ಅತ್ಯಾಚಾರ ಪ್ರಕರಣದಲ್ಲಿ ಟಿವಿ ನಟ ಬಂಧನ: ಬೆಂಬಲಕ್ಕೆ ನಿಂತ ಪೂಜಾ ಬೇಡಿ
ಡೇಟಿಂಗ್ ಆಪ್ ನಲ್ಲಿ ಪರಿಚಯ ಆಗಿ, ಮದುವೆ ಆಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿಯೊಬ್ಬಳು ಕಿರುತೆರೆ ನಟ ಕರಣ್ ಒಬೆರಾಯ್ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕರಣ್ ಒಬೆರಾಯ್ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇದೀಗ, ಕರಣ್ ಒಬೆರಾಯ್ ಬೆಂಬಲಕ್ಕೆ ಸ್ನೇಹಿತೆ ಪೂಜಾ ಬೇಡಿ ಮತ್ತು ಮ್ಯೂಸಿಕ್ ಬ್ಯಾಂಡ್ ತಂಡ ನಿಂತಿದೆ. ''ಕರಣ್ ಒಬೆರಾಯ್ ಸಜ್ಜನ ವ್ಯಕ್ತಿ. ಅವರ ಮೇಲಿನ ಆರೋಪ ಸುಳ್ಳು. ಆ ಯುವತಿಯ ಹೇಳಿಕೆಗಳಲ್ಲೇ ಅನುಮಾನವಿದೆ'' ಎಂದು ಪೂಜಾ ಬೇಡಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೂಜಾ ಬೇಡಿ ''ಇತ್ತೀಚಿನ ದಿನದಲ್ಲಿ ಬಹುತೇಕ ಮಹಿಳೆಯರು ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನಿನ ಬಗ್ಗೆ ಗೌರವ ತೋರುತ್ತಿಲ್ಲ. ಇದರಿಂದ ಅವರ ರಕ್ಷಣೆಯಾಗುತ್ತಿದೆಯಾ ಅಥವಾ ತಮ್ಮ ಅನೂಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರಾ ಎಂಬುದನ್ನ ಯೋಚನೆ ಮಾಡಬೇಕಿದೆ'' ಎಂದು ಪ್ರಶ್ನಿಸಿದ್ದಾರೆ.

''ಕರಣ್ ಒಳ್ಳೆಯ ಫ್ಯಾಮಿಲಿಯಿಂದ ಬಂದಿರುವ ವ್ಯಕ್ತಿ. ಇಂತಹ ವ್ಯಕ್ತಿಗಳನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ನಿಜಕ್ಕೂ ಬೇಸರದ ಸಂಗತಿ. ಇದರಿಂದ ಅವರ ಕುಟುಂಬಕ್ಕೆ ಆಘಾತವಾಗಿದೆ. ಇದನ್ನ ನಾನು ಒಪ್ಪುವುದಿಲ್ಲ. ಹಲವು ಪ್ರಕರಣದಲ್ಲಿ ಮಹಿಳೆಯರು ಕಾನೂನನ್ನ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ'' ಎಂದು ಕಿಡಿಕಾರಿದ್ದಾರೆ.
''ನಾನು ಹಲವು ವರ್ಷಗಳಿಂದ ಮಹಿಳೆಯರಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಕಳೆದ ವರ್ಷದಲ್ಲಿ ಪುರುಷರ ಪರ ಹೋರಾಟವನ್ನ ಆರಂಭಿಸಿದ್ದೇನೆ. ಸಮಾನತೆಯಲ್ಲಿ ನನಗೆ ನಂಬಿಕೆ ಇದೆ. ಇಂತಹ ನಕಲಿ ಪ್ರಕರಣಗಳನ್ನ ಹೂಡುವ ಮಹಿಳೆಯರಿಗೆ ತಕ್ಕ ಶಿಕ್ಷೆ ಕೊಡಿಸಬೇಕಾಗಿದೆ. ಕರಣ್ ಒಬೆರಾಯ್ ಪ್ರಕರಣವನ್ನ ನೋಡಿದ ಬಂತರ ನಾವು 'Mentoo' ಅಭಿಯಾನ ಶುರು ಮಾಡಬೇಕಿದೆ'' ಎಂದು ಕರಣ್ ಒಬೆರಾಯ್ ಅವರನ್ನ ಸಮರ್ಥಿಸಿಕೊಂಡಿದ್ದಾರೆ.

ಕರಣ್ ಒಬೆರಾಯ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣಗಳು ದಾಖಲಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆ ಯುವತಿ ದೂರಿದ್ದಾಳೆ. ಸದ್ಯ ಪೊಲೀಸರ ವಶದಲ್ಲಿರುವ ಕರಣ್ ಮೇ 9ರಂದು ಕೋರ್ಟಿನಲ್ಲಿ ವಿಚಾರಣೆ ಎದುರಿಸಲಿದ್ದಾರೆ.


Click it and Unblock the Notifications











