ಪೂಜಾ ಹೆಗ್ಡೆ ಸಹೋದರನ ಮದುವೆಗೆ ಸಲ್ಲು ಹಾಜರ್: ಡೇಟಿಂಗ್ ರೂಮರ್ಸ್ ಬಗ್ಗೆ ನಟಿ ಹೇಳಿದ್ದಿಷ್ಟು
ಈಗಾಗಲೇ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ಸಾಕಷ್ಟು ನಟಿಯರ ಹೆಸರು ತಳುಕು ಹಾಕಿಕೊಂಡಿದೆ. ಸಲ್ಲು ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಈಕೆಯ ಜೊತೆಗೂ ಬಾಲಿವುಡ್ ಬ್ಯಾಡ್‌ಬಾಯ್ ಡೇಟಿಂಗ್ ನಡೆಸ್ತಿದ್ದಾರೆ ಎನ್ನುವ ಗುಸುಗುಸು ಕೆಲ ದಿನಗಳಿಂದ ಕೇಳಿಬರ್ತಿತ್ತು. ಈ ಬಗ್ಗೆ ಇದೀಗ ಸ್ವತಃ ಪೂಜಾ ಪ್ರತಿಕ್ರಿಯಿಸಿದ್ದಾರೆ.
ಫರ್ಹಾದ್ ಸಮ್ಜಿ ನಿರ್ದೇಶನದ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'. ತಮಿಳಿನ 'ವೀರಂ' ರೀಮೆಕ್ ಆಗಿರುವ ಈ ಚಿತ್ರದಲ್ಲಿ ಸಲ್ಲು ನಾಲ್ಕು ಜನ ಸಹೋದರರ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ತೆಲುಗು ಹುಡುಗಿಯಾಗಿ ಭಾಯ್ಜಾನ್‌ನ ಪ್ರೇಯಸಿಯಾಗಿ ಮಿಂಚಿದ್ದಾರೆ. ವಿಕ್ಟರಿ ವೆಂಕಟೇಶ್ ಆಕೆಯ ಅಣ್ಣನ ಪಾತ್ರ ಮಾಡಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ.

ಸಲ್ಲು ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಮಾತನಾಡಿರುವ ಪೂಜಾ "ಆ ಬಗ್ಗೆ ನಾನೇನು ಹೇಳಲಿ? ನನ್ನ ಬಗ್ಗೆ ಬಂದ ಸುದ್ದಿಯನ್ನು ಓದಿದ್ದೇನೆ. ಸದ್ಯಕ್ಕೆ ನಾನು ಸಿಂಗಲ್ ಆಗಿಯೇ ಇದ್ದೀನಿ. ಹಾಗೆ ಇರೋದೇ ನನಗಿಷ್ಟ. ನನ್ನ ದೃಷ್ಟಿಯಲ್ಲಾ ಈಗ ಕರಿಯರ್ ಮೇಲಿದೆ. ನಾನು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸಲ್ಮಾನ್ ಖಾನ್ ಜೊತೆ ನಟಿಸೋದು ಅದ್ಭುತ ಅನುಭವ. ಸೆಟ್‌ನಲ್ಲಿ ಬಹಳ ಫ್ರೆಂಡ್ಲಿಯಾಗಿ ಇರುತ್ತಿದ್ದರು. ತನಗೆ ಅನ್ನಿಸಿದ್ದನ್ನಿ ನೇರವಾಗಿ ಹೇಳುತ್ತಾರೆ. ಚಿತ್ರದಲ್ಲಿ ನನ್ನದು ತೆಲುಗು ಹುಡ್ಗಿ ಪಾತ್ರ. ಅದಕ್ಕೆ ಬಹಳ ಇಷ್ಟ ಆಯ್ತು" ಎಂದಿದ್ದಾರೆ.
ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಈ ಸಮಾರಂಭಕ್ಕೆ ಸಲ್ಮಾನ್ ಖಾನ್ ಹಾಜರಾಗಿ ನವ ದಂಪತಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಇದನ್ನೆಲ್ಲಾ ನೋಡಿ ಸಲ್ಲು ಹಾಗೂ ಪೂಜಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಅದಕ್ಕೆ ಆಕೆಯ ಸಹೋದರ ಮದುವೆಗೂ ಹೋಗಿದ್ದಾರೆ ಅಂತೆಲ್ಲಾ ಗುಸುಗುಸು ಕೇಳಿ ಬಂದಿತ್ತು.

ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದ ಪೂಜಾ ಹೆಗ್ಡೆ ಮೊದಲಿಗೆ ಮಾಡೆಲಿಂಗ್ ಆರಂಭಿಸಿದರು. ನಂತರ ನಿಧಾನವಾಗಿ ಚಿತ್ರರಂಗದತ್ತ ಮುಖ ಮಾಡಿದ್ದರು. ತಮಿಳಿನ 'ಮುಗಮುಡಿ' ಪೂಜಾ ನಟಿಸಿದ ಚೊಚ್ಚಲ ಚಿತ್ರ. ನಂತರ ತೆಲುಗು ಸಿನಿಮಾದಲ್ಲಿ ನಟಿಸಿದರು. 'ಮೆಹೆಂಜೊದಾರೋ' ಚಿತ್ರದಲ್ಲಿ ಹೃತಿಕ್ ರೋಷನ್ ಜೋಡಿಯಾಗಿ ಬಾಲಿವುಡ್ ಪ್ರವೇಶಿಸಿದರು. ಅಲ್ಲೂ ಸೋತಿದ್ದರು. ನಂತರ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ 'ಅಲಾ ವೈಕುಂಠಪುರಂ' ಸಿನಿಮಾ ಗೆದ್ದಿತ್ತು.
ಎಷ್ಟೇ ಸಿನಿಮಾಗಳು ಸೋತರೂ ಪೂಜಾಗೆ ಒಳ್ಳೆ ಅವಕಾಶಗಳು ಅರಸಿ ಬರುತ್ತಲೇ ಇದೆ. ಸೂಪರ್ ಸ್ಟಾರ್‌ಗಳ ಜೊತೆ ನಾಯಕಿಯಾಗಿ ನಟಿಸ್ತಿದ್ದಾರೆ. ಪ್ರಭಾಸ್, ರಾಮ್‌ಚರಣ್, ದಳಪತಿ ವಿಜಯ್, ರಣ್‌ವೀರ್ ಸಿಂಗ್‌ರಂತಹ ಸ್ಟಾರ್‌ಗಳ ಜೊತೆ ನಟಿಸಿ ಕಮಾಲ್ ಮಾಡಿದ್ದಾರೆ. ಇದೀಗ ಏಕ್‌ದಮ್ ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ನಟಿಸುವ ಅದೃಷ್ಟ ಒಲಿದಿದೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ಈ ಸಿನಿಮಾ ಚಿತ್ರೀಕರಣ ನಡೀತಿದೆ.

ಈದ್ ಸ್ಪೆಷಲ್ ಆಗಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಈ ಬಾರಿ ಕೂಡ ಸಲ್ಮಾನ್ ಖಾನ್‌ಗೆ ಈದ್ ಸೆಂಟಿಮೆಂಟ್ ಪ್ಲಸ್ ಆಗುತ್ತೆ ಎನ್ನಲಾಗ್ತಿದೆ. ಚಿತ್ರದ ಹಾಡೊಂದರಲ್ಲಿ ರಾಮ್‌ಚರಣ್ ಕೂಡ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ. ಇನ್ನು ಸ್ವತಃ ಸಲ್ಮಾನ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications










