ರಣಬೀರ್ ಕಪೂರ್ ಬಾಲಿವುಡ್‌ನ ನಾಚಿಕೆಗೆಟ್ಟ ವ್ಯಕ್ತಿ; ಹಿರಿಯ ನಟನ ಶಾಕಿಂಗ್ ಕಾಮೆಂಟ್
ರಣಬೀರ್ ಕಪೂರ್ ಬಾಲಿವುಡ್‌ನ ಹ್ಯಾಂಡ್ಸಮ್ ಸ್ಟಾರ್ ಗಳಲ್ಲಿ ಒಬ್ಬರು. ಆಲಿಯಾ ಭಟ್ ಜೊತೆ ಮದುವೆಯಾದರೂ ಕೂಡ ಇವರನ್ನು ಆರಾಧಿಸುವ ಮಹಿಳಾ ಮಣಿಯರ ಸಂಖ್ಯೆ ಕಡಿಮೆಯಾಗಿಲ್ಲ. ಇವತ್ತು ಕೂಡ ಬ್ಯಾಚುಲರ್ ಹುಡುಗಿಯರ ಪಾಲಿನ ಕನಸಿನ ಹುಡುಗ ರಣಬೀರ್ ಕಪೂರ್. ಇವರ ಸಿನಿಮಾಗಾಗಿ ಕಾಯುವ ಬಹುದೊಡ್ಡ ವರ್ಗ ಉತ್ತರ ಭಾರತದಲ್ಲಿ ಇದೆ. ಇನ್ನೂ ನಮ್ಮ ಯಶ್ ನಿರ್ಮಾಣದ "ರಾಮಾಯಣ" ರಾಮ ಇವರೇ ಎನ್ನುವ ವಿಚಾರ ನಿಮಗೆ ಈಗಾಗಲೇ ಗೊತ್ತೇ ಇರಬೇಕು.
ಇರಲಿ, ವಿಷಯ ಅದಲ್ಲ. ಸದ್ಯದ ತಾಜಾ ಸಮಾಚಾರ ಏನೆಂದರೆ ರಣಬೀರ್ ಕಪೂರ್ ಬಗ್ಗೆ ಹಿರಿಯ ನಟ ಪಿಯೂಷ್ ಮಿಶ್ರಾ ನೀಡಿರುವ ಒಂದು ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಯು ಮೇಲ್ನೋಟಕ್ಕೆ ವಿವಾದಾತ್ಮಕವಾಗಿ ಕಂಡರೂ ಪಿಯೂಷ್ ಮಿಶ್ರಾ ನೀಡಿರುವುದು ನಿಜಕ್ಕೂ ದೊಡ್ಡ ಮೆಚ್ಚುಗೆಯಾಗಿದೆ. ರಣಬೀರ್ ನಟನೆಯ ವೃತ್ತಿಪರತೆ ಮತ್ತು ವ್ಯಕ್ತಿತ್ವವನ್ನು ಹೊಗಳಲು ಮಿಶ್ರಾ ಅವರು ಅಂತಹ ಶಬ್ದಗಳನ್ನು ಬಳಸಿದ್ದಾರೆ.

ಹೌದು. ಪಿಯೂಷ್ ಮಿಶ್ರಾ ''ರಾಕ್ ಸ್ಟಾರ್'' ಮತ್ತು ''ತಮಾಶಾ'' ಸಿನಿಮಾಗಳಲ್ಲಿ ರಣಬೀರ್ ಜೊತೆ ಕೆಲಸ ಮಾಡಿದ್ದಾರೆ. ಆಗ ರಣಬೀರ್ ಕಪೂರ್ ನಡವಳಿಕೆ ಮಿಶ್ರಾ ಅವರಿಗೆ ತುಂಬಾನೇ ಇಷ್ಟವಾಗಿದೆ. "ಲಲ್ಲನ್ ಟಾಪ್"ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುವಾಗ ರಣಬೀರ್ ಪ್ರತಿಭೆ ಹಾಗೂ ಅವರ ನಿಸ್ಪೃಹ ಗುಣದ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಪಿಯೂಷ್ ಮಿಶ್ರಾ ಆಡಿದ ಮಾತುಗಳು ರಣಬೀರ್ ಅವರ ಸ್ಟಾರ್ಡಮ್ ಅನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.
ಪಿಯೂಷ್ ಮಿಶ್ರಾ ರಣಬೀರ್ ಬಗ್ಗೆ ಮಾತನಾಡುತ್ತಾ "ಅವನು ತುಂಬಾ ವಿಚಿತ್ರ ವ್ಯಕ್ತಿ. ನಾನು ಅವನಷ್ಟು ನಾಚಿಕೆಗೆಟ್ಟ ವ್ಯಕ್ತಿಯನ್ನು ಇಲ್ಲಿಯವರೆಗೆ ನೋಡಿಲ್ಲ" ಎಂದು ಹೇಳಿದ್ದಾರೆ. 'ನಾಚಿಕೆಗೆಟ್ಟ' ಎಂಬ ಶಬ್ದವನ್ನು ನಕಾರಾತ್ಮಕವಾಗಿ ಬಳಸದೆ ರಣಬೀರ್ ತಮ್ಮ ಕುಟುಂಬದ ಪರಂಪರೆಯ ಹೊರೆಯನ್ನು ಕಿಂಚಿತ್ತೂ ಹೊತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಮಿಶ್ರಾ ಬಳಸಿದ್ದಾರೆ. ಇದು ಬಾಲಿವುಡ್ ನ ಒಂದು ದೊಡ್ಡ ಕುಟುಂಬದ ಹಿನ್ನೆಲೆಯಿದ್ದರೂ ಆ ಒತ್ತಡವಿಲ್ಲದೆ ಮುಕ್ತವಾಗಿರುವ ನಟನಿಗೆ ನೀಡಿದ ದೊಡ್ಡ ಗೌರವವಾಗಿದೆ.
ರಣಬೀರ್ ಮತ್ತು ಪರಂಪರೆ
ಕಪೂರ್ ಕುಟುಂಬದ ಪರಂಪರೆ ಬಾಲಿವುಡ್‌ನಲ್ಲಿ ತುಂಬಾನೇ ಹಳೆಯದು. ರಣಬೀರ್ ಅವರ ಮುತ್ತಜ್ಜ ಪೃಥ್ವಿರಾಜ್ ಕಪೂರ್, ಅಜ್ಜ ರಾಜ್ ಕಪೂರ್, ತಂದೆ ದಿಗ್ಗಜ , ನಟ ರಿಷಿ ಕಪೂರ್ ಅವರಂತಹ ಮಹಾನ್ ಕಲಾವಿದರ ಪರಂಪರೆ ಅವರಿಗಿದೆ. ಇಂತಹ ದೊಡ್ಡ ಲೆಗಸಿ ಯನ್ನು ರಣಬೀರ್ ಅವರು ಕೇವಲ ಒಂದೇ ಒಂದು ಪರ್ಸೆಂಟ್ ಕೂಡ ತಮ್ಮ ಮೇಲೆ ಭಾರ ಮಾಡಿಕೊಂಡಿಲ್ಲ ಎಂದು ಪಿಯೂಷ್ ಮಿಶ್ರಾ ಹೇಳಿದ್ದಾರೆ.

ರಣಬೀರ್ ದೊಡ್ಡ ಸ್ಟಾರ್ ಆಗಿದ್ದರೂ ಸೆಟ್ ನಲ್ಲಿ ಅವರು ಯಾವುದೇ ರೀತಿಯ ಖಿನ್ನತೆ ಅಥವಾ ಗರ್ವವನ್ನು ಪ್ರದರ್ಶಿಸುವುದಿಲ್ಲ. ರಣಬೀರ್ ಅವರಿಗೆ ಯಾವುದೇ ಹ್ಯಾಂಗ್-ಅಪ್ಸ್ ಇಲ್ಲ. ವೃತ್ತಿಪರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರು ಸದಾ ಮುಂದಿರುತ್ತಾರೆ. ಅವರು ತಮ್ಮ ಸಹ-ನಟರೊಂದಿಗೆ ಬೆರೆಯುವ ರೀತಿ ಎಲ್ಲರಿಗೂ ಮಾದರಿಯಾಗಿದೆ. ರಣಬೀರ್ ಕಪೂರ್ ತಮ್ಮ ಕೆಲಸವನ್ನು ಮಾತ್ರ ಗಮನಿಸುತ್ತಾರೆ. ಇದರ ಹೊರತಾಗಿ ಬೇರೆ ಯಾವುದೇ ಬಾಹ್ಯ ಒತ್ತಡಕ್ಕೆ ಅವರು ಎಂದಿಗೂ ಒಳಗಾಗುವುದಿಲ್ಲ ಎಂದು ಪಿಯೂಶ್ ಮಿಶ್ರಾ ಹೇಳಿದ್ದಾರೆ.
ಸಹ-ನಟರಿಂದ ಸದಾ ಮೆಚ್ಚುಗೆಯ ಮಾತು
ಪಿಯೂಷ್ ಮಿಶ್ರಾ ಮಾತ್ರವಲ್ಲದೆ ರಣಬೀರ್ ಅವರೊಂದಿಗೆ ಕೆಲಸ ಮಾಡಿದ ಇನ್ನೊಬ್ಬ ಸಹ-ನಟ ಅಜಿಂಕ್ಯ ದೇವ್ ಕೂಡ ಅವರನ್ನು ಮೆಚ್ಚಿದ್ದಾರೆ. ರಣಬೀರ್ ಅವರದ್ದು ಶುದ್ಧ ಹೃದಯ. ಅವರು ಯಾವಾಗಲೂ 'ಫಿಲ್ಟರ್ಗಳು' ಅಥವಾ 'ಪದರಗಳಿಲ್ಲದ' ನಟ ಎಂದು ಅಜಿಂಕ್ಯ ದೇವ್ ಕೂಡ ಹೊಗಳಿದ್ದಾರೆ. ರಣಬೀರ್ ಕಪೂರ್ ತಮ್ಮ ಸಹ-ನಟರನ್ನು ಸದಾ ಹುರಿದುಂಬಿಸುತ್ತಾರೆ. "ಸರ್, ಬ್ಯೂಟಿಫುಲ್ ಶಾಟ್, " ಎಂದು ಹೇಳಿ ಪ್ರೋತ್ಸಾಹಿಸುತ್ತಾರೆ. ಇದು ರಣಬೀರ್ ಅವರ ಸರಳ ಸ್ವಭಾವವನ್ನು ತೋರಿಸುತ್ತದೆ.
ರಣಬೀರ್ ಕಪೂರ್ ನಿಜಕ್ಕೂ ಬಾಲಿವುಡ್ ಗೆ ಒಂದು ಅಪರೂಪದ ಕೊಡುಗೆ. ಇವರು ಕೇವಲ ಒಬ್ಬ ಉತ್ತಮ ನಟ ಮಾತ್ರವಲ್ಲ ಉತ್ತಮ ವ್ಯಕ್ತಿಯೂ ಹೌದು ಎಂದು ಪಿಯೂಷ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ರಣಬೀರ್ ಕಪೂರ್ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಚಿತ್ರ 'ಲವ್ ಅಂಡ್ ವಾರ್' ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ವೃತ್ತಿಪರತೆ ಮತ್ತು ಸರಳತೆ ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರೆಯಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.


Click it and Unblock the Notifications











