ಬಾಲಿವುಡ್ ಅಂಗಳಕ್ಕೆ ಜಿಗಿದ ಪವನ್ ಒಡೆಯರ್: ಸದ್ದಿಲ್ಲದೇ ಸೆಟ್ಟೇರಿದೆ ಕಾಮಿಡಿ ಎಂಟರ್‌ಟೈನರ್ ‘ನೋಟರಿ’
ಕನ್ನಡ ಕಲಾವಿದರು, ತಂತ್ರಜ್ಞರಿಗೆ ಬಾಲಿವುಡ್ ಹೊಸದೇನು ಅಲ್ಲ. ಇದೀಗ 'ಗೂಗ್ಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಬಿಟೌನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ(ಅಕ್ಟೋಬರ್ 5) ಅವರ ನೂತನ ಹಿಂದಿ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ 'ನೋಟರಿ' ಎಂಟು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಕಾಶ್ ಎಂಟಟೈನ್ಮೆಂಟ್ ಪ್ರೊಡಕ್ಷನ್ ಜೊತೆ ಒಡೆಯರ್ ಮೂವೀಸ್ ಮತ್ತು ಬೌಂಡ್ ಲೆಸ್ ಮೀಡಿಯಾ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.
ಕನ್ನಡದಲ್ಲಿ 'ಗೂಗ್ಲಿ', 'ನಟಸಾರ್ವಭೌಮ', 'ರಣವಿಕ್ರಮ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಪವನ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ 'ಡೊಳ್ಳು' ಸಿನಿಮಾ ಮೂಲಕ ಪವನ್ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಚೊಚ್ಚಲ ನಿರ್ಮಾಣದ 'ಡೊಳ್ಳು' ರಾಷ್ಟ್ರಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಸದ್ದು ಮಾಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪವನ್ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಬೆಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಪರಂಬ್ರತಾ ಚಟ್ಟೋಪಾಧ್ಯಾಯ 'ನೋಟರಿ' ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ 'ನೋಟರಿ' ಸಿನಿಮಾ ಬಹಳ ಕುತೂಹಲ ಕೆರಳಿಸಿದೆ. ಪವನ್ ಪ್ರತಿಭೆಯ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಬಹಳ ಬೇಗ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಪವನ್ ಅಷ್ಟೇ ಬೇಗ ಸೂಪರ್ ಸ್ಟಾರ್‌ಗಳ ಸಿನಿಮಾ ನಿರ್ದೇಶನ ಮಾಡಿದ್ದರು.

ಭೋಪಾಲ್‌ನಲ್ಲಿ ‘ನೋಟರಿ’ ಮುಹೂರ್ತ
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿಜಯದಶಮಿಯ ಶುಭ ದಿನದಂದು 'ನೋಟರಿ' ಸಿನಿಮಾ ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ಭೋಪಾಲ್‌ನಲ್ಲಿ 20 ದಿನಗಳ ಚಿತ್ರೀಕರಣ ನಂತರ ಮುಂಬೈನಲ್ಲಿ 'ನೋಟರಿ' ಸಿನಿಮಾ ಚಿತ್ರೀಕರಣ ನಡೆಯಲಿದೆ. ಕಥೆಗೆ ಸೂಕ್ತ ಕಲಾವಿದರನ್ನು ಪವನ್ ಆಯ್ಕೆ ಮಾಡಿಕೊಂಡಿದ್ದು, ಕಥೆ ಕೇಳಿ ಎಲ್ಲರು ನಟಿಸಲು ಒಪ್ಪಿದ್ದಾರೆ.

‘ನೋಟರಿ’ ಚಿತ್ರಕ್ಕೆ ಗೀತಾ ಬಸ್ರಾ ನಾಯಕಿ
'ಕಹಾನಿ', 'ಪರಿ' ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಪರಂಬ್ರತಾ ಚಟ್ಟೋಪಾಧ್ಯಾಯ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಕನ್ನಡದ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ. ನಾಯಕಿಯಾಗಿ ಕ್ರಿಕೆಟರ್ ಹರ್ ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸುತ್ತಿದ್ದಾರೆ. ಪರಂ ಅಭಿನಯದಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ್ದಾರೆ.

‘ನೋಟರಿ’ ಸಿನಿಮಾ ಕಥೆ ಏನು?
ಚಿತ್ರದ ನಾಯಕ ಎಂದೂ ಕೂಡ ಸುಳ್ಳು ಹೇಳುವುದಿಲ್ಲ. ಇದು ಅವನ ಜೀವನದ ಸಿದ್ದಾಂತವಾಗಿರುತ್ತೆ. ಆದ್ರೆ ಕೆಲಸ ಮಾಡುವ ಕ್ಷೇತ್ರ ನಿತ್ಯ ಒಂದಿಲ್ಲೊಂದು ಸುಳ್ಳು ಹೇಳುವಂತ ಪರಿಸ್ಥಿತಿಯನ್ನು ತಂದೊಡ್ಡುತ್ತಿರುತ್ತೆ. ಅಂತಹ ಸಂದರ್ಭಗಳು ಎದುರಾದಾಗ ಆತ ಸುಳ್ಳು ಹೇಳದೇ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತಲಿದ್ದು, ಇಡೀ ಸಿನಿಮಾ ಪ್ರೇಕ್ಷಕರನ್ನು ನಗಿಸಲಿದೆ.

‘ನೋಟರಿ’ ಚಿತ್ರದಲ್ಲಿ ಕನ್ನಡ ತಂತ್ರಜ್ಞರು
ಚಿತ್ರಕ್ಕೆ ಕಥೆ ಬರೆದು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ಪವನ್ ಒಡೆಯರ್ ಮತ್ತು ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಚಿತ್ರಕಥೆ ಚಿತ್ರಕ್ಕಿದೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ ನಿರ್ದೇಶನ 'ನೋಟರಿ' ಚಿತ್ರಕ್ಕಿರಲಿದೆ. ಕನ್ನಡ ತಂತ್ರಜ್ಞರನ್ನು ಬಳಸಿಕೊಂಡು ಪವನ್ ಹಿಂದಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ.


Click it and Unblock the Notifications











