ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ನಾಲ್ಕು ಗೋಡೆಗಳ ನಡುವೆ ಕುಳಿತುಕೊಂಡು ರಾಜಕೀಯ ಮಾಡುವವರು ತುಂಬಾ ಜನ ಇದ್ದಾರೆ. ಜನರ ಜೊತೆ ಬೆರೆಯದೇ ತಮ್ಮ ನಿಲುವು-ನಿರ್ಧಾರವನ್ನು ಜನ ಸಾಮಾನ್ಯರ ಮೇಲೆ ಹೇರುವ ಪ್ರಯತ್ನ ಮಾಡುತ್ತಾರೆ. ಸಾಮಾನ್ಯ ಜನರ ನೋವು-ಕಷ್ಟ-ಬವಣೆ ಹಲವು ರಾಜಕಾರಣಿಗಳಿಗೆ ಅರ್ಥವೇ ಆಗುವುದಿಲ್ಲ. ಬಿಸಿಲಿನ ತಾಪ ತಿಳಿಯಬೇಕಾದರೆ ಮರದ ನೆರಳಿನಿಂದ ಹೊರಬರಬೇಕು ಎಂಬ ಮಾತಿದೆ. ಆದರೆ ಈ ಮಾತನ್ನು ಪಾಲಿಸುವವರ ಸಂಖ್ಯೆ ರಾಜಕೀಯ ರಂಗದಲ್ಲಿ ತುಂಬಾ ಕಡಿಮೆ ಇದೆ.
ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಜನರ ಕಷ್ಟಕ್ಕೆ ಮರಗುತ್ತಾರೆ. ಬೆವರು ಸುರಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಹೋರಾಡುವ ಪ್ರಯತ್ನವನ್ನು ಮಾಡುತ್ತಾರೆ. ಈ ಸಾಲಿಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಗಂಡ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೂಡ ಸೇರುತ್ತಾರಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಸದ್ಯ ರಾಘವ್ ಚಡ್ಡಾ ಅವರ ಒಂದು ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಹೌದು, ಇತ್ತೀಚೆನ ದಿನಗಳಲ್ಲಿ ಗಿಗ್ ಕಾರ್ಮಿಕರು ಅಂದರೆ ಉಬರ್.. ಸ್ವಿಗ್ಗಿ.. ಜೊಮ್ಯಾಟೋ.. ಮುಂತಾದ ವೇದಿಕೆಗಳ ಮೂಲಕ ಆಹಾರ ತಲುಪಿಸುವ ಕೆಲಸಗಾರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹತ್ತು ನಿಮಿಷಗಳಲ್ಲಿ ಡೆಲಿವರಿ ನೀಡಬೇಕೆಂಬ ಉದ್ದೇಶದಲ್ಲಿ ಹಲವರ ಪ್ರಾಣಕ್ಕೆ ಕುತ್ತು ಎದುರಾಗುತ್ತಿದೆ.
ಇನ್ನೂ ಸಂಪಾದನೆ ಕೂಡ ಅಷ್ಟಕಷ್ಟೇ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಮಾಂಶು ಎಂಬ ಬ್ಲಿಂಕಿಟ್ ಡೆಲಿವರಿ ಬಾಯ್ ಹಿಮಾಂಶು 15 ಗಂಟೆಗಳ ಕಾಲ ಬೆವರು ಸುರಿಸಿ 28 ಡೆಲಿವರಿಗಳನ್ನು ಮಾಡಿದರು ಕೂಡ 762.57 ರೂಪಾಯಿ ಮಾತ್ರ ಇವರಿಗೆ ಸಿಕ್ಕಿತ್ತು. ಇವರ ಈ ನೋವಿನ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.
ಇದರ ಬೆನ್ನಲ್ಲೇ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಗಿಗ್ ಕಾರ್ಮಿಕರ ಪರವಾಗಿ ರಾಘವ್ ಚಡ್ಡಾ ಧ್ವನಿ ಎತ್ತಿದ್ದರು. ಕಡಿಮೆ ವೇತನ.. ದೀರ್ಘವಾದ ಕೆಲಸದ ಅವಧಿ.. ಸಾಮಾಜಿಕ ಭದ್ರತೆ.. ಕುರಿತು ಮಾತನಾಡಿದ್ದರು. ಇಷ್ಟೇ ಅಲ್ಲ ಗಿಗ್ ಕಾರ್ಮಿಕರಿಗಾಗಿ ಪ್ರತಿಭಟನೆಯನ್ನು ಕೂಡ ಮಾಡಿದ್ದ ರಾಘವ್ ಚಡ್ಡಾ ಹತ್ತು ನಿಮಿಷದಲ್ಲಿ ಡೆಲಿವರಿ ಎಂಬ ಘೋಷವಾಕ್ಯ ಮತ್ತು ಆಯ್ಕೆಯನ್ನು ಕೂಡ ತೆಗೆದು ಹಾಕುವಂತೆ ಒತ್ತಾಯ ಮಾಡಿದ್ದರು. ಸುಮಾರು 40,000ಜನ ಇವರ ಈ ಹೋರಾಟದಲ್ಲಿ ಧ್ವನಿಗೂಡಿಸಿದ್ದರು.
ಇದೀಗ ಇನ್ನೊಂದು ಹೆಜ್ಜೆಯನ್ನು ಮುಂದಿಟ್ಟಿರುವ ರಾಘವ್ ಚಡ್ಡಾ ತಾವೇ ಖುದ್ದು ಬ್ಲಿಂಕಿಟ್ ಡೆಲಿವರಿ ಬಾಯ್ ಆಗಿದ್ದಾರೆ. ಈ ಮೂಲಕ ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ಈ ಪ್ರಯತ್ನದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಘವ್ ಚಡ್ಡಾ ಬೋರ್ಡ್‌ರೂಮ್‌ಗಳಿಂದ ದೂರ ಉಳಿದು, ಗಿಗ್ ಕಾರ್ಮಿಕರು ನಿತ್ಯ ಅನುಭವಿಸುವ ನೋವು ಮತ್ತು ಅವರ ದಿನವನ್ನು ಬದುಕಿದ್ದೇನೆ ಎಂದು ಬರೆದುಕೊಂಡಿದ್ಧಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ರಾಗ್-ನೀತಿ" (ರಾಘವ್ ಚಡ್ಡಾ-ಪರಿಣಿತಿ ಚೋಪ್ರಾ) ಅಭಿಮಾನಿಗಳು ರಾಘವ್ ಅವರ ಈ ಸರಳತೆಯನ್ನು ಕಂಡು ಬೆರಗಾಗಿದ್ದಾರೆ. ತಮ್ಮ ನೆಚ್ಚಿನ ನಾಯಕಿ ಪರಿಣಿತಿ ಚೋಪ್ರಾ ಅವರ ಪತಿಯ ಸರಳತೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ಧಾರೆ.
ರಾಘವ್ ಚಡ್ಡಾ ಅವರ ಈ 'ಸ್ಟೇ ಟ್ಯೂನ್ಡ್' ಟೀಸರ್ ನೋಡಿದ ಹಲವರಿಗೆ ಗ್ರಾಹಕರ ಮನೆ ಬಾಗಿಲಿಗೆ ಹೋದಾಗ ರಾಘವ್ ಚಡ್ಡಾ ಅವರಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎನ್ನುವ ಕುತೂಹಲ ಸದ್ಯ ಕಾಡುತ್ತಿದೆ. ಇನ್ನೂ ಕೆಲವರು ಇದೆಲ್ಲ ಕೇವಲ ಪಬ್ಲಿಸಿಟಿ ಗಿಮಿಕ್ ಟೀಕಿಸಿದರೂ ಕೂಡ ಒಬ್ಬ ಸಂಸದ-ರಾಜಕಾರಣಿ ಜನಸಾಮಾನ್ಯರ ಕಷ್ಟಗಳನ್ನು ಆಲಿಸುವುದು, ಜನಸಾಮಾನ್ಯರ ನಡುವೆ ಬರುವುದೇ ಅಪರೂಪವಾಗಿರುವ ಈ ಸಮಯದಲ್ಲಿ ರಾಘವ್ ಚಡ್ಡಾ ಅವರ ಈ ನಡೆ ಮೆಚ್ಚುಗೆಗೆ ಅರ್ಹವಾದದ್ದು ಎಂಬ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











