ಡೈರೆಕ್ಟರ್ ಕಟ್ ಹೇಳಿದರೂ ಕಿಸ್ ಕೊಡುತ್ತಲೇ ಇದ್ದ ; ಸೈಕೋ ಹೀರೋನ 'ಕಾಮ'ನೆಗೆ ನಲುಗಿ ಕಣ್ಣೀರಾದ ನಟಿ
ಹೆಣ್ಣು ಮಕ್ಕಳ ಪಾಲಿಗೆ ಚಿತ್ರರಂಗದ ಪ್ರಯಾಣ ಸುಲಭ ಅಲ್ಲ. ಯಾಕೆಂದರೆ ಝಗಮಗ ಗ್ಲಾಮರ್ ಲೋಕದ ಹಿಂದೆ ಇಲ್ಲಿ ಕತ್ತಲಿದೆ. ಕ್ಯಾಮರಾದ ಹಿಂದೆ ವಿಕೃತ ಮನಸ್ಥಿತಿಯ ಹಿಂಡಿದೆ. ಬೆಳ್ಳಿತೆರೆಯ ಮೇಲೆ ಹಲವರು ಇಲ್ಲಿ ಸಬಲೀಕರಣ ಸಮಾನತೆಯ ಪಾಠವನ್ನೇನೋ ಮಾಡುತ್ತಾರೆ. ಆದರೆ ತೆರೆಯ ಹಿಂದೆ ಹೆಣ್ಣು ಮಕ್ಕಳಿಗೆ ಇನ್ನಿಲ್ಲದಂತೆ ಕಾಡುತ್ತಾರೆ. ಅಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡುತ್ತಾರೆ.
ಇನ್ನು ಕಲಾವಿದರಿಗೆ ಪಾತ್ರ ಮುಖ್ಯ. ತಮಗೆ ನೀಡಲಾದ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಮಾನ್ಯವಾಗಿ ಕಲಾವಿದರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಪರಕಾಯ ಪ್ರವೇಶವನ್ನು ಮಾಡುತ್ತಾರೆ. ಮುಜುಗರಕ್ಕೀಡಾಗುವ ಸನ್ನಿವೇಶಗಳಿದ್ದರೂ ಕೂಡ ಪಾತ್ರದ ದೃಷ್ಟಿಯಿಂದ ಅಭಿನಯಿಸುತ್ತಾರೆ. ಅದರಲ್ಲಿಯೂ ನಾಯಕಿಯರು ಕೆಲವೊಮ್ಮೆ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ಪಾತ್ರಗಳನ್ನು ನಿರ್ವಹಿಸುತ್ತಾರೆ. ಬೋಲ್ಡ್ ಆದ ರೊಮ್ಯಾಂಟಿಕ್ ದೃಶ್ಯಗಳಲ್ಲಿಯೂ ಕೂಡ ಭಾಗವಹಿಸುತ್ತಾರೆ.

ಆದರೆ ಇವರ ಬೋಲ್ಡ್‌ನೆಸ್ ಅನ್ನೇ ಕೆಲವರು ಅಡ್ವಾಂಟೇಜ್ ಆಗಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ನಟನೆ ಹೆಸರಿನಲ್ಲಿ ಜಿಗುಪ್ಸೆ ಬರುವಷ್ಟು ಹಿಂಸೆ ಕೊಡುತ್ತಾರೆ. ಉದಾಹರಣೆಗೆ ಪ್ರಿಯಾ ಬಾಪಟ್ ಅವರ ಜೀವನಾನುಭವವನ್ನೇ ತೆಗೆದುಕೊಳ್ಳಿ.
ಹೌದು, ಪ್ರಿಯಾ ಬಾಪಟ್. ಮಹಾರಾಷ್ಟ್ರದ ಚೆಲುವೆ. 2000ನೇ ಇಸ್ವಿಯಲ್ಲಿ ಹಿಂದಿಯಲ್ಲಿ ತೆರೆಗೆ ಬಂದ ''ಡಾ. ಬಾಬಾಸಾಹೇಬ್ ಅಂಬೇಡ್ಕರ್'' ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಬಂದ ಪ್ರಿಯಾ ಆ ನಂತರ ಮರಾಠಿಯಲ್ಲಿ ತೆರೆಗೆ ಬಂದ ''ಮಿ ಶಿವಾಜಿರಾಜೆ ಬೋಸಲೆ ಬೋಲ್ತೋಯ್'' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು.
''ಬಾಂದಿನಿ''.. ''ಅಧೂರಿ ಏಕ್ ಕಹಾನಿ''.. ''ಟೈಮ್‌ಪಾಸ್ 2''.. ''ವಜೇದಾರ್''.. ''ಕಾಕಸ್ಟರ್ಶ''.. ಇವರ ಕೆಲ ಖ್ಯಾತ ಸಿನಿಮಾಗಳು. ಇನ್ನು ''ಸಿಟಿ ಆಫ್ ಡ್ರೀಮ್ಸ್'' ಇವರ ಪ್ರಖ್ಯಾತ ವೆಬ್ ಸರಣಿ. ಈ ಸೀರಿಸ್ ಮೂಲಕ ಭಾರತದೆಲ್ಲೆಡೆ ಮನೆ ಮಾತಾದವರು ಪ್ರಿಯಾ ಬಾಪಟ್. ಇಂಥಾ ಪ್ರಿಯಾ ಬಾಪಟ್ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ನಾಯಕನೊಬ್ಬನಿಂದ ಅನುಭವಿಸಿದ ನರಕಯಾತನೆ ನೆನೆದು ಕಣ್ಣೀರಾಗಿದ್ದಾರೆ.
ಹೌದು, ''ಫಿಲ್ಮ್ ಫೇರ್''ಗೆ ಮರಾಠಿಯ ಖ್ಯಾತ ನಾಯಕಿಯರಾದ ಸಾಯಿ ತಾಮಣಕರ್.. ಅಮೃತಾ ಖಾನ್ವಿಲ್ಕರ್.. ಸೋನಾಲಿ ಕುಲಕರ್ಣಿ ಮತ್ತು ಪ್ರಿಯಾ ಬಾಪಟ್ ರೌಂಡ್ ಟೇಬಲ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಹತ್ತಾರು ವಿಚಾರಗಳ ಕುರಿತು ಮಾತನಾಡಿದ್ಧಾರೆ. ಇದೇ ಸಂದರ್ಭದಲ್ಲಿ ಪ್ರಿಯಾ ಚಿತ್ರದ ಚಿತ್ರೀಕರಣದ ನೆಪದಲ್ಲಿ ಆ ಚಿತ್ರದ ನಾಯಕ ತನ್ನ ಜೊತೆ ಹೇಗೆಲ್ಲಾ ಅಸಭ್ಯವಾಗಿ ನಡೆದುಕೊಂಡ ಎನ್ನುವುದನ್ನು ಹೇಳಿದ್ದಾರೆ.

ನಾನೊಂದು ಹಿಂದಿ ಚಿತ್ರ ಮಾಡಿದ್ದೇ, ಆ ಚಿತ್ರದ ಚಿತ್ರೀಕರಣ ಭೋಪಾಲ್‌ನಲ್ಲಿ ನಡೆಯುತ್ತಿತ್ತು ಎಂದು ನೆನಪು ಮಾಡಿಕೊಂಡಿರುವ ಪ್ರಿಯಾ ಆ ಚಿತ್ರದಲ್ಲಿ ಒಂದೇ ಒಂದು ಕಿಸ್ ದೃಶ್ಯ ಇತ್ತು, ಆ ಸನ್ನಿವೇಶ ಕೂಡ ಅನಗತ್ಯವಾಗಿತ್ತು ಎಂದು ಹೇಳಿದ್ದಾರೆ.
ಆ ದೃಶ್ಯ ಅನಗತ್ಯವಾದ ಹಿನ್ನೆಲೆ, ನಾನು ನಿರ್ದೇಶಕರ ಹತ್ತಿರ ಚರ್ಚೆ ಮಾಡಿದೆ, ಆದರೆ ಕೊನೆಗೆ ಅವರ ಒತ್ತಾಯಕ್ಕೆ ಒಪ್ಪಿಕೊಂಡೆ ಎಂದು ಹೇಳಿರುವ ಪ್ರಿಯಾ ಬಾಪಟ್ ಆ ದೃಶ್ಯ ಮುಕ್ತಾಯವಾದರೂ, ನಿರ್ದೇಶಕರು ಕಟ್ ಎಂದು ಹೇಳಿದರೂ ಕೂಡ ಆ ನಟ ನನ್ನ ಜೊತೆ ಮೀತಿ ಮೀರಿ ವರ್ತಿಸಿದ, ನಿರಂತರವಾಗಿ ನನಗೆ ಮುತ್ತಿಡುತ್ತಲೇ ಇದ್ದ ಎಂದು ಭಾವುಕರಾಗಿದ್ದಾರೆ.
ಆ ಸಮಯದಲ್ಲಿ ನಾನು ಗೊಂದಲಕ್ಕೀಡಾಗಿದ್ದೆ, ಅಕ್ಷರಶಃ ಬೆಚ್ಚಿ ಬಿದ್ದಿದೆ ಎಂದು ಆ ಕರಾಳ ದಿನ ನೆನೆಪು ಮಾಡಿಕೊಂಡಿರುವ ಪ್ರಿಯಾ, ನನಗಾಗಿ ನಾನು ಅಂದು ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ, ಧ್ವನಿ ಎತ್ತಲು ಸಾಧ್ಯವಾಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರೆದು ನಾವು ಇಬ್ಬರು ಒಂದೇ ಹೋಟೆಲ್‌ನಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ತಂಗಿಕೊಂಡಿದ್ದೇವು ಎಂದು ಹೇಳಿರುವ ಪ್ರಿಯಾ ಆ ನಟ ನನಗೆ ಒಂದಾದ ಮೇಲೊಂದರಂತೆ ಮೆಸೇಜ್ ಮಾಡುತ್ತಿದ್ದ, ಹಿಂಸೆ ಕೊಡಲು ಶುರು ಮಾಡಿದ್ದ, ರಾತ್ರಿ ಊಟಕ್ಕೆ ಹೋಗೋಣ ಬಾ ಎಂದು ಪೀಡಿಸುತ್ತಿದ್ದ, ಇಷ್ಟೇ ಅಲ್ಲ ನನ್ನ ರೂಮ್‌ಗೆ ಬಾ ಎಂದು ಒತ್ತಾಯವನ್ನು ಕೂಡ ಮಾಡುತ್ತಿದ್ದ ಎಂದು ಹೇಳಿದ್ದಾರೆ. ನಿನಗೆ ಈಜು ಕಲಿಸುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ ಎಂದು ಹೇಳಿದ್ಧಾರೆ.
ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಾಮಾನ್ಯವಾಗಿ ತಬ್ಬಿಕೊಳ್ಳುವ ದೃಶ್ಯದಲ್ಲಿಯೂ ಕೂಡ ಅವನ ಸ್ಪರ್ಶದಲ್ಲಿ ಕಾ*ಮದ ವಾಸನೆ ಇರುವುದು ನನಗೆ ಗೊತ್ತಾಗುತ್ತಿತ್ತು ಎಂದು ಹೇಳಿರುವ ಪ್ರಿಯಾ, ಬೇಕು ಬೇಕಂತಲೇ ಆ ಸೀನ್‌ಗಳಲ್ಲಿ ಅವನು ರಿಟೇಕ್ ತೆಗೆದುಕೊಳ್ಳುತ್ತಿದ್ದ ಎಂದು ಭಾವುಕರಾಗಿದ್ಧಾರೆ.
ಅವನ ಈ ಮಾನಸಿಕ ಹಿಂಸೆ ತಡೆಯಲಾರದೇ ನಾನು ಪ್ರತಿ ರಾತ್ರಿ ನನ್ನ ಗಂಡ ಉಮೇಶ್‌ಗೆ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದೆ ಎಂದು ಹೇಳಿರುವ ಪ್ರಿಯಾ ಅದೇ ಮೊದಲ ಬಾರಿ ನಮ್ಮ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಯಾವುದೇ ಮಾಹಿತಿ ನೀಡದೆ ನನ್ನ ಗಂಡ ಉಮೇಶ್ ಮುಂಬೈನಿಂದ ಭೋಪಾಲ್‌ನಲ್ಲಿನ ಚಿತ್ರೀಕರಣದ ಸ್ಥಳಕ್ಕೆ ಬಂದರು, ಮುಂದಿನ ಮೂರು ದಿನ ನನ್ನ ಜೊತೆಗಿದ್ದು, ಈ ಕಠಿಣ ಪರಿಸ್ಥಿತಿಯಿಂದ ಹೊರಬರಲು ನನಗೆ ಮಾನಸಿಕವಾಗಿ ಧೈರ್ಯ ತುಂಬಿದರು ಎಂದು ತಮ್ಮ ಆಘಾತಕಾರಿ ಅನುಭವವನ್ನು ಪ್ರಿಯಾ ಹಂಚಿಕೊಂಡಿದ್ಧಾರೆ.
ಸದ್ಯ ಪ್ರಿಯಾ ಬಾಪಟ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಆ ಹಿಂದಿ ನಟ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವನ್ನು ಅನೇಕರು ಮಾಡುತ್ತಿದ್ಧಾರೆ. ಬಹುತೇಕರು ಆ ವ್ಯಕ್ತಿ ಯಾರೆನ್ನುವುದನ್ನು ಕೂಡ ಕಂಡು ಹಿಡಿದಿದ್ಧಾರೆ.


Click it and Unblock the Notifications