ಮೈಜುಮ್ ಎನಿಸುವ 'ಆದಿಪುರುಷ್' ರಿಹರ್ಸಲ್.. ಓಂ ಮೇಕಿಂಗ್ ಸೀಕ್ರೆಟ್ ಬಯಲು: ಪ್ರಭಾಸ್ ರಿಯಲ್ ಸ್ಟಂಟ್ಸ್ ಮಾಡ್ಲಿಲ್ವಾ?
ರಾಮಾಯಣ ಕಾವ್ಯ ಆಧರಿಸಿದ ನಿರ್ಮಾಣವಾಗಿರುವ 'ಆದಿಪುರುಷ್' ಸಿನಿಮಾ ಭಾರೀ ವಿವಾದ ಸೃಷ್ಟಿಸಿದೆ. ಅಲಹಾಬಾದ್ ಕೋರ್ಟ್ ಕೂಡ ಚಿತ್ರ ರಿಲೀಸ್‌ಗೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಹಾಗೂ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಸಿನಿಮಾ ಒಂದು ಹಂತಕ್ಕೆ ಚೆನ್ನಾಗಿದೆ ಅನ್ನಿಸಿದರೂ ಕೆಟ್ಟ ವಿಎಫ್‌ಎಕ್ಸ್ ಹಾಗೂ ರಾಮಾಯಣದ ಪಾತ್ರಗಳನ್ನು ತಿದ್ದಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಓಂ ರಾವುತ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಬ್ಲೂಮ್ಯಾಟ್‌ನಲ್ಲೇ ಬಹುತೇಕ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಪ್ರಭಾಸ್ ಸಿನಿಮಾ ಕಂಪ್ಲೀಟ್ ಮಾಡಿದ್ದರು. 'ಬಾಹುಬಲಿ', 'RRR' ರೀತಿಯ ಸಿನಿಮಾ ಮಾಡಲು ರಾಜಮೌಳಿ ಮೂರ್ನಾಲ್ಕು ವರ್ಷ ವ್ಯಯಿಸಿದ್ದರು. ಆದರೆ 'ಆದಿಪುರುಷ್' ರೀತಿಯ ಇಷ್ಟು ದೊಡ್ಡ ಚಿತ್ರವನ್ನು ಅಷ್ಟು ಬೇಗ ಪೂರ್ಣಗೊಳಿಸಿದ್ದು ಅಚ್ಚರಿ ಮೂಡಿಸಿತ್ತು.

'ಆದಿಪುರುಷ್' ಸಿನಿಮಾ ಮೇಕಿಂಗ್ ಹೇಗಿತ್ತು ಎನ್ನುವುದರ ವಿಡಿಯೋವೊಂದು ಈಗ ಲೀಕ್ ಆಗಿ ಸದ್ದು ಮಾಡ್ತಿದೆ. ಇದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮೈಜುಮ್ ಎನಿಸುವ ರಿಹರ್ಸಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಪ್ರಭಾಸ್ ಎಂಟ್ರಿ ಸೀನ್
ರಾವಣನ ತಪಸ್ಸಿನೊಂದಿಗೆ 'ಆದಿಪುರುಷ್' ಸಿನಿಮಾ ಶುರುವಾಗುತ್ತದೆ. ಆ ದೃಶ್ಯದ ನಂತರ ತಪಸ್ಸಿಗೆ ಕುಳಿತ ಶ್ರೀರಾಮನ ಮೇಲೆ ರಾಕ್ಷದ ರೂಪದ ವಿಚಿತ್ರ ಶಕ್ತಿಗಳು ಆಕ್ರಮಣ ಮಾಡುತ್ತವೆ. ಅದರ ವಿರುದ್ಧ ಶ್ರೀರಾಮ ಹೋರಾಡುವ ಸನ್ನಿವೇಶ ಅದು. ಮೈಜುಮ್ ಎನಿಸುವ ಈ ಸೀಕ್ವೆನ್ಸ್ ಶೂಟಿಂಗ್ ಹೇಗಿತ್ತು ಅನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡ್ಯೂಪ್ ಒಬ್ಬರು ಪ್ರಭಾಸ್ ಬದಲು ಈ ರಿಹರ್ಸಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಮೂಮೆಂಟ್, ಸ್ಟಂಟ್‌ಮನ್‌ಗಳ ಮೂಮೆಂಟ್ ಹೇಗಿರಬೇಕು ಎನ್ನುವುದನ್ನು ನೋಡಿಕೊಳ್ಳಲು ರಿಹರ್ಸಲ್ ಮಾಡಲಾಗಿದೆ.
ಓಂ ರಾವುತ್‌ಗೆ ಬಹುಪರಾಕ್
'ಆದಿಪುರುಷ್' ಸಿನಿಮಾ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಓಂ ರಾವುತ್ ಪಾತ್ರಗಳನ್ನು ಚಿತ್ರಿಸಿರುವ ರೀತಿ ಕಂಡು ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಆದರೆ ಈ ರಿಹರ್ಸಲ್ ವಿಡಿಯೋ ನೋಡಿದ ಮೇಲೆ ನಿರ್ದೇಶಕನ ಪ್ರತಿಭೆಯನ್ನು ಕೆಲವರು ಕೊಂಡಾಡುತ್ತಿದ್ದಾರೆ. ಈ ವಿಡಿಯೋ ಮೊದಲೇ ಬಿಟ್ಟಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ. ಸಿನಿಮಾ ಮೇಕಿಂಗ್ ಎಲ್ಲಾ ಚೆನ್ನಾಗಿದೆ. ಆದರೆ ಪಾತ್ರಗಳ ಚಿತ್ರಣ ವಿಚಾರದಲ್ಲಿ ಪ್ರಯೋಗ ಮಾಡದೇ ಇದ್ದಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ.

ಪ್ರಭಾಸ್ ನಿಜಕ್ಕೂ ಸ್ಟಂಟ್ಸ್ ಮಾಡಿದ್ರಾ?
ಈ ರಿಹರ್ಸಲ್ ವಿಡಿಯೋ ನೋಡಿದ ಮೇಲೆ ಕೆಲವರು ಪ್ರಭಾಸ್ ನಿಜಕ್ಕೂ ಚಿತ್ರದಲ್ಲಿ ಈ ಸ್ಟಂಟ್ಸ್ ಮಾಡಿದ್ರಾ? ಅಥವಾ ಬಹುತೇಕ ಡ್ಯೂಪ್ ಹಾಕಿ ಓಂ ರಾವುತ್ ಸಿನಿಮಾ ಮಾಡಿಬಿಟ್ರಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಇದೇ ದೃಶ್ಯದಲ್ಲಿ ಪ್ರಭಾಸ್ ಮೇಲೆ ಆಕ್ರಮಣ ಮಾಡುವ ದುಷ್ಟಶಕ್ತಿಗಳ ಚಿತ್ರವನ್ನು ಹಾಲಿವುಡ್ ಸಿನಿಮಾಗಳಿಂದ ಯಥಾವತ್ ತೆಗೆದುಕೊಂಡಿರೋದು ಗೊತ್ತಾಗುತ್ತಿದೆ.
450 ಕೋಟಿ ರೂ. ಕಲೆಕ್ಷನ್?
ಎಲ್ಲಾ ವಿವಾದಗಳ ನಡುವೆಯೂ 'ಆದಿಪುರುಷ್' ಸಿನಿಮಾ ಅಂದಾಜು 450 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಹೇಳ್ತಿದೆ. ಕೆಲವರು ಇದು ಸುಳ್ಳು ಲೆಕ್ಕ ಎನ್ನುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರುವ ಸುಳಿವು ಸಿಗುತ್ತಿದೆ. ಇನ್ನು 'ಆದಿಪುರುಷ್' ಸಿನಿಮಾ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರು ಸಮಯದಲ್ಲೇ ರಾಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿ ಮುಂದಿನ ವಾರ ಮರುಪ್ರಸಾರವಾಗಲಿದೆ.


Click it and Unblock the Notifications











