Parineeti Chopra: ನಟಿ ಪರಿಣಿತಿ ಚೋಪ್ರಾ ಧರಿಸಿದ್ದು 2,500 ಗಂಟೆಗಳ ಕಾಲ ಮುತ್ತು, ಚಿನ್ನದ ಜರಿಗಳಿಂದ ತಯಾರಾಗಿದ್ದ ಲೆಹೆಂಗಾ!
ಸೆಪ್ಟೆಂಬರ್ 24 ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರೊಂದಿಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದಲ್ಲಿ ದಂತದ ಗೊಂಬೆಯಂತೆ ಕಾಣುತ್ತಿದ್ದ ಅವರ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿದ್ದು, ಮನೀಶ್ ಮಲ್ಹೋತ್ರಾ ಅವರ ಲೆಹೆಂಗಾ ಮತ್ತು ಆಭರಣಗಳು!
ಮನೀಶ್ ಮಲ್ಹೋತ್ರಾ ಅವರ ಲೆಹೆಂಗಾ ಮತ್ತು ಆಭರಣಗಳಲ್ಲಿ ಪರಿಣಿತಿ ಚೋಪ್ರಾ ಕನಸಿನ ರಾಣಿಯಂತೆ ಕಂಗೊಳಿಸಿದ್ದಾರೆ. ಮದುವೆ ಫೋಟೋಗಳನ್ನು ಪರಿಣಿತಿ Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ನಟಿಯ ಲೆಹೆಂಗಾ ಮತ್ತು ರಾಘವ್ ಅವರ ಶೆರ್ವಾನಿ ಗಮನ ಸೆಳೆಯುತ್ತಿದೆ.

104 ದಿನ ತೆಗೆದುಕೊಂಡ ಲೆಹೆಂಗಾ!
ಈಗ, ಪರಿಣಿತಿ ಚೋಪ್ರಾ ಅವರಿಗೆ ವಧುವಿನ ಲೆಹೆಂಗಾವನ್ನು ತಯಾರು ಮಾಡಲು ಸುಮಾರು 2,500 ಗಂಟೆಗಳನ್ನು ತೆಗೆದುಕೊಂಡಿತು ಎಂದು ಮನೀಶ್ ಮಲ್ಹೋತ್ರಾ ಬಹಿರಂಗಪಡಿಸಿದ್ದಾರೆ. ಅಂದರೆ ಬರೋಬ್ಬರೀ 104 ದಿನಗಳು!. ಹೌದು.... ಲೆಹೆಂಗಾದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಧು ಪರಿಣಿತಿ ಚೋಪ್ರಾ ಧರಿಸಿರುವ ಪೀಚ್ ಕಲರ್ ಲೆಹೆಂಗಾ ಸೆಟ್ ಅನ್ನು ಕೈಯಿಂದ ಚಿನ್ನದ ದಾರಗಳನ್ನು ಬಳಸಿ ಸಂಕೀರ್ಣವಾದ ಕಸೂತಿಯನ್ನು ಮಾಡಲಾಗಿದೆ. ಜ್ಯಾಮಿತೀಯ ಮಾದರಿಗಳಲ್ಲಿ ಈ ಕಸೂತಿ ಮಾಡಲಾಗಿದೆ. ಇದರಲ್ಲಿ ಕನ್ನಡಿ, ಮೆಟಲ್ ಮತ್ತು ಸುಂದರವಾದ ಮುತ್ತುಗಳನ್ನು ಜೋಡಿಸಲಾಗಿದೆ.

ಡಿಸೈನರ್ ಮನೀಶ್ ಮಲ್ಹೋತ್ರಾ, ಪರಿಣಿತಿಗಾಗಿ ವಿಶೇಷವಾಗಿ ದುಪ್ಪಟ್ಟಾಗಳನ್ನು ಡಿಸೈನ್ ಮಾಡಿದ್ದರು. ಎರಡು ದುಪ್ಪಟ್ಟಾಗಳನ್ನು ಪರಿಣಿತಿ ಚೋಪ್ರಾ ಧರಿಸಿದ್ದರು. ಒಂದನ್ನು ಕುತ್ತಿಗೆ ಮತ್ತು ಎದೆಯ ಮೇಲೆ ಸಾಮಾನ್ಯ ದುಪಟ್ಟಾದಂತೆ ಧರಿಸಿದ್ದರು ಮತ್ತು ಇನ್ನೊಂದನ್ನು ಅವರು ತಲೆಯ ಮೇಲಿನಿಂದ ಇಳಿ ಬಿಟ್ಟಿದ್ದರು. ಇದರಲ್ಲಿ ಗಮನಿಸಬೇಕಾಗಿರುವುದು ಆ ದುಪ್ಪಟ್ಟಾದ ಹಿಂಭಾಗದಲ್ಲಿ 'ರಾಘವ್' ಎಂದು ಚಿನ್ನದ ಜರಿಯಲ್ಲಿ ದೇವನಾಗರಿ ಲಿಪಿಯಲ್ಲಿ ಕಸೂತಿ ಮಾಡಲಾಗಿತ್ತು. ಬ್ಲೌಸ್ ಕುರಿತು ಹೇಳುವುದಾದರೆ, ಲೆಹೆಂಗಾದಂತೆ ಚಿನ್ನದ ಜರಿಗಳನ್ನು ಹೊಂದಿದ್ದ ಬ್ಲೌಸ್‌ನಲ್ಲಿ ಸ್ವಲ್ಪ ದೊಡ್ಡದಾದ ಮುತ್ತುಗಳನ್ನು ಪೋಣಿಸಲಾಗಿತ್ತು.
ನಟಿ ಪರಿಣಿತಿ ಚೋಪ್ರಾ ಆಭರಣಗಳು
ಮನೀಶ್ ಮಲ್ಹೋತ್ರಾ ವರ್ಲ್ಡ್‌ನ ಅಧಿಕೃತ ಹ್ಯಾಂಡಲ್‌ನಲ್ಲಿ ಆಭರಣದ ವಿವರಗಳನ್ನು ಹಂಚಿಕೊಂಡ ಡಿಸೈನರ್, "ನಮ್ಮ ಮನೀಶ್ ಮಲ್ಹೋತ್ರಾ ಜ್ಯುವೆಲರಿ ನೆಕ್ಲೇಸ್ ಅನ್ನು ಅಚ್ಚುಕಟ್ಟಾಗಿ, ಅನ್‌ಕಟ್‌ಗಳು, ಜಾಂಬಿಯನ್ ಮತ್ತು ರಷ್ಯನ್ ಪಚ್ಚೆಗಳನ್ನು ಹಾಕಿ ಮುದ್ದಾಗಿ ಜೋಡಿಸಲಾಗಿದೆ.
ಕಿವಿಯೋಲೆಗಳು, ಮಾಂಗ್ ಟಿಕ್ಕಾ (ಬೈತಲೆ ಬೊಟ್ಟು) ಮತ್ತು ಹಾತ್‌ಫೂಲ್ (ಬೆರಳಿನಿಂದ ಬಳೆ ಅಥವಾ ಬ್ರೆಸ್‌ಲೈಟ್‌ಗೆ ಜೋಡಿಸಿರುವ ಆಭರಣ) ಅನ್‌ಕಟ್‌ಗಳು, ವಜ್ರಗಳು ಮತ್ತು ರಷ್ಯಾದ ಪಚ್ಚೆಗಳನ್ನು ಬಳಸಿಕೊಂಡು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮನೀಶ್ ಮಲ್ಹೋತ್ರಾ ಹೇಳಿದ್ದಾರೆ. ಇದರ ಜೊತೆಗೆ ಪರಿಣಿತಿ ತಿಳಿ ಗುಲಾಬಿ ಬಣ್ಣದ ಬಳೆ ಸೆಟ್ ಮತ್ತು ಮೃಣಾಲಿನಿ ಚಂದ್ರ ವಿನ್ಯಾಸಗೊಳಿಸಿದ ವಿಶೇಷ ಕಸ್ಟಮೈಸ್ ಮಾಡಿದ ಕಲೀರಾಗಳನ್ನು (ಉತ್ತರ ಭಾರತದಲ್ಲಿ ಮದುಮಗಳು ಬಳೆಗಳ ಜೊತೆಯಲ್ಲಿ ಧರಿಸುವ ಆಭರಣ) ಧರಿಸಿದ್ದರು.
ಮೇಕಪ್ ಮತ್ತು ಹೇರ್ ಸ್ಟೈಲ್
ಪರಿಣಿತಿ ಸಿಂಪಲ್ ಮತ್ತು ನ್ಯಾಚುರಲ್ ಆಗಿ ಕಾಣುವ ಮೇಕಪ್ ಮಾಡಿಸಿಕೊಂಡಿದ್ದರು. ಕೂದಲನ್ನು ಕಟ್ಟದೆ ಹಾಗೆಯೇ ಬಿಟ್ಟಿದ್ದರು. ತುಟಿಗಳಿಗೆ ನ್ಯೂಡ್ ಲಿಪ್‌ಸ್ಟಿಕ್ ಮತ್ತು ಕಣ್ಣುಗಳಿಗೆ ತಿಳಿಯಾದ ಮೇಕಪ್ ಮಾಡಲಾಗಿತ್ತು. ವರ ರಾಘವ್ ಚಡ್ಡಾ ಅವರು ದಂತದ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ದಾರೆ.


Click it and Unblock the Notifications











