ಸರ್ದಾರ್ ಜಿ ಕೈಹಿಡಿಯಲಿದ್ದಾರೆ ಪ್ರಿಯಾಂಕಾ ಚೋಪ್ರಾ
ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೊಪ್ರಾಗೆ ಕಡೆಗೂ ಕಂಕಣಬಲ ಕೂಡಿಬಂದಿದೆ. ತನ್ನ ಕನಸಿನ ಹುಡುಗನ ಬಗ್ಗೆ ಪ್ರಿಯಾಂಕಾ ಮೌನ ಮುರಿದಿದ್ದಾರೆ. ಪಂಜಾಬ್ ನ ಸರ್ದಾಜಿಯನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೆ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪ್ರಿಯಾಂಕಾ ಈಗ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ.
ತಾನು ಮದುವೆಯಾಗುವ ಹುಡುಗ ಮಿಸ್ಟರ್ ರೈಟ್ ಆಗಿರಬೇಕು. ಸಕಲ ಗುಣಗಳನ್ನು ಹೊಂದಿರುವ ಸರಸ ಪ್ರಿಯನಾಗಿರಬೇಕು ಎಂಬುದು ಪ್ರಿಯಾಂಕಾರ ಆಸೆ. ತನ್ನನ್ನು ಯಾರಾದರೂ ಅವಮಾನಿಸಿದರೆ, ಕೆಟ್ಟದಾಗಿ ನಡೆದುಕೊಂಡರೆ ಅವರಿಗೆ ಸರಿಯಾಗಿ ಬುದ್ಧಿ ಕಲಿಸುವಂತಿರಬೇಕು. ಹೀಗೆ ಪ್ರಿಯಾಂಕಾ ತನ್ನ ಬಾಳಸಂಗಾತಿ ಬಗ್ಗೆ ಕನಸುಗಳನ್ನು ಇಟ್ಟುಕೊಂಡಿದ್ದರು.
ಆದರೆ ಈಗ ಆ ಕನಸುಗಳೆಲ್ಲಾ ಹಗಲುಗನಸುಗಳಾಗಿವೆ. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ತದ್ವಿರುದ್ಧ ಗುಣಗಳುಳ್ಳ ಹುಡುಗ ಆಕೆಗೆ ಸಿಕ್ಕಿದ್ದಾನಂತೆ. ತಾನೇನು ಬಯಸುತ್ತಿದ್ದೆನೋ ಅದಕ್ಕೆ ವಿರುದ್ಧವಾದ ಗುಣಗಳುಳ್ಳ ಹುಡುಗ ಸಿಕ್ಕಿದ್ದಾನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಆದರೆ ತನ್ನ ಕನಸಿನ ಹುಡುಗನ ವಿವರಗಳನ್ನು ಪ್ರಿಯಾಂಕಾ ಬಿಟ್ಟುಕೊಟ್ಟಿಲ್ಲ.
ಸದ್ಯಕ್ಕೆ ಬಾಲಿವುಡ್ ನಲ್ಲಿ ಇಬ್ಬರು ಪಂಜಾಬಿ ಮೂಲದ ನಟರಿದ್ದಾರೆ. ಒಬ್ಬರು ರಣಬೀರ್ ಕಪೂರ್ ಹಾಗೂ ಮತ್ತೊಬ್ಬರು ಶಹೀದ್ ಕಪೂರ್. ಇವರಿಬ್ಬರಲ್ಲಿ ಒಬ್ಬರನ್ನು ಪ್ರಿಯಾಂಕಾ ವರಿಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿಬಂದಿವೆ. ಮಾಲೆ ಯಾರ ಕೊರಳಿಗೆ ಬೀಳುತ್ತದೋ ಕಾದು ನೋಡಬೇಕು.


Click it and Unblock the Notifications











