ಬಾಲಿವುಡ್‌ನಲ್ಲಿ ಪ್ರಸಿದ್ಧರಾದ ಪಾಕಿಸ್ತಾನದ ಗಾಯಕ ದುಬೈನಲ್ಲಿ ಅರೆಸ್ಟ್...?
ಪಾಕಿಸ್ತಾನದವರಾದರೂ ತಮ್ಮ ಕಂಠದಿಂದನೇ ವಿಶ್ವವ್ಯಾಪಿ ಹೆಸರು ಮಾಡಿದವರು ರಾಹತ್ ಫತೇಹ್ ಅಲಿ ಖಾನ್. 2003ರಲ್ಲಿ ಬಂದ 'ಪಾಪ್' ಚಿತ್ರದ ಮೂಲಕ ಬಾಲಿವುಡ್ ಗೆ ಬಂದ ರಾಹತ್ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಭಾರತದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ಧಾರೆ.
ಇಂಥಾ ರಾಹತ್ ಫತೇಹ್ ಅಲಿ ಖಾನ್ ಅವರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎನ್ನುವ ಸುದ್ದಿಯನ್ನೂ ಪಾಕಿಸ್ತಾನದ ಮಾಧ್ಯಮದವರು ತೇಲಿ ಬಿಟ್ಟಿದ್ದಾರೆ. ಆದರೆ ವಾಸ್ತವದಲ್ಲಿ.. ಇದು ಸುಳ್ಳು. ಖುದ್ದು ರಾಹತ್ ಫತೇಹ್ ಅಲಿ ಖಾನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. ವಿಡಿಯೋ ಮೂಲಕ ಸುದ್ದಿಯನ್ನು ನಂಬಬೇಡಿ. ಯಾರು ಆತಂಕಕ್ಕೊಳಗಾಗಬೇಡಿ ಎಂಬ ಮನವಿಯನ್ನೂ ಮಾಡಿದ್ದಾರೆ.

ಅಸಲಿಗೆ ನಿಮಗೆ ಗೊತ್ತಿರಲಿ.. ರಾಹತ್ ಫತೇಹ್ ಅಲಿ ಖಾನ್ ಅವರ ಜೊತೆ ಬಹುಕಾಲದಿಂದ ಇದ್ದವರು ಸಲ್ಮಾನ್ ಅಹ್ಮದ್. ಪಾಕಿಸ್ತಾನದ ಈ ಖ್ಯಾತ ಗಾಯಕನ ದೇಖಾರೇಖಿಯನ್ನು ನೋಡಿಕೊಳ್ಳುತ್ತಿದ್ದವರು ಇವರೇ. ಆದರೆ.. ಅದೇನಾಯ್ತೋ, ವರ್ಷಾನುವರ್ಷ ಜೊತೆಯಲ್ಲಿದ್ದ ಈ ಜೋಡಿ, ಇತ್ತೀಚೆಗೆ ಬೇರ್ಪಟ್ಟಿತ್ತು. ಮನಸ್ತಾಪದ ಕಾರಣ ಸಲ್ಮಾನ್ ಅಹ್ಮದ್ ಅವರನ್ನು ರಾಹತ್ ಫತೇಹ್ ಅಲಿ ಖಾನ್ ಕೆಲಸದಿಂದ ಕಿತ್ತುಹಾಕಿದ್ದಾರೆ ಎನ್ನುವ ಸುದ್ದಿ ಕೂಡ ಕೆಲ ದಿನದ ಹಿಂದೆ ಕೇಳಿ ಬಂದಿತ್ತು. ರಾಹತ್ ಫತೇಹ್ ಅಲಿ ಖಾನ್ ಅವರ ವಿರುದ್ಧ ಸಲ್ಮಾನ್ ಅಹ್ಮದ್ ದುಬೈನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು.
ಸಲ್ಮಾನ್ ಅಹ್ಮದ್ ನೀಡಿದ್ದ ದೂರಿನ ಹಿನ್ನೆಲೆ, ರಾಹತ್ ಫತೇಹ್ ಅಲಿ ಖಾನ್ ಅವರನ್ನು ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಲು ಲಾಹೋರ್‌ನಿಂದ ದುಬೈಗೆ ತೆರೆಳಿದ್ದ ವೇಳೆ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿಯನ್ನೂ ಮಾಡಿದ್ದವು. ಆದರೆ ಈಗ ಈ ಸುದ್ದಿಯನ್ನು ಖುದ್ದು ರಾಹತ್ ಫತೇಹ್ ಅಲಿ ಖಾನ್ ಅಲ್ಲಗೆಳೆದಿದ್ದಾರೆ. ರಾಹತ್ ಫತೇಹ್ ಅಲಿ ಖಾನ್ ಅವರ ಸ್ಪಷ್ಟೀಕರಣದ ವಿಡಿಯೋ ನೋಡಿದ ಬಳಿಕ ಅವರ ಅಭಿಮಾನಿಗಳು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂದ್ಹಾಗೇ ರಾಹತ್ ಫತೇಹ್ ಅಲಿ ಖಾನ್‌ಗೂ ವಿವಾದದ ನಡುವೆ ಅವಿನಾಭಾವ ಸಂಬಂಧ ಇದೆ. ಈ ವರ್ಷದ ಆರಂಭದಲ್ಲಿ ತಮ್ಮದೇ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆದು ರಾಹತ್ ಸದ್ದು ಮಾಡಿದ್ದರು. ವಿಶ್ವವ್ಯಾಪಿ ಚರ್ಚೆಗೀಡಾಗಿದ್ದರು. ಇನ್ನೂ 2019ರಲ್ಲಿ ರಾಹತ್ ಫತೇಹ್ ಅಲಿ ಖಾನ್‌ಗೆ ಭಾರತದ ಜಾರಿ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ಅದಕ್ಕೂ ಮುನ್ನ ಅಂದರೆ 2011ರಲ್ಲಿ ಇಡಿ ದೆಹಲಿ ವಿಮಾನ ನಿಲ್ಧಾಣದಲ್ಲಿಯೇ ರಾಹತ್ ಫತೇಹ್ ಅಲಿ ಖಾನ್ ಅವರನ್ನು ವಶಕ್ಕೆ ಪಡೆದಿತ್ತು. ಆಗಲೂ ಕೂಡ ರಾಹತ್ ಫತೇಹ್ ಅಲಿ ಖಾನ್ ತಮ್ಮನ್ನು ಯಾರು ಬಂಧಿಸಿಲ್ಲ ಎಂಬ ವಾದವನ್ನು ಮಾಡಿದ್ದರು. ನಾನ್ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದ್ದರು. ಈಗ ರಾಹತ್ ಫತೇಹ್ ಅಲಿ ಖಾನ್ ಬಂಧನದ ಸುದ್ದಿಯಿಂದ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.


Click it and Unblock the Notifications











