ಸಿಂಗಲ್ ಪೋಸ್ಟರ್‌ನಿಂದ ಬದಲಾಯ್ತು 'ಆದಿಪುರುಷ್' ಲೆಕ್ಕಾಚಾರ: ಸಣ್ಣ ಸಾಂಗ್ ಝಲಕ್ ಕೇಳಿ ಫ್ಯಾನ್ಸ್ ದಿಲ್ ಖುಷ್
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆದ್ರು ಕೆಲವರಿಗೆ ಸಿನಿಮಾ ಔಟ್‌ಫುಟ್ ಬಗ್ಗೆ ಅಷ್ಟೇನು ಕುತೂಹಲ ಇಲ್ಲ. ಟೀಸರ್ ನೋಡಿದ್ಮೇಲೆ ಸಿನಿಮಾ ಅಷ್ಟೇನು ಅದ್ಭುತವಾಗಿ ಇರಲ್ಲ ಅನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಆದರೆ ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಹಾಗೂ ಸಾಂಗ್ ಝಲಕ್ ಗಮನ ಸೆಳೆದಿದೆ. ಮತ್ತೆ ಸಿನಿಮಾ ಬಗ್ಗೆ ಬಝ್ ಕ್ರಿಯೇಟ್ ಆಗ್ತಿದೆ.
ಓಂ ರಾವುತ್ ಈ ಪೌರಾಣಿಕ ಕಥಾಹಂದರದ ತ್ರೀಡಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. 400 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಭಾರೀ ಟೀಕೆಗಳ ನಡುವೆಯೂ 'ಆದಿಪುರುಷ್' ಟೀಸರ್ ಸೂಪರ್ ಹಿಟ್ ಆಗಿದೆ. ಪ್ರಭಾಸ್ ಕ್ರೇಜ್ ಹಾಗೂ ರಾಮಾಯಣ ಕಾವ್ಯದ ಕಥೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚುವಂತೆ ಮಾಡಿರುವುದು ಸುಳ್ಳಲ್ಲ. ಇನ್ನು ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆಯೂ ಭಾರೀ ಲೆಕ್ಕಾಚಾರ ಶುರುವಾಗಿದೆ. ಪ್ರಭಾಸ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಸದ್ಯ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಅಕ್ಷಯ ತೃತೀಯ ಸಂಭ್ರಮದಲ್ಲಿ 'ಆದಿಪುರುಷ್' ಲಿರಿಕಲ್ ಮೋಷನ್ ಪೋಸ್ಟರ್ ಹೊರ ಬಂದಿದೆ. ರಾಘವನಾಗಿ ಪ್ರಭಾಸ್ ಬಿಲ್ಲಿಗೆ ಎದೆ ಏರಿಸಿ ಮುಂದೆ ಬಾಗಿ ನಿಂತಂತೆ ಇರುವ ಪೋಸ್ಟರ್ ನಿಜಕ್ಕೂ ಅಭಿಮಾನಿಗಳ ಮನ ಗೆದ್ದಿದೆ. ಇನ್ನು ರಾಮ ಸೇತು ಕಟ್ಟಲು ಶ್ರೀರಾಮನಿಗೆ ಬಲವಾಗಿ ನಿಂತ ವಾನರ ಸೇನೆಯ ಜೈ ಶ್ರೀರಾಮ್ ಮಂತ್ರ ಸೋಶಿಯಲ್ ಮೀಡಿಯಾದಲ್ಲಿ ಮಾರ್ದನಿಸುತ್ತಿದೆ.
ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಹಾಗೂ ಹಿಂದಿಯಲ್ಲಿ ಮನೋಜ್ ಮುನ್ತಾಶಿರ್ ಶುಕ್ಲಾ ಸಾಹಿತ್ಯ ಬರೆದಿದ್ದಾರೆ. ನಮಗೆ ಬಲವಾಗಿ ನಿಂತ ನಿನ್ನೊಟ್ಟಿಗೆ ನಾವಿದ್ದೇವೆ ಎಂದು ವಾರನ ಸೇನೆ ರಾಮನನ್ನು ಭಜಿಸುತ್ತಾ ರಾಮಸೇತು ನಿರ್ಮಿಸುವ ಹಿನ್ನೆಲೆಯಲ್ಲಿ ಈ ಹಾಡು ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ 'ಆದಿಪುರುಷ್' ಸಿನಿಮಾ ತೆರೆಗಪ್ಪಳಿಸಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಸಂಭ್ರಮದಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು.
ಟೀಸರ್‌ಗೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರೀವರ್ಕ್ ಕೆಲಸ ನಡೀತಿದೆ. ಪ್ರೇಕ್ಷಕರು ಒಪ್ಪುವಂತೆ ಚಿತ್ರವನ್ನು ತಿದ್ದಿ ತೀಡುವ ಕೆಲಸ ಭರದಿಂದ ಸಾಗಿದೆ. ಚಿತ್ರದಲ್ಲಿ ಜಾನಕಿಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಲಂಕೇಶನಾಗಿ ಸೈಫ್ ಅಲಿಖಾನ್ ಹಾಗೂ ಹನುಮಾನ್ ಆಗಿ ದೇವದತ್ತ ಬಣ್ಣ ಹಚ್ಚಿದ್ದಾರೆ. ಕಾರ್ತಿಕ್ ಪಳನಿ ಸಿನಿಮಾಟೋಗ್ರಫಿ, ಅಜಯ್ ಅತುಲ್ ಮ್ಯೂಸಿಕ್ ಚಿತ್ರಕ್ಕಿದೆ.
ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ ಈ ಪೌರಾಣಿಕ ದೃಶ್ಯಕಾವ್ಯವನ್ನು ಪ್ರೇಕ್ಷಕರ ಮುಂದೆ ತರ್ತಿವೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರೋದು ಪಕ್ಕಾ ಆಗಿದೆ. ಮತ್ತಷ್ಟು ಭಾಷೆಗಳಿಗೆ ಡಬ್ ಮಾಡುವ ಸಾಧ್ಯತೆಯಿದೆ. ಕಳೆದ ವರ್ಷ ಅಕ್ಟೋಬರ್ 2ರಂದು ಅಯೋಧ್ಯೆಯಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಚಿತ್ರದ ಗ್ರಾಫಿಕ್ಸ್ ಹಾಗೂ ರಾವಣ- ಹನುಮಂತನ ವೇಷಭೂಷಣಗಳ ಬಗ್ಗೆ ಸಾಕಷ್ಟು ಜನ ಚಕಾರ ಎತ್ತಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕೆಲವರು ಆರೋಪಿಸಿದ್ದರು. ಕೆಲವು ಚಿತ್ರತಂಡದ ವಿರುದ್ಧ ದೂರು ಕೂಡ ದಾಖಲಿಸಿದ್ದರು.
ಜೂನ್ 16ರಂದು 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕಿಂತ 3 ದಿನ ಮೊದ್ಲೆ ತ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣಲಿದೆ. ಸದ್ಯ ರಿಲೀಸ್ ಆಗಿರುವ ಮೋಷನ್ ಪೋಸ್ಟರ್‌ನಿಂದ ಸಿನಿಮಾ ಬಗ್ಗೆ ಕೊಂಚ ನಿರೀಕ್ಷೆ ಮೂಡುತ್ತಿದೆ. ಇನ್ನು ಥ್ರಿಡಿಯಲ್ಲಿ ಸಿನಿಮಾ ಅನುಭವ ಹೇಗಿರುತ್ತೆ ಎಂದು ಪ್ರೇಕ್ಷಕರು ಕಾಯುತ್ತಿದ್ಧಾರೆ. ಸಿನಿಮಾ ಕಾಲಾವಧಿ 2 ಗಂಟೆ 54 ನಿಮಿಷ ಅನ್ನುವ ಮಾಹಿತಿ ಸಿಕ್ಕಿದೆ.


Click it and Unblock the Notifications











