ಕರ್ನಾಟಕದಲ್ಲಿ 40 ಕೋಟಿ ಕ್ಲಬ್ ಸೇರಿದ ಪಠಾಣ್; ರಾಜ್ಯದಲ್ಲಿ 40 ಕೋಟಿಗೂ ಅಧಿಕ ಗಳಿಸಿದ ಪರಭಾಷಾ ಚಿತ್ರಗಳಿವು
ಕಳೆದ ತಿಂಗಳು ಗಣರಾಜ್ಯೋತ್ಸವದ ಹಿಂದಿನ ದಿನ ( ಜನವರಿ 25 ) ಬಿಡುಗಡೆಗೊಂಡ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಾಯಕ - ನಾಯಕಿಯಾಗಿ ಕಾಣಿಸಿಕೊಂಡಿದ್ದ ಪಠಾಣ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಗೊಂಡ 23 ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ಪಠಾಣ್ ಯಶಸ್ವಿ ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ.
ಈ ಮಟ್ಟಗಿನ ಗಳಿಕೆ ಮಾಡುತ್ತಿರುವ ಪಠಾಣ್ ಸಿನಿಮಾ ಕಳೆದ ನಾಲ್ಕು ವರ್ಷಗಳ ಹಿಂದೆ ಹೀನಾಯವಾಗಿ ಸೋತಿದ್ದ ಶಾರುಖ್ ಖ್ಯಾನ್‌ಗೆ ಕಮ್‌ಬ್ಯಾಕ್ ಮಾಡಲು ಸಿಕ್ಕ ಸರಿಯಾದ ವೇದಿಕೆಯಾಗಿದ್ದರೆ, ಯಾವುದೇ ಸ್ಟಾರ್ ನಟರ ಚಿತ್ರಗಳೂ ಸಹ ಗೆಲ್ಲದೇ ಮಕಾಡೆ ಮಲಗಿದ್ದ ಬಾಲಿವುಡ್‌ಗೂ ಸಹ ಈ ಚಿತ್ರ ಮರು ಜೀವ ನೀಡಿದೆ.
ಇನ್ನು ಪಠಾಣ್ ಚಿತ್ರ ಉತ್ತರ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಸಹ ಕೋಟಿ ಕೋಟಿ ಬಾಚಿ ಪ್ರಾದೇಶಿಕ ಚಿತ್ರಗಳಿಗೂ ಸಹ ಟಕ್ಕರ್ ಕೊಟ್ಟಿದೆ. ಅದರಲ್ಲಿಯೂ ಎಲ್ಲಾ ಭಾಷೆಯ ಸಿನಿಮಾಗಳನ್ನೂ ಸಹ ವೀಕ್ಷಿಸುವ ಸಿನಿ ರಸಿಕರನ್ನು ಹೊಂದಿರುವ ಕರ್ನಾಟಕದಲ್ಲಿ ಪಠಾಣ್ ಮೊದಲನೇ ದಿನವೇ 6.40 ಕೋಟಿ ಗಳಿಕೆ ಮಾಡುವ ಮೂಲಕ ದೊಡ್ಡ ಓಪನಿಂಗ್ ಪಡೆದುಕೊಂಡಿತ್ತು. ಹೀಗೆ ಮೊದಲ ದಿನವೇ ರಾಜ್ಯದಲ್ಲಿ ಅಬ್ಬರಿಸಿದ್ದ ಪಠಾಣ್ ಇದೀಗ 25 ದಿನಗಳನ್ನು ಪೂರೈಸಿದ್ದು, 40 ಕೋಟಿ ಕ್ಲಬ್ ಸೇರಿದೆ. ಹೌದು, ಪಠಾಣ್ ರಾಜ್ಯದಲ್ಲಿ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಕರ್ನಾಟಕದಲ್ಲಿ 40 ಕೋಟಿ ಕ್ಲಬ್ ಸೇರಿದ ಐದನೇ ಪರಭಾಷಾ ಸಿನಿಮಾ ಎನಿಸಿಕೊಂಡಿದೆ. ಹಾಗಾದರೆ ಕರ್ನಾಟಕದಲ್ಲಿ 40 ಕೋಟಿ ಕ್ಲಬ್ ಸೇರಿರುವ ಪರಭಾಷಾ ಸಿನಿಮಾಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕರ್ನಾಟಕದಲ್ಲಿ 40 ಕೋಟಿ ಗಳಿಸಿದ ಪರಭಾಷಾ ಸಿನಿಮಾಗಳು
ಮೊದಲಿಗೆ ಕರ್ನಾಟಕ ರಾಜ್ಯದಲ್ಲಿ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಪರಭಾಷಾ ಚಿತ್ರ ಎಂಬ ವಿಶೇಷ ದಾಖಲೆಯ ಮೈಲಿಗಲ್ಲನ್ನು ನೆಟ್ಟದ್ದು ನಿರ್ದೇಶನ ಎಸ್ ಎಸ್ ರಾಜಮೌಳಿ ಅವರ ಬಾಹುಬಲಿ ದ ಬೆಗಿನಿಂಗ್ ಚಿತ್ರ. ಈ ಚಿತ್ರದ ಬಳಿಕ ಬಾಹುಬಲಿ ದ ಕನ್‌ಕ್ಲೂಷನ್, ರಜನಿಕಾಂತ್ ನಟನೆಯ ರೋಬೊ 2.0 ಹಾಗೂ ಆರ್ ಆರ್ ಆರ್ ಚಿತ್ರಗಳು ಸಹ ಕರ್ನಾಟಕ ಬಾಕ್ಸ ಆಫೀಸ್‌ನಲ್ಲಿ 40 ಕೋಟಿ ಕ್ಲಬ್ ಸೇರಿವೆ. ಇದೀಗ ಈ ಪಟ್ಟಿಗೆ ಪಠಾಣ್ ಚಿತ್ರ ನೂತನವಾಗಿ ಸೇರ್ಪಡೆಗೊಂಡಿದೆ.

ಮೊದಲ ಹಿಂದಿ ಚಿತ್ರ ಎಂಬ ದಾಖಲೆ
ಇನ್ನು ಕರ್ನಾಟಕದಲ್ಲಿ 40 ಕೋಟಿಗಿಂತ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಮೊದಲ ಹಿಂದಿ ಚಿತ್ರ ಎಂಬ ದಾಖಲೆಯನ್ನು ಪಠಾಣ್ ಮಾಡಿದೆ. ಬೆಂಗಳೂರು ಹಾಗೂ ಮೈಸೂರು ಬಾಕ್ಸ್ ಆಫೀಸ್‌ನಲ್ಲಿ ಪಠಾಣ್ ದಾಖಲೆಯ ಗಳಿಕೆಯನ್ನು ಮಾಡಿದ್ದು, ಈ ವಿಶೇಷ ಮೈಲಿಗಲ್ಲನ್ನು ನೆಟ್ಟು ದಾಖಲೆ ಮಾಡಲು ಕಾರಣವಾಗಿದೆ.

ರಾಜಮೌಳಿ ಸಿನಿಮಾಗಳ ದರ್ಬಾರ್
ಈ ದಾಖಲೆಯಲ್ಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಪಾರುಪತ್ಯ ಮೆರೆದಿದ್ದಾರೆ. ಟಾಪ್ 5 ಚಿತ್ರಗಳ ಈ ಪಟ್ಟಿಯಲ್ಲಿ ಮೂರು ಚಿತ್ರಗಳು ಎಸ್ ಎಸ್ ರಾಜಮೌಳಿ ಅವರದ್ದೇ ಆಗಿದ್ದು, ಟಾಪ್ 2 ಸ್ಥಾನಗಳನ್ನೂ ಸಹ ಇವರ ನಿರ್ದೇಶನದ ಚಿತ್ರಗಳೇ ಆವರಿಸಿಕೊಂಡಿವೆ. ಇನ್ನು ಕೊರೊನಾ ಸಮಯದಲ್ಲಿ ತೆರೆಕಂಡ ಆರ್ ಆರ್ ಆರ್ ಸಹ ಈ ಮೈಲಿಗಲ್ಲನ್ನು ಮುಟ್ಟಿರುವುದು ರಾಜ್ಯದಲ್ಲಿ ಮೌಳಿ ಸಿನಿಮಾಗಳಿಗೆ ಇರುವ ಬೇಡಿಕೆಗೆ ಹಿಡಿದ ಕೈಗನ್ನಡಿಯಾಗಿದೆ.


Click it and Unblock the Notifications











