ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
ಸುಶಾಂತ್ ಸಿಂಗ್ ರಜಪೂತ್, ನಿಮಗೆ ನೆನಪಿರಬೇಕು..? ಬಾಲಿವುಡ್‌ನ ಸ್ಪುರದ್ರೂಪಿ ನಾಯಕ. ಒಂದು ಕಾಲದಲ್ಲಿ ಬಾಲಿವುಡ್‌ನ ಬೆರಗುಗಣ್ಣಿಂದ ಅನೇಕರು ನೋಡುತ್ತಿದ್ದ ಸಮಯದಲ್ಲಿ.. ಬಿಹಾರದಿಂದ ಬಂದು, ಹಿಂದಿ ಉದ್ಯಮದ ಚಕ್ರವ್ಯೂಹ ಭೇದಿಸಿ ಸ್ಟಾರ್ ಆದ ಸುಶಾಂತ್ ಸಿಂಗ್ ರಜಪೂತ್, ನಾಲ್ಕು ವರ್ಷದ ಹಿಂದೆ ಸತ್ತು ಮಲಗಿದ್ದಾಗ.. ಕಣ್ಣೀರು ಹಾಕಿದವರಿಗಿಂತ, ಇವರ ಶವ ಇಟ್ಟುಕೊಂಡು ರಾಜಕೀಯ ಮಾಡಿದವರೇ ಹೆಚ್ಚು.

ಅವತ್ತು ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನ ಅನೇಕರು ಹೇಳಿದರು. ಮಾದಕ ಮಾಯಾಜಾಲ ಹೆಣೆದರು. ರಿಹಾ ಚಕ್ರಬೋರ್ತಿಯನ್ನ ಕಂಬಿ ಹಿಂದೆ ಕಳಿಸಿ ಸಂಭ್ರಮವನ್ನೂ ಪಟ್ಟರು. ಇನ್ನೂ ಅವತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ, ಟ್ರೆಂಡ್ ಆದ ಹ್ಯಾಶ್ ಟ್ಯಾಗ್ ಸಂಖ್ಯೆ ಲೆಕ್ಕಕ್ಕೆ ಇಲ್ಲ.
ಇವತ್ತು ಕೂಡ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಹಿಂದಿನ ಅಸಲಿ ಕಾರಣ ನಿಗೂಢವಾಗಿಯೇ ಉಳಿದಿದೆ. ಆದರೆ .. ಅವತ್ತು ಸುಶಾಂತ್ ಸಿಂಗ್ ಆತ್ಮಹತ್ಯೆಯ ಸುತ್ತ ಮುತ್ತ ನಡೆದ ವಾಗ್ಯುದ್ಧ ಇವತ್ತು ಕಾಣಿಸಲ್ಲ. ಆ ಉತ್ಸಾಹ ಕೂಡ ಯಾರಲ್ಲಿಯೂ ಇಲ್ಲ.

ಇದಕ್ಕೆ ಕೈಗನ್ನಡಿ ಅನ್ನುವಂತೆ, ಸುಶಾಂತ್ ಸಿಂಗ್ ರಜಪೂತ್ ಅವರನ್ನ ಇಂದು ಅನೇಕರು ಮರೆತಿದ್ದಾರೆ. ಅತ್ಯಲ್ಪ ಅವಧಿಯಲ್ಲಿಯೇ ಸುಶಾಂತ್ ಮಾಡಿದ್ದ ಸಾಧನೆಯನ್ನೆಲ್ಲ ಅಳಿಸಿ ಹಾಕಿ ಆತ್ಮಹತ್ಯೆಗೆ ಶರಣಾದ ನಾಯಕ ಅನ್ನುವ ಹಣೆಪಟ್ಟಿಯನ್ನು ಕಟ್ಟಿ ಅವತ್ತು ಹೋರಾಟ ಮಾಡಿದ್ದ ಹೋರಾಟಗಾರರೆಲ್ಲ ಕೈ ತೊಳೆದುಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಇದೇ ವಿಚಾರದಲ್ಲಿ ತಮ್ಮ ಮನದಲ್ಲಿದ್ದ ನೋವನ್ನ ಈಗ ಹೊರ ಹಾಕಿದ್ದಾರೆ.
ಹೌದು, ಖೋಸ್ಲಾ ಕಾ ಘೋಸ್ಲಾ.. ಲವ್ ಸೆಕ್ಸ್ ಔರ್ ಧೋಖಾ.. ಶಾಂಘೈ.. ಚಿತ್ರಗಳ ಮೂಲಕ ತಮ್ಮದೇ ಸ್ಥಾನವನ್ನ ಹೊಂದಿರುವ ದಿಬಾಕರ್ ಬ್ಯಾನರ್ಜಿ, ಸದ್ಯಕ್ಕೆ ಲವ್ ಸೆಕ್ಸ್ ಔರ್ ಧೋಖಾ 2 ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ಚಿತ್ರದ ಪ್ರಚಾರವನ್ನೂ ಮಾಡುತ್ತಾ, ಅನೇಕ ಕಡೆ ಸಂದರ್ಶನವನ್ನೂ ಕೊಡುತ್ತಿದ್ದಾರೆ. ಆ ಪೈಕಿ ಒಂದು ಸಂದರ್ಶನದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಬಗ್ಗೆ ಮಾತನಾಡಿರುವ ದಿಬಾಕರ್ ಬ್ಯಾನರ್ಜಿ, ಸುಶಾಂತ್ ಸತ್ತು ಮಲಗಿದ್ದಾಗ.. ಯುವ ನಟ ನಮ್ಮೆಲ್ಲರನ್ನ ಅಗಲಿದ್ದಾನೆ ಎಂದು ಯಾರು ಹೇಳಲಿಲ್ಲ. ಸುಶಾಂತ್‌ಗಾಗಿ ಯಾರು ದುಃಖ ಪಡಲಿಲ್ಲ. ಸುಶಾಂತ್ ಸುತ್ತ ಮುತ್ತ ಇದ್ದವರು ಕೂಡ ಕಂಬನಿ ಹಾಕಲೇ ಇಲ್ಲ ಎಂದಿದ್ದಾರೆ.

ಅವತ್ತು ಸುಶಾಂತ್ ಸಿಂಗ್ ರಜಪೂತ್‌ಗಿಂತ, ಸುಶಾಂತ್ ಸಿಂಗ್ ಅವರ ಹೆಸರಿನಲ್ಲಿ ಗಾಸಿಪ್ ಎಂಬ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ರುಚಿಯಾದ ಮಸಾಲೆಯಷ್ಟೇ ಎಲ್ಲರಿಗೆ ಬೇಕಿತ್ತೇ ಹೊರತು,ಬೇರೇನೂ ಅಲ್ಲ ಎನ್ನುವುದು ದಿಬಾಕರ್ ಬ್ಯಾನರ್ಜಿ ಅವರ ಮನದ ಮಾತು.
ಇನ್ನೂ ಸುಶಾಂತ್ ಸಿಂಗ್ ರಜಪೂತ್ ಅಗಲಿದ ನಂತರ..ಅವರ ನೆನಪಿನಲ್ಲಿ ಯಾರೊಬ್ಬರು ಸಂತಾಪ ಸಭೆಯನ್ನ ಮಾಡಲಿಲ್ಲ.ಸುಶಾಂತ್ ಸಿಂಗ್ ರಜಪೂತ್ ಸಾಧನೆಯ ಬಗ್ಗೆ ಮಾತನಾಡಲಿಲ್ಲ. ಹೊರಗಡೆಯಿಂದ ಬಂದ ವ್ಯಕ್ತಿ, ಬಾಲಿವುಡ್‌ನಲ್ಲಿ ಬೆಳೆದಿದ್ಹೇಗೆ ಎನ್ನುವ ಕುರಿತು ಯಾರು ಚರ್ಚೆಯನ್ನೂ ಕೂಡ ಮಾಡಲಿಲ್ಲ, ಅವರ ಸಿನಿಮಾಗಳ ಬಗ್ಗೆ, ಅವರಲ್ಲಿದ್ದ ಶ್ರದ್ದೆಯ ಬಗ್ಗೆ, ಅವರು ಆಯ್ಕೆ ಮಾಡಿಕೊಂಡ ಮಾತ್ರಗಳ ಬಗ್ಗೆ ಯಾರು ಮಾತನಾಡುವ ಗೋಜಿಗೆ ಹೋಗಲಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ತಮ್ಮ ಒಂದೂವರೆ ದಶಕದ ಚಿತ್ರ ಜೀವನದಲ್ಲಿ ಸುಶಾಂತ್ ಸಿಂಗ್ ರಜಪೂತ್ ಹನ್ನೆರಡು ಸಿನಿಮಾಗಳನ್ನ ಮಾಡಿದ್ದರು. ಆ ಹನ್ನೆರಡಲ್ಲಿ ಬಂಗಾಳಿ ಲೇಖಕ ಶರದಿಂದು ಬಂದೋಪಾಧ್ಯಾಯ ಅವರು ರಚಿಸಿದ ಕಾಲ್ಪನಿಕ ಪತ್ತೇದಾರಿಯನ್ನು ಆಧರಿಸಿದ ಡಿಟೆಕ್ಟಿವ್ ಬ್ಯೋಮಕೇಶ್ ಬಕ್ಷಿ ಕೂಡ ಒಂದು. ಈ ಚಿತ್ರದ ನಿರ್ದೇಶಕ ಬೇರೆ ಯಾರು ಅಲ್ಲ ಬದಲಿಗೆ ಇದೇ ದಿಬಾಕರ್ ಬ್ಯಾನರ್ಜಿ ಎನ್ನುವುದು ನಿಮ್ಮ ಗಮನಕ್ಕಿರಲಿ.


Click it and Unblock the Notifications











