ಭಾರತದಲ್ಲಿ 515 ಕೋಟಿ ದಾಟಿದ ಪಠಾಣ್ ಕೆಜಿಎಫ್ 2, ಆರ್‌ಆರ್‌ಆರ್ ಹಿಂದಿಕ್ಕಲು ಇನ್ನೆಷ್ಟು ಗಳಿಸಬೇಕು?
ಸದ್ಯ ಭಾರತದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವ ಚಿತ್ರ ಪಠಾಣ್. ಬರೋಬ್ಬರಿ ನಾಲ್ಕು ವರ್ಷಗಳ ಸುದೀರ್ಘ ಅಂತರದ ಬಳಿಕ ಬಿಡುಗಡೆಯಾದ ಶಾರುಖ್ ಖಾನ್ ಮುಖ್ಯ ಭೂಮಿಕೆಯ ಚಿತ್ರ ಪಠಾಣ್ ದೇಶದಾದ್ಯಂತ ಇತರೆ ಚಿತ್ರಗಳಿಗೆ ತೀವ್ರ ಪೈಪೋಟಿ ನೀಡುತ್ತಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ.
ಜನವರಿ 25ರಂದು ಬಿಡುಗಡೆಗೊಂಡ ಈ ಚಿತ್ರ ಯಾವುದೇ ರಜಾದಿನವಲ್ಲದಿದ್ದರೂ ಆ ದಿನ ವಿಶ್ವದಾದ್ಯಂತ 106 ಕೋಟಿ ಗಳಿಕೆ ಮಾಡುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಹೀಗೆ ದೊಡ್ಡ ಓಪನಿಂಗ್ ಪಡೆದುಕೊಂಡ ಪಠಾಣ್ ಶಾರುಖ್ ಖಾನ್‌ಗೆ ಕಮ್‌ಬ್ಯಾಕ್ ಸಿನಿಮಾವಾಗಿದ್ದು, ಬಾಲಿವುಡ್‌ಗೆ ಹೊಸ ಆಶಾಕಿರಣವಾಗಿ ನಿಂತಿದೆ ಎನ್ನಬಹುದು.
ಹೌದು, ಕಳೆದ ವರ್ಷ ತೆರೆಕಂಡ ಅದೆಷ್ಟೋ ಬಾಲಿವುಡ್ ಸ್ಟಾರ್ ನಟರ ಚಿತ್ರಗಳು ಲಾಭ ಗಳಿಸುವಷ್ಟು ಗಳಿಕೆಯನ್ನು ಮಾಡಲಾಗದೇ ಸೋತು ಸುಣ್ಣವಾಗಿದ್ದವು, ಬಾಯ್‌ಕಟ್ ಕೆಂಗಣ್ಣಿಗೆ ಸಿಲುಕಿರುವ ಬಾಲಿವುಡ್ ಕಥೆ ಮುಕ್ತಾಯವಾದಂತೆ ಎಂದು ಟ್ರೋಲ್‌ಗಳು ಹರಿದಾಡಿದ್ದವು. ಆದರೆ ಈ ಎಲ್ಲಾ ವಿರೋಧಗಳನ್ನು ಮೆಟ್ಟಿ ನಿಂತ ಪಠಾಣ್ ಬ್ಲಾಕ್‌ಬಸ್ಟರ್ ಸಿನಿಮಾವಾಗಿದೆ. ಬಿಡುಗಡೆಯಾದ ಹನ್ನೆರಡು ದಿನಗಳಲ್ಲಿ ಭಾರತ ಬಾಕ್ಸ್ ಆಫೀಸ್ ಒಂದರಲ್ಲಿಯೇ ಬರೋಬ್ಬರಿ 515 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿರುವ ಪಠಾಣ್ ಸಿನಿಮಾ ಇತಿಹಾಸದಲ್ಲಿ ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ಹಂತಕ್ಕೆ ಏರಿರುವ ಪಠಾಣ್ ಇತ್ತೀಚೆಗಿನ ಬಾಕ್ಸ್ ಆಫೀಸ್ ರೂಲರ್ಸ್ ಕೆಜಿಎಫ್ 2 ಹಾಗೂ ಆರ್‌ಆರ್‌ಆರ್ ಚಿತ್ರಗಳ ಮೈಲಿಗಲ್ಲನ್ನು ಹಿಂದಿಕ್ಕಲು ಇನ್ನೂ ಎಷ್ಟು ಗಳಿಸಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕೆಜಿಎಫ್ 2 ಹಾಗೂ ಆರ್‌ಆರ್‌ಆರ್ ಕಲೆಕ್ಷನ್ ಹಿಂದಿಕ್ಕಲು ಎಷ್ಟು ಗಳಿಸಬೇಕು?
ಇನ್ನು ಪಠಾಣ್ ಭಾರತದ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಈ ಚಿತ್ರ ಕೆಜಿಎಫ್ 2 ಹಾಗೂ ಆರ್‌ಆರ್‌ಆರ್ ಚಿತ್ರಗಳ ಭಾರತದ ಕಲೆಕ್ಷನ್ ಅನ್ನು ಹಿಂದಿಕ್ಕಲು ಇನ್ನೆಷ್ಟು ಗಳಿಸಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಸದ್ಯ 515 ಕೋಟಿ ರೂಪಾಯಿಗಳನ್ನು ಗಳಿಸಿರುವ ಪಠಾಣ್ ಭಾರತದಲ್ಲಿ ಆರ್‌ಆರ್‌ಆರ್ ಚಿತ್ರದ ಕಲೆಕ್ಷನ್ ಹಿಂದಿಕ್ಕಲು ಇನ್ನೂ 401 ಕೋಟಿ ರೂಪಾಯಿಗಳನ್ನು ಗಳಿಸಬೇಕಿದೆ ಹಾಗೂ ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಬೇಕೆಂದರೆ ಇನ್ನೂ 506 ಚಿತ್ರಗಳನ್ನು ಗಳಿಸಬೇಕಿದೆ. ಆರ್‌ಆರ್‌ಆರ್ ಭಾರತದಲ್ಲಿ 1021 ಕೋಟಿ ರೂಪಾಯಿ ಗಳಿಸಿದ್ದರೆ. ಕೆಜಿಎಫ್ ಚಾಪ್ಟರ್ 2 ಭಾರತದಲ್ಲಿ 1021 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು.

ಭಾರತ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು
ಭಾರತದ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಟಾಪ್ 5 ಚಿತ್ರಗಳ ಪಟ್ಟಿ ಇಲ್ಲಿದೆ..
1. ಬಾಹುಬಲಿ 2 - 1430 ಕೋಟಿ ರೂಪಾಯಿ ಗ್ರಾಸ್
2. ಕೆಜಿಎಫ್ ಚಾಪ್ಟರ್ 2 - 1021 ಕೋಟಿ ರೂಪಾಯಿ ಗ್ರಾಸ್
3. ಆರ್‌ಆರ್‌ಆರ್ - 916.75 ಕೋಟಿ ರೂಪಾಯಿ ಗ್ರಾಸ್
4. ರೋಬೊ 2.0 - 552 ಕೋಟಿ ರೂಪಾಯಿ ಗ್ರಾಸ್
5. ಪಠಾಣ್ - 515 ಕೋಟಿ ರೂಪಾಯಿ ಗ್ರಾಸ್

ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 800 ಕೋಟಿ ಕ್ಲಬ್ ಸೇರಿದ ಪಠಾಣ್
ಇನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 12 ದಿನಗಳಲ್ಲಿ 832 ಕೋಟಿ ಗಳಿಕೆ ಮಾಡಿರುವ ಪಠಾಣ್ ಚಿತ್ರ ಭಾರತದಲ್ಲಿ 515 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ, ವಿದೇಶದಲ್ಲಿ 317 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದಲ್ಲಿ ಅತಿಹೆಚ್ಚು ಗಳಿಸಿದ ಹಿಂದಿ ಚಿತ್ರ ಎಂಬ ದಾಖಲೆ ಬರೆದಿರುವ ಪಠಾಣ್ ಸದ್ಯ ಬಾಲಿವುಡ್ ಪಾಲಿನ ಸ್ಥಳೀಯ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ.


Click it and Unblock the Notifications











