ಅಸೂಯೆ, ಹೊಟ್ಟೆ ಕಿಚ್ಚು ; ‘ಭೂತ್ ಬಂಗ್ಲಾ’ದಲ್ಲಿ ಟಬು ಪಾತ್ರಕ್ಕೆ ಕತ್ತರಿ ಹಾಕಿದ ಅಕ್ಷಯ್ ಕುಮಾರ್ ? ಪ್ರಿಯದರ್ಶನ್ ಹೇಳಿದ್ದೇನು ?
ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎಂಬ ಸ್ಥಾನ ಅಲಂಕರಿಸಿದ್ದರೂ ಕೂಡ ಹಲವರ ಮನದ ಮೂಲೆಯಲ್ಲಿ ಅಭದ್ರತೆಯ ಭಾವ ಇದ್ದೇ ಇರುತ್ತೆ. ಚಿತ್ರದಲ್ಲಿ ಅಭಿನಯಿಸಿರುವ ನಿನ್ನೆ.. ಮೊನ್ನೆ.. ಬಂದ ಹೊಸಬರು.. ಅಥವಾ ನನ್ನ ಸಮಕಾಲೀನರು.. ನನಗಿಂತ ಚೆನ್ನಾಗಿ ಅಭಿನಯಿಸಿದ್ದರೆ..? ನನ್ನ ಪಾತ್ರಕ್ಕಿಂತ ಅವರ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ನೀಡಲಾಗಿದ್ದರೆ ..? ಜನ ನನ್ನ ಮರೆತು ಅವರಿಗೆ ಬಹುಪರಾಕ್ ಹಾಕಿದರೆ..? ಎನ್ನುವ ಭಯ ಅದು.
ಹೀಗಾಗಿಯೇ ಹಲವರು ತಮ್ಮ ಪ್ರಭಾವಳಿಯನ್ನು ಉಪಯೋಗಿಸಿಕೊಂಡು ಚಿತ್ರದಲ್ಲಿನ ಬೇರೆಯವರ ಪಾತ್ರಕ್ಕೆ ಕತ್ತರಿ ಹಾಕುವ ಕೆಲಸವನ್ನು ಪ್ರಾಮಾಣಿಕವಾಗಿ ಇಲ್ಲಿ ಮಾಡುತ್ತಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತೆ ಚಿತ್ರದ ದೃಶ್ಯಗಳನ್ನು ಜೋಡಿಸಿ-ಕತ್ತರಿ ಹಾಕುವ ಸಮಯದಲ್ಲಿ ನಿರ್ದೇಶಕರ ಮೇಲೆ ಒತ್ತಡ ಹಾಕಿ ಬೇಕು ಬೇಕಂತಲೇ ಕತ್ತರಿ ಪ್ರಯೋಗ ಮಾಡಿಸುತ್ತಾರೆ. ಈ ಮೂಲಕ ಇಡೀ ಚಿತ್ರದೂದ್ದಕ್ಕೂ ತಾವೇ ಮಿಂಚುವಂತೆ ನೋಡಿಕೊಂಡಿರುತ್ತಾರೆ. ಸದ್ಯ ಇಂತಹದ್ದೇ ಒಂದು ಕೆಲಸ ಅಕ್ಷಯ್ ಕುಮಾರ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಹೌದು, ಅಸಲಿಗೆ ಅಕ್ಷಯ್ ಕುಮಾರ್ ಬಹುದಿನಗಳ ನಂತರ ಗೆದ್ದಿದ್ದಾರೆ. ''ಭೂತ್ ಬಂಗ್ಲಾ'' ಮೂಲಕ ನಗೆ ಬೀರಿದ್ದಾರೆ. ಆದರೆ ಈ ನಗು ಹಿಂದೆ ಷಡ್ಯಂತ್ರ ಮತ್ತು ಅಸೂಯೆಯ ವಾಸನೆ ಇದೆ ಎನ್ನುವ ಮಾತು ಹಿಂದಿ ಉದ್ಯಮದಲ್ಲಿ ಗುಲ್ಲಾಗಿದೆ.
''ಭೂತ್ ಬಂಗ್ಲಾ'' ಚಿತ್ರದಲ್ಲಿ ಎಲ್ಲಿ ತಮಗಿಂತ ಟಬು ಹೆಚ್ಚು ಮಿಂಚುತ್ತಾರೆ ಎನ್ನುವ ಭಯದಲ್ಲಿ ಅಕ್ಷಯ್ ಕುಮಾರ್ ಸಂಕಲನದ ಸಮಯದಲ್ಲಿ ಟಬು ಪಾತ್ರದ ಮೇಲೆ ಕತ್ತರಿ ಪ್ರಯೋಗ ಮಾಡಿದ್ದಾರೆ ಎನ್ನುವ ಆರೋಪವನ್ನು ಈಗ ಮಾಡಲಾಗುತ್ತಿದೆ. ಈ ವಿಚಾರಕ್ಕೆ ಅಕ್ಷಯ್ ಕುಮಾರ್ ಆಗಲಿ ಅಥವಾ ಟಬು ಆಗಲಿ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಆದರೆ ಸದ್ಯ ಚಿತ್ರದ ಕ್ಯಾಪ್ಟನ್ ಪ್ರಿಯದರ್ಶನ್ ಈ ಸುದ್ದಿ ಕೇಳಿ ಕೆರಳಿ ಕೆಂಡವಾಗಿದ್ಧಾರೆ.
ಈ ಕುರಿತು ''ಪಿಂಕ್‌ವಿಲ್ಲಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯದರ್ಶನ್, ಚಿತ್ರ ಗೆದ್ದಿದೆ, ಇಂತಹ ಸಮಯದಲ್ಲಿ ಈ ರೀತಿಯ ನೆಗೆಟಿವ್ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೆ ಎನ್ನುವ ಯಕ್ಷ ಪ್ರಶ್ನೆ ನನ್ನನ್ನೂ ಕಾಡುತ್ತಿದೆ ಎಂದು ಹೇಳಿದ್ಧಾರೆ.
ಚಿತ್ರದ ನಿರ್ದೇಶಕ ನಾನು, ಯಾರ ಪಾತ್ರಕ್ಕೆ ಎಷ್ಟು ಮಹತ್ವ ಕೊಡಬೇಕು, ಎಲ್ಲಿ ಯಾವ ಪಾತ್ರದ ಮೇಲೆ ಕತ್ತರಿ ಪ್ರಯೋಗ ಮಾಡಬೇಕು ಎನ್ನುವ ನಿರ್ಧಾರ ಕೇವಲ ನನ್ನದು ಮಾತ್ರ ಎಂದು ಹೇಳಿರುವ ಪ್ರಿಯದರ್ಶನ್ ಸದ್ಯ ಹಬ್ಬಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ಮುಂದುವರೆದು ಅಕ್ಷಯ್ ಕುಮಾರ್ ಯಾವತ್ತು ಯಾವ ವಿಚಾರದಲ್ಲಿಯೂ ಹಸ್ತಕ್ಷೇಪ ಮಾಡುವ ವ್ಯಕ್ತಿ ಅಲ್ಲ ಎಂದು ಹೇಳಿರುವ ಪ್ರಿಯದರ್ಶನ್, ಚಿತ್ರದ ಯಾವುದೇ ಭಾಗವನ್ನಾಗಲಿ ಅಥವಾ ಬೇರೆ ಯಾರದ್ದೋ ಪಾತ್ರವನ್ನಾಗಲಿ ಕಿತ್ತೆಸೆಯುವಂತೆ ಅಕ್ಷಯ್ ನನಗೆ ಹೇಳಿಲ್ಲ ಎಂದು ಹೇಳಿದ್ಧಾರೆ. ಇಂತಹ ವದಂತಿಗಳನ್ನು ಹರಡುತ್ತಿರುವವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.
ಇನ್ನು ''ಭೂತ್ ಬಂಗ್ಲಾ'' ನೋಡಿ ಟಬು ಅಸಮಾಧಾನಗೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಪ್ರಿಯದರ್ಶನ್, ಟಬುಗೆ ಯಾವ ಬೇಜಾರಿಲ್ಲ, ಯಾರ ಮೇಲೆ ಕೋಪವೂ ಇಲ್ಲ ಎಂದು ಹೇಳಿದ್ದಾರೆ. ಟಬು ಜೊತೆ ನಾನು ಒಂದಲ್ಲ, ಎರಡಲ್ಲ, ಎಂಟು ಸಿನಿಮಾ ಮಾಡಿದ್ದೇನೆ ಎಂದು ಹೇಳಿರುವ ಪ್ರಿಯದರ್ಶನ್ ಹಾಗೊಂದು ವೇಳೆ ನಿಜಕ್ಕೂ ಟಬುಗೆ ಬೇಸರವಾಗಿದ್ದರೆ ಟಬು ನನ್ನ ಹತ್ತಿರ ಈ ವಿಚಾರ ಖಂಡಿತವಾಗಿಯೂ ಚರ್ಚೆ ಮಾಡುತ್ತಿದ್ದರು ಎಂದಿದ್ದಾರೆ. ಈ ಮೂಲಕ ವದಂತಿಗಳಿಗೆ ಫುಲ್ ಸ್ಟಾಫ್ ಹಾಕುವ ಪ್ರಯತ್ನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಟಬು ಈ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications