ಇದ್ದಕ್ಕಿದ್ದಂತೆ ನನಗೆ ಕಿವಿ ಕೇಳಿಸುತ್ತಿಲ್ಲ ಎಂದ ಅಲ್ಕಾ ಯಾಗ್ನಿಕ್, ಅಪರೂಪದ ಕಾಯಿಲೆಗೆ ತುತ್ತಾದ ಖ್ಯಾತ ಗಾಯಕಿ..!
ಲತಾ ಮಂಗೇಶ್ಕರ್ .. ಆಶಾ ಭೋಂಸ್ಲೆ .. ಭಾರತದ ಸಂಗೀತ ಪ್ರಿಯರ ಹೃದಯವನ್ನಾಳುತ್ತಿದ್ದ ಕಾಲದಲ್ಲಿ ತನ್ನ ಕಂಠದಿಂದ ಹುಚ್ಚೆಬ್ಬಿಸಿದವರು ಅಲ್ಕಾ ಯಾಗ್ನಿಕ್. ಕುಮಾರ್ ಸಾನು ಜೊತೆ ಅಲ್ಕಾ ಹಾಡುತ್ತಿದ್ದರೆ ಆ ಕಾಲಕ್ಕೆ ಮೈಮರೆಯುತ್ತಿದ್ದವರು ಒಬ್ಬರು..ಇಬ್ಬರಲ್ಲ.
ಶ್ರೇಯಾ ಘೋಷಾಲ್ .. ಸುನಿಧಿ ಚೌಹಾಣ್.. ನೇಹಾ ಕಕ್ಕರ್.. ಹೀಗೆ ನವಯುಗದ ಗಾಯಕಿಯರ ನಡುವೆ ಇವತ್ತು ಕೂಡ ತಮ್ಮ ಬೇಡಿಕೆಯನ್ನ ಕಳೆದುಕೊಳ್ಳದೇ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಅಲ್ಕಾ ಯಾಗ್ನಿಕ್ ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ. ಆಲ್ಕಾ ಅವರ ಈ ನೋವನ್ನು ಅರಿತು ಅನೇಕರು ದಿಗ್ಭ್ರಾಂತರಾಗಿದ್ದಾರೆ. ಯಾಕೆಂದರೆ.. ಹಾಡುತ್ತಾ, ಹಾಡು ಕೇಳುತ್ತಾ, ಸಂಗೀತವನ್ನೇ ಉಸಿರಾಗಿಸಿಕೊಂಡ ಆಲ್ಕಾ ಶ್ರವಣದೋಷಕ್ಕೆ ಒಳಗಾಗಿದ್ದಾರೆ.

ಹೌದು. ತನಗೆ ಕಿವಿ ಕೇಳಿಸುತ್ತಿಲ್ಲ ಎನ್ನುವ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿರುವ ಆಲ್ಕಾ ಯಾಗ್ನಿಕ್, 'ನನ್ನೆಲ್ಲ ಅಭಿಮಾನಿಗಳು, ಫಾಲೋವರ್ಸ್ ಮತ್ತು ಇತ್ತೀಚೆಗೆ ಯಾಕೆ ನಾನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳುತ್ತಿದ್ದ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಈ ವಿಷಯ ಹೇಳುತ್ತಿದ್ದೇನೆ' ಎಂದಿರುವ ಅಲ್ಕಾ ಕೆಲವು ವಾರಗಳ ಹಿಂದೆ ನಾನು ವಿಮಾನದಿಂದ ಹೊರಬಂದಾಗ ನನ್ಗೇನೂ ಕೇಳುತ್ತಿಲ್ಲ ಎಂಬ ಭಾವನೆ ನನ್ನಲ್ಲಿ ಮೂಡಿತು. ಆ ಬಳಿಕ ಸ್ವಲ್ಪ ಧೈರ್ಯ ಮಾಡಿ ವೈದ್ಯರ ಬಳಿ ತೆರಳಿದಾಗ ಈ ರೀತಿ ಸಮಸ್ಯೆ ಆಗಿದೆ ಎಂಬುದನ್ನು ವೈದ್ಯರು ತಿಳಿಸಿದರು ಎಂದಿದ್ದಾರೆ.
ಮುಂದುವರೆದು ನನಗೆ ತಿಳಿಯದಂತೆಯೇ ಈ ರೀತಿ ಆಗಿದೆ. ನಾನು ಇದರಿಂದ ಗುಣಮುಖವಾಗಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನೀವು ನನಗಾಗಿ ಪ್ರಾರ್ಥಿಸಿ. ಹೆಡ್ಫೋನ್ ಅಥವಾ ಇತರೆ ಸಾಧನಗಳ ಮೂಲಕ ಜೋರಾದ ಶಬ್ದವನ್ನು ಕೇಳಿಸಿಕೊಳ್ಳಬೇಡಿ ಎಂಬ ಮನವಿಯನ್ನೂ ಅಲ್ಕಾ ಯಾಗ್ನಿಕ್ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಬೆಂಬಲದಿಂದ ಗುಣಮುಖವಾಗಿ ಮತ್ತೆ ಬರುತ್ತೇನೆ ಎಂಬ ನಂಬಿಕೆ ನನಗಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ ಅಲ್ಕಾ ಯಾಗ್ನಿಕ್

ಅಂದ್ಹಾಗೇ ಅಲ್ಕಾ ಯಾಗ್ನಿಕ್‌ಗೆ ಈಗ 58ರ ಪ್ರಾಯ. ಈ ಪ್ರಾಯದಲ್ಲಿ ಕೂಡ ಅಲ್ಕಾ ಯಾಗ್ನಿಕ್ ಗೆ ಕೈ ತುಂಬಾ ಅವಕಾಶಗಳಿವೆ. ಈ ವರ್ಷ ತೆರೆಗೆ ಬಂದ ಕ್ರೂ ಮತ್ತು ಅಮರ್ ಸಿಂಗ್ ಚಮ್ಕಿಲಾ ಚಿತ್ರಗಳಿಗೆ ಹಾಡನ್ನೂ ಹಾಡಿದ್ದವರು ಅಲ್ಕಾ ಯಾಗ್ನಿಕ್. 2 ಬಾರಿ ರಾಷ್ಟ್ರ ಪ್ರಶಸ್ತಿ, 7 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಅಲ್ಕಾ ಯಾಗ್ನಿಕ್ ಪಾತ್ರರಾಗಿದ್ದಾರೆ.
ಇನ್ನೂ ತಮ್ಮ ಈ ಸುದೀರ್ಘ ವೃತ್ತಿ ಜೀವನದಲ್ಲಿಅಲ್ಕಾ ಯಾಗ್ನಿಕ್ ಹೆಚ್ಚು ಕಡಿಮೆ 1200 ಚಿತ್ರಗಳ ಭಾಗವಾಗಿದ್ದಾರೆ. ಹತ್ ಹತ್ರ 2500 ಹಾಡುಗಳನ್ನ ಕೇವಲ ಹಿಂದಿಯಲ್ಲಿಯೇ ಹಾಡಿದ್ದಾರೆ. ಈ ಮೂಲಕ ಆಶಾ ಭೋಂಸ್ಲೆ.. ಮೊಹ್ಮದ್ ರಫಿ.. ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ನಂತರ ಅತೀ ಹೆಚ್ಚು ಹಾಡನ್ನ ಹಾಡಿರುವ ಬಾಲಿವುಡ್‌ನ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಆಲ್ಕಾ ಯಾಗ್ನಿಕ್.
ಇಂಥ ಅಪ್ರತಿಮ ಗಾಯಕಿ ಮತ್ತು ಸಾಧಕಿಗೆ ಈಗ ಇದ್ದಕ್ಕಿದ್ದಂತೆ ಕಿವಿ ಕೇಳಿಸುತ್ತಿಲ್ಲ. ಸಹಜವಾಗಿ ಇದರಿಂದ ಅಲ್ಕಾ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅಲ್ಕಾ ಯಾಗ್ನಿಕ್ ಅವರಿಗೆ ಅನೇಕರು ಧೈರ್ಯವನ್ನೂ ತುಂಬುತ್ತಿದ್ದಾರೆ.


Click it and Unblock the Notifications











