ಪ್ರಿಯಾಂಕ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದು ಯಾರು ; 166 ಕೋಟಿ ಬೆಲೆ ಬಾಳುವ ಮನೆ ಖಾಲಿ ಮಾಡಿದ್ದೇಕೆ ಪಿಗ್ಗಿ..?
'ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ'.. ಪ್ರಿಯಾಂಕ ಚೋಪ್ರಾ ಬದುಕಿಗೆ ಹೆಚ್ಚು ಸೂಕ್ತವಾಗ್ತಿದ್ದ ಮಾತು ಇದು. ಯಾಕೆಂದರೆ ವಿಶ್ವ ಸುಂದರಿಯ ಪಟ್ಟದಿಂದ ವಿಶ್ವವನ್ನೇ ಗೆದ್ದ ಗಾಯಕ ನಿಕ್ ಜೋನಸ್ ಅವರನ್ನ ಮದುವೆಯಾಗೋವರೆಗೂ ಪ್ರಿಯಾಂಕ ಬದುಕು ಅನೇಕ ಏರಿಳಿತವನ್ನ ಕಂಡಿದೆ. ಆದರೆ ಪ್ರಿಯಾಂಕ ಚೋಪ್ರಾ ಮದುವೆ ಆದ ಮೇಲೆ ಚಿತ್ರಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು ಇಲ್ಲ ಸಲ್ಲದ ವಿಚಾರಗಳಿಂದನೇ. ಇನ್ನೂ ಪ್ರಿಯಾಂಕ ಚೋಪ್ರಾ ಅಂದರೆ ಟ್ರೋಲಿಗರಿಗೆ ಹಬ್ಬವೋ ಹಬ್ಬ. ಇಂತಹ ಪ್ರಿಯಾಂಕ ಚೋಪ್ರಾ ಇದೀಗ 'ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು' ಎಂದು ದೊಡ್ಡವರು ಹೇಳಿದ ಮಾತನ್ನ ನೆನಪಿಸಿಕೊಳ್ಳುವಂತೆ ಆಗಿದೆ. ಯಾಕೆಂದರೆ 166 ಕೋಟಿ ಕೊಟ್ಟು ಖರೀದಿಸಿದ್ದ ಮನೆಯನ್ನ ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು, ನಿಮಗೆ ಗೊತ್ತಿರಲಿ ನಿಕ್ ಜೋನಸ್ ಅವರನ್ನ ಮದುವೆಯಾದ ಮೇಲೆ, ಪಿಂಕಿ ಲಾಸ್ ಎಂಜಲೀಸ್ ನಲ್ಲಿ ದುಬಾರಿ ಮನೆಯ ಒಡತಿಯಾಗಿದ್ದರು. ಇಪ್ಪತ್ತಲ್ಲ.. ಐವತ್ತಲ್ಲ.. ಬರೋಬ್ಬರಿ 166 ಕೋಟಿ ಕೊಟ್ಟು ಮನೆಯನ್ನ ಖರೀದಿಸಿದ್ದರು. 07 ಬೆಡ್ ರೂಮ್, 09 ಬಾತ್ ರೂಮ್, ಭವ್ಯವಾದ ಅಡುಗೆಮನೆ, ತಾಪಮಾನ ನಿಯಂತ್ರಿತ ವೈನ್ ಕೊಠಡಿ, ಮನೆಯಲ್ಲಿಯೇ ಬಾಸ್ಕೆಟ್ ಬಾಲ್ ಆಡುವ ಸೌಲಭ್ಯ, ಬೌಲಿಂಗ್, ಹೋಮ್ ಥಿಯೇಟರ್, ಸ್ಟೀಮ್ ಶವರ್ ಹೊಂದಿರುವ ಸ್ಪಾ, ಜಿಮ್, ಬಿಲಿಯರ್ಡ್ಸ್ ಕೋಣೆ.. ಅಬ್ಬಬ್ಬಾ, ಸ್ವರ್ಗವೇ ಧರೆಗೆ ಇಳಿದಂತೆ ಇದ್ದ ಅರಮನೆಯಲ್ಲಿ ಪ್ರಿಯಾಂಕ ಚೋಪ್ರಾ ವಾಸವಾಗಿದ್ದರು.

ಆದರೆ 'ಹಾಳ್ ಗುಂಡಿಗೆ ಬೀಳಾಕ್ ಅಮಾಸಿ ಆದ್ರೇನು, ಹುಣುವಿ ಆದ್ರೇನು'..? 166 ಕೋಟಿಯ ಭವ್ಯವಾದ ಅರಮನೆಯಲ್ಲಿ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿತು. ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಮನೆಯ ಪೂಲ್ ಹಾಗೂ ಸ್ಪಾ ಪ್ರದೇಶದಲ್ಲಿ ಕಾಣಿಸಿಕೊಂಡ ಈ ನೀರು ಸೋರಿಕೆಯ ಸಮಸ್ಯೆ ಕ್ರಮೇಣ ಅಡುಗೆ ಮನೆಯನ್ನೂ ಆವರಿಸಿಕೊಂಡಿತು. ಎಷ್ಟರ ಮಟ್ಟಿಗೆ ಅಂದರೆ ಪಿಂಕಿ ಲೀವಿಂಗ್ ಏರಿಯಾದಲ್ಲಿದ್ದ ಬೆಲೆ ಬಾಳುವ ಸಾಮಗ್ರಿಗಳೆಲ್ಲ ನೀರು ಪಾಲಾದವು.

ಸದ್ಯಕ್ಕೆ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ, ಈ ನೀರು ಸೋರಿಕೆ ಸಮಸ್ಯೆಯಿಂದ ಪ್ರಿಯಾಂಕ ಚೋಪ್ರಾಗೆ ಹೆಚ್ಚು ಕಡಿಮೆ 32 ಕೋಟಿ ನಷ್ಟ ಆಗಿದೆ. ಪ್ರಿಯಾಂಕ ಚೋಪ್ರ ಹಾಗೂ ನಿಕ್ ಈ ಸಮಸ್ಯೆಯಿಂದ ಬೇಸತ್ತು ಮನೆಯನ್ನೂ ಬದಲಿಸಿದ್ದಾರೆ. ಸದ್ಯಕ್ಕೆ ಈ ಐಶಾರಾಮಿ ಬಂಗಲೆಗೆ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಯಾವಾಗ ಮರಳುತ್ತಾರೆ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಮನೆಯಲ್ಲಿ ಯಾರು ವಾಸ ಕೂಡ ಮಾಡ್ತಿಲ್ಲ. ಬಾಡಿಗೆಗೆ ಕೊಡುವ ಆಲೋಚನೆ ಕೂಡ ಪಿಗ್ಗಿ ಹಾಗೂ ನಿಕ್ ಗೆ ಇಲ್ಲ. ಸದ್ಯಕ್ಕೆ ಮನೆ ಮಾರಾಟ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಹೋರಾಟಕ್ಕೆ ಇಬ್ಬರು ಮುಂದಾಗಿದ್ದಾರೆ


Click it and Unblock the Notifications











