ಸತತ ಆರನೇ ಬಾರಿ ಫ್ಲಾಪ್ ಚಿತ್ರವನ್ನು ನೀಡಿದ ಚೆಂದುಳ್ಳಿ ಚೆಲುವೆ, ಎಷ್ಟೇ ತಿಪ್ಪರಲಾಗ ಹಾಕಿದರೂ ಸಿಗುತ್ತಿಲ್ಲ ಗೆಲುವು..!
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಪೂಜಾ ಹೆಗ್ಡೆ ಸದ್ಯದ ಅತ್ಯುತ್ತಮ ಉದಾಹರಣೆ.
ಹೌದು, ಪೂಜಾ ಹೆಗ್ಡೆ.. ಹೆಚ್ಚೇನ್ ಇಲ್ಲ ಹನ್ನೆರಡು ವರ್ಷದ ಹಿಂದೆ ಚಿನ್ನದಂತಹ ಬೇಡಿಕೆಯನ್ನ ಹೊಂದಿದ್ದ ನಟಿ. ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದ ಪೂಜಾ ಬಾಲಿವುಡ್ ಸಹವಾಸ ಮಾಡಿ ಬಡವರಾದರು. ನಿಜಾ.. ಪೂಜಾ ಅಭಿನಯದ ಹೌಸ್ ಫುಲ್ 4, ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಸಿನಿಮಾನೇ. ಆದರೆ .. ಗೆಲುವಲ್ಲಿ ಪೂಜಾಗೆ ಕ್ರೆಡಿಟ್ ಸಿಗಲಿಲ್ಲ. ಉತ್ತರದ ಸಿನಿರಸಿಕರು ಇವರನ್ನ ಹೃದಯದಲ್ಲಿಟ್ಟು ಪೂಜೆ ಮಾಡಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಂತರ ಪೂಜಾ ಅಭಿನಯದ ಸರ್ಕಸ್ ಮತ್ತು ಕಿಸಿ ಕಾ ಭಾಯಿ ಕಿಸಿ ಕಾ ಜಾನ್ ಸಿನಿಮಾ ಮಕಾಡೆ ಮಲಗಿಕೊಂಡವು.

ಇನ್ನೂ .. ರಾಧೆ ಶ್ಯಾಮ್ .. ಬೀಸ್ಟ್ ಮತ್ತು ಆಚಾರ್ಯ .. ಪೂಜಾ ಅವರ ಖಾತೆಗೆ ಮತ್ತು ಖ್ಯಾತಿಗೆ ಎರಡಕ್ಕೂ ಕತ್ತರಿಯನ್ನ ಹಾಕಿದವು. ಇದಕ್ಕೆ ಸಾಕ್ಷಿ ಅನ್ನುವಂತೆ.. ಒಂದ್ಕಾಲದಲ್ಲಿ ಇವರದ್ದು ಗೋಲ್ಡನ್ ಲೆಗ್ ಅನ್ನುತ್ತಿದ್ದ ಜನ ಐರನ್ ಲೆಗ್ ಅನ್ನಲು ಶುರು ಮಾಡಿದರು. ನಾಲ್ಕು ಕೋಟಿಯನ್ನ ಕೊಟ್ಟು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು, ಒಂದು ಕೋಟಿ ಕೊಡಲು ಕೂಡ ಯೋಚನೆ ಮಾಡಲು ಆರಂಭ ಮಾಡಿದರು. ಇದರ ನಡುವೆ ಪೂಜಾ ಹೆಗ್ಡೆ ಸ್ಥಾನವನ್ನ ಬೇರೆ ನಾಯಕಿಯರು ಆಕ್ರಮಿಸಿಕೊಂಡರು.
ಈ ಎಲ್ಲ ಕಾರಣದಿಂದ ಪೂಜಾ ಹೆಗ್ಡೆ ಕೆರಿಯರ್ ಖತಂ ಎಂದೇ ಎಲ್ಲರು ಅಂದುಕೊಂಡಿದ್ದರು. ಪೂಜಾ ಹೆಗ್ಡೆಗೆ ಅವಮಾನವಾಗುವಂತೆ ಮಾತನಾಡಿದ್ದರು. ಆದರೂ ಕೂಡ ಪೂಜಾ ಹೆಗ್ದೆ ಕಂಗೆಟ್ಟಿರಲಿಲ್ಲ. ಹೆದರಿರಲಿಲ್ಲ. ಇಂದಲ್ಲ ನಾಳೆ ಗೆಲುವು ನನ್ನದೇ ಎನ್ನುವ ಆತ್ಮವಿಶ್ವಾಸದಲ್ಲಿಯೇ ಇದ್ದರು. ಇದಕ್ಕೆ ಪೂರಕವಾಗಿ ಶಾಹಿದ್ ಕಪೂರ್ ಜೊತೆ ಅಭಿನಯಿಸುತ್ತಿದ್ದ ದೇವಾ ಆರಂಭದಿಂದಲೇ ಸದ್ದು ಮಾಡಲು ಶುರು ಮಾಡಿತ್ತು. ಚಿತ್ರದ ಕುರಿತು ಬಿಡುಗಡೆ ಮುನ್ನ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಾಗಿ ಪೂಜಾ ಹಳೆಯ ಸೋಲುಗಳನ್ನೆಲ್ಲ ಮರೆತು ಗೆಲುವನ್ನು ಸಂಭ್ರಮಿಸಲು ಸಿದ್ಧರಾಗಿದ್ದರು. ಆದರೆ, ದುರಾದೃಷ್ಟ ದೇವಾ ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದಾನೆ. ಪೂಜಾ ಹೆಗ್ಡೆಯ ಭರವಸೆಗಳನ್ನು ಹುಸಿ ಮಾಡಿದ್ದಾನೆ. ಹೌದು. ಧಾಂ ಧೂಂ ಎಂದು ಅದ್ಧೂರಿಯಾಗಿ ತೆರೆಗೆ ಬಂದ ದೇವಾ ಕೇವಲ ಹದಿನಾಲ್ಕೇ ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ತನ್ನ ಆಟ ಮುಗಿಸಿದ್ದಾನೆ. ಕೇವಲ ₹60 ಕೋಟಿಯನ್ನು ಗಳಿಸುವಷ್ಟರಲ್ಲಿ ಬಳಲಿ ಬಸವಳಿದು ಹೋಗಿದ್ದಾನೆ. ಈ ಮೂಲಕ ಪೂಜಾ ಹೆಗ್ಡೆ ಮತ್ತೊಂದು ಸೋಲಿನ ಕಾಣಿಕೆಯನ್ನು ಈ ದೇವಾ ನೀಡಿದ್ದಾನೆ.
ದೇವಾ ಚಿತ್ರದ ಈ ಸೋಲಿನಿಂದ ಈಗ ಪೂಜಾ ಹೆಗ್ಡೆ ಸತತ ಆರು ಫ್ಲಾಪ್ ಚಿತ್ರಗಳನ್ನು ನೀಡಿದ ನಾಯಕಿ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ. ಇಷ್ಟೇ ಅಲ್ಲ ಆಡಿಕೊಳ್ಳುವರ ಬಾಯಿಗೆ ಮತ್ತೊಮ್ಮೆ ಪೂಜಾ ಹೆಗ್ಡೆ ಆಹಾರ ಆಗಿದ್ದಾರೆ.
ಸದ್ಯ ಪೂಜಾ ಹೆಗ್ಡೆ ಸೂರ್ಯ ಅಭಿನಯದ ರೆಟ್ರೋ ಮತ್ತು ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಮತ್ತೊಂದು ಹಿಂದಿ ಚಿತ್ರ ಪೂಜಾ ಹೆಗ್ಡೆ ಕೈಯಲ್ಲಿದೆ. ಈ ಮೂರು ಚಿತ್ರಗಳಲ್ಲಿ ಗೆಲುವನ್ನು ಕಾಣುವ ಮೂಲಕ ಪೂಜಾ ಹೆಗ್ಡೆ ಸೋಲಿನ ಸರಪಳಿಯನ್ನು ತುಂಡರಿಸುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಪಾತಾಳಕ್ಕೆ ಕುಸಿದಿರುವ ಪೂಜಾ ಮಾರ್ಕೆಟ್ ವ್ಯಾಲ್ಯೂ ಮತ್ತೆ ಗಗನಕ್ಕೇರುತ್ತಾ ಎನ್ನುವುದನ್ನು ಕೂಡ ನೋಡಬೇಕಿದೆ.


Click it and Unblock the Notifications











