ಹೇರಾ ಫೇರಿ 3 ವಿವಾದದ ಹಿಂದಿದೆ ₹15 ಕೋಟಿ ರಹಸ್ಯ, ಬಡ್ಡಿ ಸಮೇತ ಅಕ್ಷಯ್ ಕುಮಾರ್‌ಗೆ ಹಣ ನೀಡಿದ ಪರೇಶ್ ರಾವಲ್..!
ಹಣ ಕೆಲ ಒಮ್ಮೆ ಸಂಬಂಧದಲ್ಲಿ ಹುಳಿ ಹಿಂಡುತ್ತೆ. ವರ್ಷಾನುವರ್ಷದ ಪ್ರೀತಿ ಮತ್ತು ಸ್ನೇಹವನ್ನು ಕೂಡ ಮುರಿಯುವ ಶಕ್ತಿ ಈ ಹಣಕ್ಕಿದೆ. ಹಣ ಇದ್ದರೆ ವ್ಯಕ್ತಿಯ ವ್ಯಕ್ತಿತ್ವ ಹೇಗೆ ಇರಲಿ ಆ ವ್ಯಕ್ತಿಗೆ ಗೌರವ ಸಿಗುತ್ತೆ. ಇನ್ನು ಚಿತ್ರರಂಗದಲ್ಲಿ ಅನೇಕರ ಗುಣವಾಗುಣಗಳನ್ನು ನಿರ್ಧರಿಸುವುದು ಕೇವಲ ಹಣ ಮಾತ್ರ. ಹಣದಾಸೆಗೆ ಇಲ್ಲಿ ಅನೇಕರು ಅನೇಕರಿಗೆ ಮಕ್ಮಲ್ ಟೋಪಿಯನ್ನು ಹಾಕಿದ್ದಾರೆ. ನಂಬಿಕೆ ದ್ರೋಹ ಎಸಗಿದ್ದಾರೆ.
ಮತ್ತೂ ಕೆಲವರು ಸಂಬಂಧವನ್ನೇ ಕಡಿದುಕೊಂಡಿದ್ದಾರೆ. ಉದಾಹರಣೆಗೆ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರ ಸಂಬಂಧ. ಹೌದು, ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರ ದಶಕಗಳ ಗೆಳೆತನದಲ್ಲಿ ಬಿರುಕು ಮೂಡಿದೆ. ಏಕಾಏಕಿ ಹೇರಾ ಫೇರಿ 3 ಚಿತ್ರದಿಂದ ಪರೇಶ್ ರಾವಲ್ ಹೊರ ಬಂದಿದ್ದರಿಂದ ಅಕ್ಷಯ್ ಕುಮಾರ್‌ಗೆ ಆಘಾತವಾಗಿದೆ.

ಇನ್ನು ಹೇರಾ ಫೇರಿ 3 ಚಿತ್ರದಿಂದ ಪರೇಶ್ ರಾವಲ್ ಹೊರ ಬರಲು ಹಣವೇ ಪ್ರಮುಖ ಕಾರಣವೆನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬಾಬು ಭಯ್ಯಾ ಪಾತ್ರ ನಿರ್ವಹಿಸಲು ಪರೇಶ್ ರಾವಲ್ 15 ಕೋಟಿ ಸಂಭಾವನೆಯನ್ನು ಕೇಳಿದ್ದರು, ಆ ಪೈಕಿ 11 ಲಕ್ಷ ಹಣವನ್ನು ಅವರಿಗೆ ಅಡ್ವಾನ್ಸ್ ರೂಪದಲ್ಲಿ ನೀಡಲಾಗಿತ್ತು ಕೂಡ.
ಆದರೆ .. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಬಾಕಿ ಉಳಿದ 14.89 ಕೋಟಿ ಹಣವನ್ನು ಚಿತ್ರ ಬಿಡುಗಡೆಯಾದ ಒಂದು ತಿಂಗಳ ನಂತರ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು.
ಮುಂದಿನ ವರ್ಷದ ಆರಂಭದಲ್ಲಿ ಚಿತ್ರದ ಚಿತ್ರೀಕರಣವನ್ನು ಶುರು ಮಾಡಿ 2026ರ ಕೊನೆಯಲ್ಲಿ ಅಥವಾ 2027ರಲ್ಲಿ ಬಿಡುಗಡೆ ಮಾಡಲು ಬಯಸಿದ್ದರು. ಆದರೆ.. ಪರೇಶ್ ರಾವಲ್ 14.89 ಕೋಟಿ ಹಣಕ್ಕೆ ಒಂದು ವರ್ಷ ಕಾಯಲು ಸುತಾರಾಂ ತಯಾರಾಗಲಿಲ್ಲ.
ಹೀಗಾಗಿಯೇ ಹೇಳದೇ ಕೇಳದೇ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ನ್ಯೂಸ್ 18, NDTV ಸೇರಿ ಅನೇಕ ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಇದರ ನಡುವೆ ಇದೀಗ ಪರೇಶ್ ರಾವಲ್ ತಾವು ಪಡೆದಿದ್ದ ಹನ್ನೊಂದು ಲಕ್ಷ ಮುಂಗಡ ಹಣವನ್ನು ಬಡ್ಡಿ ಸಮೇತ ವಾಪಸ್ಸು ಮಾಡಿದ್ದಾರೆ. ಹೌದು, ಬಾಲಿವುಡ್ ಹಂಗಾಮಾ ವರದಿ ಮಾಡಿರುವಂತೆ ಪರೇಶ್ ರಾವಲ್ 15% ಬಡ್ಡಿಯ ಜೊತೆ ಹನ್ನೊಂದು ಲಕ್ಷ ಹಣವನ್ನು ಮರಳಿಸಿದ್ದಾರೆ. ಇಷ್ಟೇ ಅಲ್ಲದೇ ಹೇಳದೇ ಹಿಂದೆ ಸರಿದ ಕಾರಣದಿಂದ ಆದ ನಷ್ಟಕ್ಕೆ ಹೆಚ್ಚುವರಿ ಹಣವನ್ನು ಕೂಡ ಪರೇಶ್ ರಾವಲ್ ನೀಡಿದ್ದಾರೆ.
ಅಂದ್ಹಾಗೇ ಪರೇಶ್ ರಾವಲ್ ನೀಡಿದ ಈ ಶಾಕ್‌ದಿಂದ ಚಿತ್ರದ ನಿರ್ದೇಶಕ ಪ್ರಿಯದರ್ಶನ್ ಮುಂದೆ ಕಣ್ಣೀರು ಹಾಕಿದ್ದ ಅಕ್ಷಯ್ ಕುಮಾರ್, ತಮ್ಮ ನಡುವೆ ಇದ್ದ ಗೆಳೆತನವನ್ನು ಕೂಡ ಮರೆತು ಪರೇಶ್ ರಾವಲ್ ಅವರಿಗೆ 25 ಕೋಟಿ ಪರಿಹಾರ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದರು.
ಚಿತ್ರದ ಒಪ್ಪಂದಕ್ಕೆ ಸಹಿ ಹಾಕಿ, ಚಿತ್ರದ ಕೆಲ ಸನ್ನಿವೇಶಗಳಲ್ಲಿ ಕೂಡ ಭಾಗವಹಿಸಿ, ಹೇಳದೇ ಕೇಳದೇ ಚಿತ್ರದಿಂದ ಹೊರ ನಡೆದಿದ್ದು ವೃತ್ತಿಪರವಲ್ಲದ ನಡುವಳಿಕೆ ಎಂದು ಅಕ್ಷಯ್ ಕುಮಾರ್ ತಮ್ಮ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು.
ಇನ್ನು ಈ ವಿವಾದದ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದ ಸುನೀಲ್ ಶೆಟ್ಟಿ, ಚಿತ್ರದಿಂದ ಪರೇಶ್ ರಾವಲ್ ನಿರ್ಗಮಿಸಿದ್ದು ಯಾಕೆ ಎನ್ನುವುದು ನನಗೆ ಗೊತ್ತಿಲ್ಲ, ಪರೇಶ್ ರಾವಲ್ ನಿರ್ಧಾರದಿಂದ ನನಗೂ ಆಘಾತವಾಗಿದೆ, ಪರೇಶ್ ಇರದ ಹೇರಾ ಫೇರಿಯನ್ನು ಊಹಿಸಿಕೊಳ್ಳೋದು ಕೂಡ ಕಷ್ಟ ಎಂದು ಹೇಳಿದ್ದರು. ಚಿತ್ರ ಆಗದಿದ್ದರೂ ಪರವಾಗಿಲ್ಲ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಡುವಿನ ಸಂಬಂಧ ಇದರಿಂದ ಹಾಳಾಗಬಾರದು ಎಂದಿದ್ದರು.


Click it and Unblock the Notifications











