪಲಾಶ್ ಮಾಡಿದ್ದ ಮೆಸೇಜ್‌ಗಳು ಜಗಜ್ಜಾಹೀರಾಗಿದ್ದವು. ಸ್ಕ್ರೀನ್ ಶಾಟ್ ವೈರಲ್ ಆಗಿದ್ದವು.
ಆ ನಂತರ ಸ್ಮೃತಿ ಮರಳಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಮರಳಿದರು. ಆದರೆ, ಪಲಾಶ್ ಮಾತ್ರ ಎಲ್ಲಿಯೂ ಕಾಣಿಸಿರಲಿಲ್ಲ. ಆದರೆ ಈಗ ಪಲಾಶ್ ಕೂಡ ಹಳೆಯದನ್ನೆಲ್ಲ ಮರೆತು ಮತ್ತೆ ಹೊಸ ಆರಂಭ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕನಾಗಿ ಹೊಸ ಚಿತ್ರವನ್ನು ಶುರು ಮಾಡಿದ್ದಾರೆ.
ಈ ಕುರಿತು ಪಲಾಶ್ ಅಧಿಕೃತ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ನೀಡದಿದ್ದರೂ ಬಾಲಿವುಡ್‌ನ ಪ್ರಖ್ಯಾತ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಫೋಟೊ ಸಮೇತ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆ ಪ್ರಕಾರ ಮುಂಬೈ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಕಥೆಯಲ್ಲಿ ಶ್ರೇಯಸ್ ತಲ್ಪಡೆ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇವರದ್ದು ಇಲ್ಲಿ ಕಾಮನ್ ಮ್ಯಾನ್ ಪಾತ್ರ. ಜನಸಾಮಾನ್ಯನ ಬದುಕು ಬವಣೆಯ ಸುತ್ತ ಪಲಾಶ್ ಕಥೆ ಹೆಣೆದಿದ್ದು ಚಿತ್ರದ ಚಿತ್ರೀಕರಣ ಬಹುಬೇಗ ಶುರುವಾಗಲಿದೆ.
ಸದ್ಯ ಪಲಾಶ್ ಅವರ ಈ ಹೊಸ ಚಿತ್ರದ ಸುದ್ದಿ ಹೊರ ಬಿದ್ದ ನಂತರ ಹಲವರು ಪಲಾಶ್ ಮುಚ್ಚಲ್ ಅವರನ್ನು ಮತ್ತೆ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನಿಮ್ಮ ಚಿತ್ರಕ್ಕೆ ಹೆಣ್ಣಿಗೆ ಮೋಸ ಮಾಡುವುದು ಹೇಗೆ ? ಎಂಬ ಶೀರ್ಷಿಕೆ ಇಡಿ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಮದುವೆಯ ಹಿಂದಿನ ರಾತ್ರಿ ಎಂಬ ವೆಬ್ ಸರಣಿಯನ್ನು ಮಾಡಿ, ಪಕ್ಕಾ ಬ್ಲಾಕ್‌ಬಸ್ಟರ್ ಆಗುತ್ತೆ ಎಂದಿದ್ದಾರೆ. ಗಂಡ ಅಥವಾ ಬಾಯ್‌ಫ್ರೆಂಡ್ ಹೇಗೆ ತನ್ನ ಪತ್ನಿ ಅಥವಾ ತನ್ನ ಗೆಳತಿಗೆ ಮೋಸ ಮಾಡುತ್ತಾನೆ ಎನ್ನುವ ಕಥಾಹಂದರವನ್ನು ಈ ಚಿತ್ರ ಹೊಂದಿರಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ಚಿತ್ರಕ್ಕೆ ಸನಮ್ ಬೇವಫಾ ತುಂಬಾನೇ ಸೂಕ್ತವಾದ ಹೆಸರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿಗಳು ಇನ್ನು ಬಹಿರಂಗವಾಬೇಕಿವೆ.


Click it and Unblock the Notifications











