ಹೇರಾಫೇರಿ 3 ಮರೆತು ಬಿಡಿ ; ಅಕ್ಷಯ್ ಕುಮಾರ್ ಜೊತೆ 9ನೇ ಚಿತ್ರ ಘೋಷಿಸಿದ ಪ್ರಿಯದರ್ಶನ್
ಕಲೆ ಮತ್ತು ಕಾಸು ಬೆರತ ಉದ್ಯಮ ಸಿನಿಮಾ. ಇಂಥಾ ಉದ್ಯಮದಲ್ಲಿ ಸದ್ಯ ಹಲವರಿಗೆ ಸೀಕ್ವೆಲ್ ಮತ್ತು ಪ್ರೀಕ್ವೆಲ್‌ಗಳ ಹುಚ್ಚು ಹಿಡಿದಿದೆ. ಆದರೆ, ಅದು ಅಂದುಕೊಂಡಷ್ಟು ಸುಲಭ ಅಲ್ಲ. ಯಾಕೆಂದರೆ.. ಅದಕ್ಕೆ ಅದ್ರದ್ದೇ ಆದ ಎಡರು ತೊಡರುಗಳಿರುತ್ತವೆ. ಕಾನೂನು ತೊಡಕು.. ಈಗೋ ಕ್ಲ್ಯಾಶ್.. ವಸಾಹತು ಶಾಹಿಗಳ ದಬ್ಬಾಳಿಕೆ.. ಮಾನಸಿಕ ಕಿರಿಕಿರಿ.. ಹಣಕಾಸಿನ ಲೆಕ್ಕಾಚಾರ..
ಹೀಗೆ ಒಂದಾ .. ಎರಡಾ.. ನೂರಾರು ಸಮಸ್ಯೆಗಳಿರುತ್ತೆ. ಇದು ಸಾಲದಕ್ಕೆ ಪ್ರೇಕ್ಷಕರ ನಿರೀಕ್ಷೆಯ ಭಾರ ಬೇರೆ. ಇದೆಲ್ಲದರಿಂದ ಒತ್ತಡಕ್ಕೆ ಒಳಗಾಗುವ ಹಲವರು ಮಾಡಲು ಮುಂದಾದ ಕೆಲಸವನ್ನು ಕೈ ಚೆಲ್ಲುತ್ತಾರೆ. ಇವರ ಸಹವಾಸ ಸಾಕು ಎಂದು ಕೈ ಮುಗಿದು ಬೇರೆ ಕೆಲಸದತ್ತ ಗಮನ ಕೊಡುತ್ತಾರೆ. ಉದಾಹರಣೆಗೆ ''ಹೇರಾ ಫೇರಿ 3'' ಚಿತ್ರದ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನೇ ಗಮನಿಸಿ.

ಹೌದು ಅಸಲಿಗೆ ಭಾರೀ ಜನಾಭಿಪ್ರಾಯದ ಮೇರೆಗೆ ಕಳೆದ ವರ್ಷದ ಜನವರಿಯಲ್ಲಿ ನಿರ್ದೇಶಕ ಪ್ರಿಯದರ್ಶನ್ ''ಹೇರಾಫೇರಿ'' ಚಿತ್ರದ ಮೂರನೇ ಭಾಗವನ್ನು ಘೋಷಿಸಿದ್ದರು. ಅಕ್ಷಯ್ ಕುಮಾರ್ . ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಈ ಚಿತ್ರದಲ್ಲಿ ಕೂಡ ಮುಂದುವರೆಯಲಿದ್ದಾರೆ ಎಂದು ಹೇಳಿದ್ದರು.
ಆದರೆ, ಚಿತ್ರದ ಚಿತ್ರೀಕರಣ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರತಂಡದಿಂದ ಪರೇಶ್ ರಾವಲ್ ಏಕಾಏಕಿ ಕಳೆದ ವರ್ಷ ಇದೇ ಸಮಯದಲ್ಲಿ ಹೊರ ಬಂದಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಪರೇಶ್ ರಾವಲ್ ಅವರ ಈ ನಿರ್ಧಾರದಿಂದ ಆಘಾತಕ್ಕೊಳಗಾದ ಅಕ್ಷಯ್ ಕುಮಾರ್ ಕಾನೂನು ಸಮರ ಸಾರಲು ಮುಂದಾಗಿದ್ದರು. ಆದರೆ, ಆ ನಂತರ ಈ ವಿವಾದ ಸೌಹಾರ್ದಯುತವಾಗಿ ಬಗೆಹರಿಯಿತು. ಪರೇಶ್ ರಾವಲ್ ಮನ ಒಲಿಸುವಲ್ಲಿ ತಂಡ ಯಶಸ್ವಿಯಾಯ್ತು.
ಇದರ ನಡುವೆ ದಕ್ಷಿಣ ಮತ್ತು ಉತ್ತರದ ಎರಡು ಸಂಸ್ಥೆಗಳ ನಡುವೆ ಕಾನೂನು ಯುದ್ಧ ಶುರುವಾಯ್ತು. ''ಹೇರಾ ಫೇರಿ'' ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಜೊತೆ ಚೆನ್ನೈನ ಸೆವನ್ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ನ್ಯಾಯಾಲಯದಲ್ಲಿ ಮೊಕದಮ್ಮೆ ಹೂಡಿತು. ಹಳೆಯ ಲೆಕ್ಕ ಚುಕ್ತಾ ಆಗುವವರೆಗೆ ''ಹೇರಾಫೇರಿ 3'' ಮಾಡಲು ಬಿಡುವುದಿಲ್ಲ ಎಂದು ಹಠ ಹಿಡಿಯಿತು. ''ಹೇರಾಫೇರಿ''ಯ ಮೂಲ ಮಲಯಾಳಂನ ''ರಾಮ್‌ಜೀ ರಾವ್ ಸ್ಪೀಕಿಂಗ್''ನ ಎಲ್ಲ ಹಕ್ಕು ನಮ್ಮ ಬಳಿ ಇವೆ ಎನ್ನುವ ವಾದ ಮಾಡಿತು.

ಆದರೂ.. ''ಹೇರಾಫೇರಿ 3'' ಮಾಡುವ ಧೈರ್ಯವನ್ನು ಪಿರೋಜ್ ಮಾಡಿದರು. ಆದರೆ, ಹೀಗೆ ಪ್ರಯತ್ನಕ್ಕೆ ಮುಂದಾದಗೆಲ್ಲ ಹೊಸ ಲೀಗಲ್ ನೋಟಿಸ್ ಇವರ ಕಚೇರಿಗೆ ಬಂದು ಬೀಳಲು ಶುರುವಾಯ್ತು.
ಬಹುಶಃ ''ಹೇರಾಫೇರಿ 3''ಯ ಸುತ್ತದ ಈ ವಿವಾದ, ಎದುರಾಗುತ್ತಿರುವ ಅಡೆ ತಡೆಗಳನ್ನು ನೋಡಿ ಖುದ್ದು ನಿರ್ದೇಶಕ ಪ್ರಿಯದರ್ಶನ್ ಬೇಸತ್ತಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಹೇರಾಫೇರಿ 3'' ನಿರ್ದೇಶಕನ ಸ್ಥಾನದಿಂದ ಅಧಿಕೃತವಾಗಿ ಪ್ರಿಯದರ್ಶನ್ ಕೆಳಗಿಳಿದಿದ್ದಾರೆ. ''ಹೇರಾಫೇರಿ 3'' ಚಿತ್ರವನ್ನು ಮರೆತು ಬಿಡಿ ಎಂದು ಕಾತುರದಿಂದ ಕಾಯುತ್ತಿರುವ ಫ್ರಾಂಚೈಸಿಯ ಚಿತ್ರಪ್ರೇಮಿಗಳಿಗೆ ಹೇಳಿದ್ಧಾರೆ. ಈಗ ಮಾತ್ರ ಅಲ್ಲ ಭವಿಷ್ಯದಲ್ಲಿ ಕೂಡ ''ಹೇರಾಫೇರಿ 3'' ಬರುವುದಿಲ್ಲ ಎಂದು ಹೇಳಿ ಅಕ್ಷಯ್ ಕುಮಾರ್ ಜೊತೆ ತಮ್ಮ 9ನೇ ಚಿತ್ರವನ್ನು ಘೋಷಿಸಿದ್ಧಾರೆ.
ಮತ್ತೆ ಮೋಡಿ ಮಾಡಲು ಸಿದ್ದವಾದ ಬ್ಲಾಕ್ ಬಸ್ಟರ್ ಜೋಡಿ
ವೃತ್ತಿ ಬದುಕು ಪಾತಾಳಕ್ಕೆ ಕುಸಿದಾಗೆಲ್ಲಾ ಅಕ್ಷಯ್ ಕುಮಾರ್ ಅವರ ಕೈಯನ್ನು ಹಿಡಿದು ಮೇಲೆತ್ತಿದವರಲ್ಲಿ ಪ್ರಿಯದರ್ಶನ್ ಕೂಡ ಒಬ್ಬರು ಮತ್ತು ಪ್ರಮುಖರು. ಸತತ ಸೋಲುಗಳಿಂದ ಹೈರಾಣಾದಾಗ ಅಕ್ಷಯ್ ಕುಮಾರ್ ಗೆ ''ಹೇರಾಫೇರಿ'' ಚಿತ್ರವನ್ನು ನೀಡಿದ ಪ್ರಿಯದರ್ಶನ್, ಅಕ್ಷಯ್ ಕುಮಾರ್ ಅವರಲ್ಲಿನ ಹಾಸ್ಯ ಚತುರನನ್ನು ಬಡಿದೆಬ್ಬಿಸಿದ್ದರು.
ಇನ್ನು ಕೊರೊನಾ ನಂತರ ಅಕ್ಷಯ್ ಕುಮಾರ್ ಗೆದ್ದಿದ್ದು ಕಡಿಮೆ ಸೋತಿದ್ದೇ ಹೆಚ್ಚು. ಕೊರೊನಾ ನಂತರ ಅಂದರೆ 2020ರ ಆಚೆ ಅಕ್ಷಯ್ ಕುಮಾರ್ ಇಲ್ಲಿಯವರೆಗೆ 18 ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಗೆದ್ದಿದ್ದು ''ಹೌಸ್‌ಫುಲ್ 5''.. ''ಸೂರ್ಯವಂಶಿ''.. ''ಜಾಲಿ ಎಲ್‌ಎಲ್‌ಬಿ 3'' ಮತ್ತು ''ಓ ಮೈ ಗಾಡ್ 2'' ಚಿತ್ರಗಳು ಮಾತ್ರ. ಮಿಕ್ಕಂತೆ ಎಲ್ಲಾ ಚಿತ್ರಗಳು ಮಕಾಡೆ ಮಲಗಿದ್ದವು.
ಆಗ ಮತ್ತೆ ಅಕ್ಷಯ್ ಕುಮಾರ್ ಗೆ ''ಭೂತ್ ಬಂಗ್ಲಾ'' ಚಿತ್ರದ ಮೂಲಕ ಆಸರೆಯಾದವರು ಇದೇ ಪ್ರಿಯದರ್ಶನ್. ''ಭೂತ್ ಬಂಗ್ಲಾ'' ನಂತರ ಅಕ್ಷಯ್ ಕುಮಾರ್ ''ವೆಲ್ಕಮ್ ಟು ದಿ ಜಂಗಲ್'' ಚಿತ್ರದ ಮೂಲಕ ಮತ್ತೊಂದು ಗೆಲುವಿನತ್ತ ದಾಪುಗಾಲು ಹಾಕುತ್ತಿದ್ಧಾರೆ. ಹೀಗಿರುವಾಗ ಪ್ರಿಯದರ್ಶನ್ ಮತ್ತೊಮ್ಮೆ ಅಕ್ಷಯ್ ಕುಮಾರ್ ಜೊತೆ ಕೈ ಜೋಡಿಸಿದ್ಧಾರೆ.
ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿಯ ಹಿಂದಿನ 8 ಚಿತ್ರಗಳ ಪಟ್ಟಿ ಇಲ್ಲಿದೆ.
| ಕ್ರ.ಸಂ. | ಚಿತ್ರದ ಹೆಸರು | ಬಿಡುಗಡೆಯಾದ ವರ್ಷ | ಫಲಿತಾಂಶ |
|---|---|---|---|
| 1 | ಹೇರಾ ಫೇರಿ | 2000 | ಕಲ್ಟ್ ಹಿಟ್ |
| 2 | ಗರಂ ಮಸಾಲ | 2005 | ಬ್ಲಾಕ್‌ಬಸ್ಟರ್ |
| 3 | ಭಾಗಂ ಭಾಗ್ | 2006 | ಸೂಪರ್ ಹಿಟ್ |
| 4 | ಭೂಲ್ ಭುಲೈಯಾ | 2007 | ಮೆಗಾ ಬ್ಲಾಕ್‌ಬಸ್ಟರ್ |
| 5 | ದೇ ದನಾ ದನ್ | 2009 | ಹಿಟ್ |
| 6 | ಖಟ್ಟಾ ಮೀಟಾ | 2010 | ಆವರೇಜ್ |
| 7 | ಭೂತ್ ಬಂಗ್ಲಾ | 2025 | ಸೂಪರ್ ಹಿಟ್ |
| 8 | ಹೈವಾನ್ | 2026 | ಬಿಡುಗಡೆಗೆ ಸಿದ್ಧವಿದೆ |
9ನೇ ಸಿನಿಮಾ - ಕಾಮಿಡಿ ಥ್ರಿಲ್ಲರ್
ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿಯ ಈ 9ನೇ ಸಿನಿಮಾ ಹೂರಣ ಮತ್ತೊಮ್ಮೆ ಹಾಸ್ಯದ ಸುತ್ತ ಇರಲಿದೆ. ಇದಕ್ಕೆ ಥ್ರಿಲ್ಲರ್ ಅಂಶವನ್ನು ಪ್ರಿಯದರ್ಶನ್ ಮತ್ತು ಬರಹಗಾರ ರೋಹನ್ ಶಂಕರ್ ಸೇರಿಸಿದ್ದಾರೆ. ''ಭೂತ್ ಬಂಗ್ಲಾ'' ಯಶಸ್ಸಿನಲ್ಲಿ ರೋಹನ್ ಅವರ ಪಾಲು ಕೂಡ ಇರುವ ಹಿನ್ನೆಲೆ ಈ ಚಿತ್ರದ ಮೇಲೆ ಆಗಲೇ ಭರವಸೆ ಮೂಡಿದೆ.
ಚಿತ್ರದ ಕಥೆಯನ್ನು ಖುದ್ದು ಪ್ರಿಯದರ್ಶನ್ ಬರೆದಿದ್ದು, ಟಿಪ್ಸ್ ಸಂಸ್ಥೆ ಈ ಚಿತ್ರಕ್ಕೆ ಹಣ ಹೂಡಲಿದೆ. ತಮ್ಮ ಈ ಚಿತ್ರದ ಕುರಿತು ''ಮಿಡ್ ಡೇ''ಗೆ ಪ್ರಿಯದರ್ಶನ್ ಪ್ರತಿಕ್ರಿಯೆ ನೀಡಿ ನಡೆದ ಬೆಳವಣಿಗೆ ಖಚಿತ ಪಡಿಸಿದ್ದಾರೆ. ಈ ಡಿಸೆಂಬರ್ ದಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ಧಾರೆ.


Click it and Unblock the Notifications