Om Raut: ದೇವಸ್ಥಾನಕ್ಕೆ ಹೋಗಿ ಪ್ರಭಾಸ್ ಅಭಿಮಾನಿಗಳ ಕೈಗೆ ಸಿಕ್ಕಿಬಿದ್ದ 'ಆದಿಪುರುಷ್' ನಿರ್ದೇಶಕ ಓಂ ರಾವುತ್!
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಹುಟ್ಟಾಕ್ಕಿದ ವಿವಾದಗಳು ಗೊತ್ತೇಯಿದೆ. ರಾಮಾಯಣದ ಪಾತ್ರಗಳನ್ನು ಅನುಚಿತವಾಗಿ ಚಿತ್ರಿಸಲಾಗಿದೆ ಎನ್ನುವ ಕಾರಣಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೋರ್ಟ್‌ಗಳಲ್ಲಿ ಚಿತ್ರತಂಡದ ವಿರುದ್ಧ ದೂರುಗಳು ದಾಖಲಾಗಿತ್ತು. ಅಲಹಾಬಾದ್ ಕೋರ್ಟ್ ಚಿತ್ರತಂಡಕ್ಕೆ ಛೀಮಾರಿ ಹಾಕಿತ್ತು. ಚಿತ್ರದ ನಿರ್ದೇಶಕ ಓಂ ರಾವುತ್ ಮೇಲೆ ಪ್ರಭಾಸ್ ಅಭಿಮಾನಿಗಳ ಕೋಪ ಮಾತ್ರ ಇನ್ನು ಕಮ್ಮಿ ಆಗಿಲ್ಲ.
ಟೀಸರ್ ರಿಲೀಸ್ ಆದ ದಿನದಿಂದಲೂ 'ಆದಿಪುರುಷ್' ಸಿನಿಮಾ ಬಗ್ಗೆ ಟೀಕೆ ವ್ಯಕ್ತವಾಗಿತ್ತು. 6 ತಿಂಗಳು ಹೆಚ್ಚಿನ ಸಮಯದ ತೆಗೆದುಕೊಂಡು ತಿದ್ದಿ ತೀಡಿ ಜೂನ್ 16ಕ್ಕೆ ರಿಲೀಸ್ ಮಾಡಿದ್ದರು. ಸಿನಿಮಾ ನೋಡಿದ ಮೇಲೂ ಪ್ರೇಕ್ಷಕರ ಆಕ್ರೋಶ ಕಮ್ಮಿ ಆಗಲಿಲ್ಲ. ಚಿತ್ರದಲ್ಲಿ ರಾವಣ, ಹನುಮಂತನ ಪಾತ್ರಗಳನ್ನು ಚಿತ್ರಿಸಿರುವ ಬಗೆ ತಪ್ಪಾಗಿದೆ. ನಿರ್ದೇಶಕ ಓಂ ರಾವುತ್ ತನಗೆ ಇಷ್ಟಬಂದಂತೆ ರಾಮಾಯಣದ ಪಾತ್ರಗಳನ್ನು ವಕ್ರೀಕರಿಸಿ ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಗಿತ್ತು. ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡು ರಾಮಾಯಣ ಕಾವ್ಯವನ್ನು ಕಟ್ಟಿಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.

ತಿರುಪತಿಯಲ್ಲಿ ನಡೆದ 'ಆದಿಪುರುಷ್' ಪ್ರೀ ರಿಲೀಸ್ ಈವೆಂಟ್‌ನಲ್ಲಿ ಚಿತ್ರತಂಡ ಕೊನೆಯದಾಗಿ ಮಾತನಾಡಿತ್ತು. ಸಿನಿಮಾ ರಿಲೀಸ್ ಆಗಿ ನೆಗೆಟಿವ್ ಟಾಕ್ ಬರ್ತಿದ್ದಂತೆ ಪ್ರಭಾಸ್ ಸೇರಿದಂತೆ ತಂಡದ ಎಲ್ಲರೂ ಸೈಲೆಂಟ್ ಆಗಿದ್ದರು. ಚಿತ್ರದ ಹಿಂದಿ ಸಂಭಾಷಣೆಕಾರ ಮನೋಜ್ ಮುತಾಶೀರ್ ಮಾತ್ರ ಒಂದಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಚಿತ್ರದಲ್ಲಿನ ಕೆಲ ಸಂಭಾಷಣೆಯನ್ನು ಬದಲಿಸಲಾಯಿತು. ಕೊನೆಗೆ ಮನೋಜ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದರು.
ಓಂ ರಾವುತ್ ಪೋಸ್ಟ್
ಚಿತ್ರದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪ್ರಭಾಸ್, ಓಂ ರಾವುತ್ ಸೈಲೆಂಟ್ ಆಗಿದ್ದರು. ಸಿನಿಮಾ ಕಲೆಕ್ಷನ್, ರೆಸ್ಪಾನ್ಸ್ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಟೀಕೆಗಳ ಬಗ್ಗೆಯೂ ಪ್ರತಿಕ್ರಿಯಿಸಲಿಲ್ಲ. 'ಆದಿಪುರುಷ್' ಸಿನಿಮಾ ಬಿಡುಗಡೆಗಿಂತ 4 ದಿನ ಮುನ್ನ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿತ್ತು. ಈ ಬಗ್ಗೆ ಕೊನೆಯದಾಗಿ ನಿರ್ದೇಶಕರು ಪೋಸ್ಟ್ ಮಾಡಿದ್ದರು. ಇದೀಗ ಒಂದೂವರೆ ತಿಂಗಳ ಬಳಿಕ ಹೊಸ ಪೋಸ್ಟ್ ಮಾಡಿದ್ದಾರೆ. ಗೋವಾದ ಶ್ರೀ ಮಂಗೇಶಿ ದೇವಾಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಫೋಟೊಗಳ ಸಮೇತ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಪ್ರಭಾಸ್ ಅಭಿಮಾನಿಗಳು ಗರಂ
"ಶ್ರೀ ಮಂಗೇಶಿ ದೇವಸ್ಥಾನ ಮತ್ತು ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ದೇವರ ದರ್ಶನ ಆಯಿತು. ಇಲ್ಲಿಗೆ ಪ್ರತಿಬಾರಿ ಭೇಟಿ ನೀಡಿದಾಗ ನನ್ನ ಬಾಲ್ಯದ ನೆನಪಾಗುತ್ತದೆ. ಈ ಎರಡೂ ಪವಿತ್ರ ಸ್ಥಳಗಳು ನನ್ನ ಮೂಲವನ್ನು ನೆನಪಿಸುತ್ತಿರುತ್ತವೆ. ಅದಕ್ಕೆ ಇಲ್ಲಿಗೆ ಬರಲು ಬಹಳ ಉತ್ಸುಕನಾಗಿರುತ್ತೇನೆ" ಎಂದು ಓಂ ರಾವುತ್ ಬರೆದುಕೊಂಡಿದ್ದಾರೆ. ಆದರೆ ಪ್ರಭಾಸ್ ಅಭಿಮಾನಿಗಳು ಮಾತ್ರ ನಿರ್ದೇಶಕರ ಮೇಲೆ ಗರಂ ಆಗಿದ್ದಾರೆ. ಬಹಳ ದಾರುಣವಾಗಿ ಕಾಮೆಂಟ್ ಮಾಡುತ್ತಿದ್ಧಾರೆ. "ನೀನು ದೇವರ ಸಿನಿಮಾ ಮಾಡ್ಲೇಬೇಡು" ಅಂತ ಒಬ್ಬರು, "600 ಕೋಟಿ ರೂ. ಹಾಳು ಮಾಡಿದೆ ಅಲ್ವಾ?" ಅಂತ ಮತ್ತೊಬ್ಬರು ಬರೆದಿದ್ದಾರೆ. "ಸರ್ ಮಹಾಭಾರತ ಸಿನಿಮಾ ಮಾಡಿ" ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 'ಆದಿಪುರುಷ್' ಸೋಲು
ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ಸ್ ಬ್ಯಾನರ್‌ಗಳು ಜಂಟಿಯಾಗಿ 'ಆದಿಪುರುಷ್' ಸಿನಿಮಾ ನಿರ್ಮಿಸಿದ್ದವು. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ ಕೃತಿ ಸನೂನ್ ಜಾನಕಿಯಾಗಿ, ಸೈಫ್ ಅಲಿಖಾನ್ ರಾವಣನಾಗಿ ಬಣ್ಣ ಹಚ್ಚಿದ್ದರು. 'ಆದಿಪುರುಷ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಿದ್ದರಿಂದ ಮಿಶ್ರಪ್ರತಿಕ್ರಿಯೆ ನಡುವೆಯೂ ಮೊದಲೆರಡು ದಿನ ಭರ್ಜರಿ ಕಲೆಕ್ಷನ್ ಆಗಿತ್ತು. ಆದರೆ ನಂತರ ಸಿನಿಮಾ ಮುಗ್ಗರಿಸಿತ್ತು. ಅಲ್ಲಿಂದ ಮುಂದೆ ಚೇತರಿಸಿಕೊಳ್ಳಲೇಯಿಲ್ಲ.
200 ಕೋಟಿ ರೂ. ನಷ್ಟ?
ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿಬಂದಿತ್ತು. ಬರೀ ಗ್ರೀನ್‌ಮ್ಯಾಟ್‌ನಲ್ಲಿ ಸಿನಿಮಾ ಚಿತ್ರೀಕರಣವಾಗಿತ್ತು. ಹಾಗಾಗಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿತ್ತು. ಪ್ರಭಾಸ್, ಸೈಫ್ ಅಲಿಖಾನ್ ಸಂಭಾವನೆ ಕೂಡ ಜಾಸ್ತಿ ಇತ್ತು. ಅಂದಾಜು 600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದೆ ಎನ್ನಲಾಗಿತ್ತು. ಆದರೆ ಸಿನಿಮಾ 25 ದಿನ ಕೂಡ ಸರಿಯಾಗಿ ಪ್ರದರ್ಶನ ಕಾಣಲಿಲ್ಲ. ಚಿತ್ರತಂಡ ಬರೋಬ್ಬರಿ 200 ಕೋಟಿ ನಷ್ಟವಾಗಿರುವ ಅಂದಾಜಿದೆ. ಅಂದಹಾಗೆ ಸಿನಿಮಾ ಆಗಸ್ಟ್ 1ರಂದು ಓಟಿಟಿಗೆ ಬರಲಿದೆ.


Click it and Unblock the Notifications











