ಅಂತರ್‌ಧರ್ಮೀಯ ಮದುವೆ ಕಾರಣಕ್ಕೆ ಎದುರಾದ ಟ್ರೋಲ್ಸ್, ಟೀಕೆ ನಿಭಾಯಿಸಿದ್ದೇಗೆ?
ಬಹುಭಾಷಾ ನಟಿ ಪ್ರಿಯಾಮಣಿ ಮುಸ್ಲಿಂ ಸಮುದಾಯದ ಮುಸ್ತಾಫಾ ರಾಜ್ ಅವರನ್ನು ಮದುವೆ ಆಗಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ದರು. ಇನ್ನು ಮುಸ್ತಾಫಾ ರಾಜ್ ಅವರನ್ನು ಪ್ರಿಯಾಮಣಿ ಮದುವೆ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ಎದುರಿಸಬೇಕಾಯಿತು.
ತಮ್ಮ ಮದುವೆ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಪ್ರಿಯಾಮಣಿ ಮಾತನಾಡಿದ್ದಾರೆ. ಕೆಲವೊಮ್ಮೆ ಖಡಕ್ ಆಗಿಯೇ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ಸದ್ಯ ಪ್ರಿಯಾಮಣಿ ನಟನೆಯ 'ಮೈದಾನ್' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಹಾಗೂ ಟ್ರೋಲ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮದುವೆ ಸಮಯದಲ್ಲಿ ಎದುರಾದ ಟೀಕೆ, ಟ್ರೋಲ್ಸ್ ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎನ್ನುವ ಪ್ರಶ್ನೆಗೆ ಪ್ರಿಯಾಮಣಿ ಉತ್ತರಿಸಿದ್ದಾರೆ. "ನಿಜ ಹೇಳಬೇಕೆಂದರೆ, ಅದು ನನ್ನ ಮೇಲೆ ಪ್ರಭಾವ ಬೀರಿತು. ನನ್ನ ಮೇಲೆ ಮಾತ್ರವಲ್ಲ, ನನ್ನ ಕುಟುಂಬ, ಮುಖ್ಯವಾಗಿ ನನ್ನ ತಂದೆ ಮತ್ತು ತಾಯಿ ಮೇಲೆ ಪ್ರಭಾವ ಬೀರಿತು. ಆದರೆ ನನ್ನ ಪತಿ ಬಂಡೆಯಂತೆ ನನ್ನ ಬೆಂಬಲಕ್ಕೆ ನಿಂತರು ಎಂದು ನಾನು ಹೇಳಲೇಬೇಕು" ಎಂದಿದ್ದಾರೆ.
"ಏನೇ ಆಗಲಿ ಅದು ಮೊದಲು ಬಳಿಗೆ ಬರುತ್ತದೆ. ಆದರೆ ನಾನು ಕೇಳುವುದೇನೆಂದರೆ ನೀನು ನನ್ನ ಕೈ ಹಿಡಿದು ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇರು. ಅಷ್ಟು ಸಾಕು" ಎಂದು ಮುಸ್ತಾಫಾ ರಾಜಾ ಹೇಳಿದ್ದಾರೆ ಪ್ರಿಯಾಮಣಿ ತಿಳಿಸಿದ್ದಾರೆ. ನಾವಿಬ್ಬರು ಹತ್ತಿರವಾದ ಸಮಯದಲ್ಲೇ ನಾನು ಸಾಕಷ್ಟು ವದಂತಿಗಳನ್ನು ಎದುರಿಸಿದೆ. ಆಗ ನಾನು ಅವರಿಗೆ ಇದೇ ಮಾತನ್ನು ಹೇಳಿದ್ದೆ, "ನನ್ನೊಟ್ಟಿಗೆ ನಿಂತು ನನ್ನನ್ನು ನಂಬು" ಎಂದಿದ್ದೆ.
"ನಾವು ಒಟ್ಟಿಗೆ ಇರುಲು ಮುಂದಾಗಿದ್ದೇವೆ. ಇನ್ನುಳಿದ ಜೀವನವನ್ನು ಒಟ್ಟಾಗಿ ಕಳೆಯಲು ನಿರ್ಧರಿಸಿದ್ದೇವೆ. ಮುಂದೆ ಬಿಸಿಲು, ಮಳೆ, ಗಾಳಿ ಏನೇ ಬಂದರೂ ಒಟ್ಟಾಗಿ ನಡೆಯೋಣ ಎದುರಿಸೋಣ. ಅಂತಹ ತಿಳುವಳಿಕೆ ಹಾಗೂ ಅರ್ಥಮಾಡಿಕೊಳ್ಳುವ ಸಂಗಾತಿ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಎಲ್ಲವನ್ನೂ ಹೇಗೆ ಎದುರಿಸಬೇಕೆಂದು ಆತನಿಗೆ ಗೊತ್ತಿದೆ" ಎಂದು ಪ್ರಿಯಾಮಣಿ ವಿವರಿಸಿದ್ದಾರೆ.

"ಈ ರೀತಿ ಟ್ರೋಲ್ಸ್, ಟೀಕೆ ಕೇಳಿಬಂದಾಗ ನಾನು ಮುಂಬೈನಲ್ಲಿ ಇರಲಿಲ್ಲ. ಪತಿ ಜೊತೆ ಬೆಂಗಳೂರಿನಲ್ಲಿದ್ದೆ. ಆದರೆ ಎಲ್ಲವನ್ನು ನಿಭಾಯಿಸಿದೆವು. ನಮ್ಮು ಕುಟುಂಬದವರಿಗೆ ಹೇಳಿದೆವು. ಹೆಚ್ಚಯ ತಲೆ ಕೆಡಿಸಿಕೊಳ್ಳಬೇಡಿ ಅಂತ. ಟೀಕೆಗಳ ಬಗ್ಗೆ ಹೆಚ್ಚು ಯೋಚಿಸಬೇಡ, ಕೊನೆಗೆ ನಾವಿಬ್ಬರೂ ಒಟ್ಟಿಗೆ ಇರುವುದಷ್ಟೆ ಮುಖ್ಯ ಎಂದು ಮುಸ್ತಾಫಾ ರಾಜಾ ಹೇಳಿದ್ದಾಗಿ" ಪ್ರಿಯಾಮಣಿ ತಿಳಿಸಿದ್ದಾರೆ.
ಈ ಹಿಂದೆ ಕೂಡ ಇದೇ ರೀತಿ ಟ್ರೋಲ್ಸ್ ಬಗ್ಗೆ ಪ್ರಿಯಾಮಣಿ ಮಾತನಾಡಿದ್ದರು. "ನೀವು ಅತಿಯಾಗಿ ಯೋಚಿಸುತ್ತಿದ್ದೀರಾ, ಪ್ರೀತಿಸಿದವರ ಜೊತೆ ಮದುವೆ ಆಗುವುದು ತಪ್ಪಾ? ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ ಏನು? ಇದರಲ್ಲಿ ತಪ್ಪೇನಿದೆ? ನಾನು ಹೇಳುವುದು ಏನು ಅಂದರೆ ಎಲ್ಲಾ ಮುಸಲ್ಮಾನರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ" ಎಂದಿದ್ದರು.
ಅಜಯ್ ದೇವಗನ್ ಜೊತೆ ಪ್ರಿಯಾಮಣಿ ನಟನೆಯ 'ಮೈದಾನ್' ಉತ್ತಮ ಪ್ರದರ್ಶನ ಕಾಣುತ್ತಿದೆ. ಭಾರತದ ಖ್ಯಾತ ಫುಟ್ಬಾಲ್ ತರಬೇತುದಾರ ಸಯ್ಯದ್ ಅಬ್ದುಲ್ ರಹೀಮ್ ಜೀವನವನ್ನಾಧರಿಸಿ ಈ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ರಹೀಮ್ ಸಾಬ್ ಆಗಿ ಅಜಯ್ ದೇವಗನ್ ನಟಿಸಿದ್ದಾರೆ. ಅವರ ಪತ್ನಿ ಸಾಯಿರಾ ರಹೀಮ್ ಆಗಿ ಪ್ರಿಯಾ ಕಾಣಿಸಿಕೊಂಡಿದ್ದಾರೆ.


Click it and Unblock the Notifications











