ಆ ಒಳ್ಳೆ ಕಾರಣಕ್ಕೆ ಎಲ್ಲರನ್ನು ಫೂಲ್ ಮಾಡಿದ ಪೂನಂ ಪಾಂಡೆ; "ನಾನು ಸತ್ತಿಲ್ಲ, ಬದುಕಿದ್ದೇನೆ" ಎಂದು ವಿಡಿಯೋ ರಿಲೀಸ್
ಎರಡು ದಿನಗಳಿಂದ ಬಾಲಿವುಡ್ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಆಕೆ ಸತ್ತಿರುವುದನ್ನು ಎಲ್ಲರೂ ನಂಬಿಬಿಟ್ಟಿದ್ದರು. ತಮ್ಮ ಮ್ಯಾನೇಜರ್ ಮೂಲಕವೇ ಈ ವಿಚಾರವನ್ನು ಪೂನಂ ಹೇಳಿಸಿದ್ದರು. ಹಾಗಾಗಿ ಎಲ್ಲರೂ ಆಕೆಯ ಅಗಲಿಕೆಗೆ ಸಂತಾಪ ಸೂಚಿಸಿದ್ದರು.
ಗರ್ಭಕಂಠ ಕ್ಯಾನ್ಸರ್‌ನಿಂದ ಪೂನಂ ಕೊನೆಯುಸಿರೆಳಿದಿದ್ದಾಗಿ ಆಕೆಯ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. 32 ವರ್ಷಕ್ಕೆ ಆಕೆ ಹಠಾತ್ ನಿಧನ ಹೊಂದಿದ್ದಾಗಿ ಆಕೆಯ ಮ್ಯಾನೇಜರ್ ಹೇಳಿದ್ದರಿಂದ ಎಲ್ಲರೂ ನಂಬುವಂತಾಗಿತ್ತು. ಸುಳ್ಳು ಸುದ್ದಿಗಳಿಂದಲೇ ಪೂನಂ ಹೆಚ್ಚು ಸುದ್ದಿ ಆಗುತ್ತಾ ಬಂದಿದ್ದರು. ವಿವಾದಾತ್ಮಕ ಹೇಳಿಕೆಗಳಿಂದ ಪದೇ ಪದೆ ಆಕೆ ಸುದ್ದಿಯಾಗಿದ್ದಳು. ಈ ಬಾರಿ ಕೂಡ ಆಕೆ ಫೂಲ್ ಮಾಡುತ್ತಿರುವುದಾಗಿ ಕೆಲವರು ಭಾವಿಸಿದ್ದರು. ಅದು ನಿಜವೇ ಆಗಿದೆ.

"ನಾನು ಬದುಕಿದ್ದೇನೆ. ಗರ್ಭಕಂಠದ ಕ್ಯಾನ್ಸರ್‌ನಿಂದ ನಾನು ಸಾಯಲಿಲ್ಲ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿ ವಿಡಿಯೋದಲ್ಲಿ ಹೇಳಿದ್ದಾಳೆ. ಪ್ರತಿವರ್ಷ ಗರ್ಭಕಂಠ ಕ್ಯಾನರ್‌ನಿಂದ ಬಹಳ ಜನ ಮಹಿಳೆಯರು ಸಾಯುತ್ತಿದ್ದಾರೆ. ಇದಕ್ಕೆ ಚಿಕಿತ್ಸೆ ಹೇಗೆ ಎನ್ನುವುದು ಗೊತ್ತಿಲ್ಲ, ಆ ಬಗ್ಗೆ ಜಾಗೃತಿ ಮೂಡಿಸಲು ನಾನು ಈ ರೀತಿ ಮಾಡಿದೆ" ಎಂದು ಪೂನಂ ವಿಡಿಯೋದಲ್ಲಿ ಹೇಳಿದ್ದಾಳೆ.
"ಬೇರೆ ಇತರ ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು. ಈ ಕ್ಯಾನ್ಸರ್‌ನ ಆರಂಭಿಕ ಪತ್ತೆಗೆ HPV ಲಸಿಕೆ ಪ್ರಮುಖವಾಗಿದೆ. ಈ ಕಾಯಿಲೆಗೆ ಯಾರೂ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳಲು ನಮ್ಮಲ್ಲಿ ಮಾರ್ಗಗಳಿವೆ. ಈ ಅರಿವಿನಿಂದ ಪರಸ್ಪರ ಸಬಲರಾಗೋಣ. ಪ್ರತಿ ಮಹಿಳೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಏನು ಮಾಡಬಹುದೆಂಬುದನ್ನು ಆಳವಾಗಿ ತಿಳಿಯಲು ಈ ಪೋಸ್ಟ್ ಬಯೋದಲ್ಲಿನ ಲಿಂಕ್‌ಗೆ ಭೇಟಿ ನೀಡಿ. ಒಟ್ಟಾಗಿ, ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಕೆಲಸ ಮಾಡೋಣ" ಎಂದು ಪೂನಂ ಪಾಂಡೆ ವಿಡಿಯೋ ಮಾಡಿ ಕೇಳಿಕೊಂಡಿದ್ದಾಳೆ.
ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ ಪೂನಂ ಉದ್ದೇಶವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಆದರೆ ಅದಕ್ಕಾಗಿ ಸಾವಿನ ನಾಟಕ ಬೇಕಿತ್ತಾ? ಎಂದು ಕೇಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ನಿನ್ನೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿತ್ತು. ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದು ಅಂದುಕೊಂಡಿದ್ದರು. ಆದರೆ ಆಕೆಯ ಮ್ಯಾನೇಜರ್ ಪಾರುಲ್ ಚಾವ್ಲಾ ಇದನ್ನು ಖಚಿತಪಡಿಸಿದ್ದರಿಂದ ಎಲ್ಲರೂ ಒಪ್ಪಬೇಕಾಯಿತು. ರಾತ್ರಿಯೇ ಆಕೆ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆದಿದ್ದಾಗಿಯೂ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೂ ಕೂಡ ನಾಲ್ಕು ದಿನಗಳ ಹಿಂದೆ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದ ನಟಿ ದಿಢೀರ್ ಹೇಗೆ ನಿಧನರಾದರು? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿತ್ತು.
ಆಕೆಗೆ ಕ್ಯಾನರ್ ಸೋಕಿದ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಯಾವುದೇ ಆಸ್ಪತ್ರೆಗೆ ದಾಖಲಾದ ಮಾಹಿತಿ ಇಲ್ಲ. ಇನ್ನು ಈ ಸುದ್ದಿ ವೈರಲ್ ಬೆನ್ನಲ್ಲೇ ಆಕೆಯ ಪೋಷಕರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆಕೆಯ ಮೃತದೇಹದ ಒಂದೇ ಒಂದು ಫೋಟೋ ಹೊರಬಂದಿರಲಿಲ್ಲ. ಅದನ್ನೆಲ್ಲಾ ನೋಡಿ ಇದು ಪಬ್ಲಿಸಿಟಿ ಸ್ಟಂಟ್ ಎನ್ನುವುದು ಕೆಲವರಿಗೆ ಸ್ಪಷ್ಟವಾಗಿತ್ತು.
ಪೂನಂ ಪಾಂಡೆ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾದವರು. 2011ರಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದರು. ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸಿದ್ದು ಬಿಟ್ಟರೆ ಬೋಲ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ದರ್ಶನ ಕೊಟ್ಟಿದ್ದೇ ಹೆಚ್ಚು. ಕನ್ನಡದ 'ಲವ್ ಈಸ್ ಪಾಯ್ಸನ್' ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು.


Click it and Unblock the Notifications











