ಕುಣಿಯೋರು ಅವರು -ಕುಣಿಸೋರು ಇವರು ; ಐಶ್ವರ್ಯ ರೈ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಕೆರಳಿ ಕೆಂಡವಾದ ಭಕ್ತಗಣ ..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿಶ್ವ ಸುಂದರಿ ಐಶ್ವರ್ಯ ರೈ ಬಗ್ಗೆ ಹಗುರವಾಗಿ ಮಾತನಾಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಐಸೂ ಅಭಿಮಾನಿಗಳನ್ನೂ ಕೆರಳಿಸಿದೆ. ದೇಶವ್ಯಾಪಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶದ ಅಲೆ ನಿಧಾನಕ್ಕೆ ಹೆಚ್ಚುತ್ತಿದೆ.
ಹೌದು, ಅಸಲಿಗೆ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗಾಗಿ ಕಾನ್ಫುರದಲ್ಲಿ ಬೀಡು ಬಿಟ್ಟಿದ್ದರು. ನೆರೆದ ಇಡೀ ಸಮೂಹವನ್ನ ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ಭಾಷಣದಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ದಿನವನ್ನ ಮೆಲುಕು ಹಾಕಿದ ರಾಹುಲ್ ಗಾಂಧಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು.

ನರೇಂದ್ರ ಮೋದಿ ಅವರ ರಾಮರಾಜ್ಯದಲ್ಲಿ ದಲಿತರು ಹಾಗೂ ಇತರರಿಗೆ ಪ್ರಾಶಸ್ತ್ಯ ಸಿಗುವುದಿಲ್ಲ ಎಂದು ಗುಡುಗಿದ್ದರು. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರನ್ನ ಆಹ್ವಾನಿಸಲಿಲ್ಲ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನ ಒಳಗೆ ಬಿಡಲಿಲ್ಲ ಎಂದ ರಾಹುಲ್ ಗಾಂಧಿ ಜಾತಿ ಗಣತಿಯ ವಿವರವನ್ನೂ ನೀಡಿದರು.
ದೇಶದಲ್ಲಿ ಶೇಕಡಾ 50 ರಷ್ಟು ಜನರು ಹಿಂದುಳಿದ ವರ್ಗಕ್ಕೆ ಸೇರಿದವರು. ಶೇಕಡಾ 15 ರಷ್ಟು ದಲಿತರು, ಶೇಕಡಾ 8 ರಷ್ಟು ಬುಡಕಟ್ಟು ಹಾಗೂ ಶೇಕಡಾ 15ರಷ್ಟು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು ಎಂದು ಹೇಳಿದ್ದರು. ಆದರೆ ನೀವೂ ಎಷ್ಟೇ ಹೋರಾಡಿ, ಕೂಗಾಡಿ ಈ ದೇಶದಲ್ಲಿ ಇವರಿಗೆಲ್ಲ ಉದ್ಯೋಗ ಸಿಗಲ್ಲ, ಪ್ರಧಾನಿ ಮೋದಿಗೆ ಉದ್ಯೋಗ ನೀಡಲು ಇಷ್ಟ ಕೂಡ ಇಲ್ಲ ಎಂದು ಆಕ್ರೋಶವನ್ನ ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದರು

ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸುತ್ತಾ ಹೋದ ರಾಹುಲ್ ಗಾಂಧಿ, ಮಾತಿನ ಭರದಲ್ಲಿ ಬಾಲಿವುಡ್ ನ ಶೆಹನ್ ಷಾ ಅಮಿತಾಬ್ ಬಚ್ಚನ್ ಹಾಗೂ ಅವರ ಸೊಸೆ ಐಶ್ವರ್ಯ ರೈ ಅವರನ್ನ ಎಳೆದು ತಂದರು. ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಕೈಗಾರಿಕೋದ್ಯಮಿಗಳು ಮತ್ತು ಅಮಿತಾಭ್ ಬಚ್ಚನ್ ಅವರನ್ನು ಆಹ್ವಾನಿಸುವ ಮೂಲಕ ಮೋದಿ ದೇಶದ 73 ಪ್ರತಿ ಶತ ಜನರನ್ನ ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ಇಷ್ಟೇ ಆಗಿದ್ದರೆ ರಾಹುಲ್ ಗಾಂಧಿ ಅವರಿಗೆ ವಿವಾದ ಸುತ್ತಿಕೊಳ್ಳುತ್ತಿರಲಿಲ್ಲ. ವಾರಣಾಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇನ್ನೊಂದು ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಎರಡು ಪ್ರಮುಖ ಸಮಸ್ಯೆಗಳಿವೆ. ಮೊದಲನೆಯದಾಗಿ ನಿರುದ್ಯೋಗ, ಎರಡನೆಯದಾಗಿ ಹಣದುಬ್ಬರ, ಆದರೆ ಯಾರೂ ಈ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ.

ಇವುಗಳನ್ನು ಎಲ್ಲಿಯೂ ತೋರಿಸುತ್ತಿಲ್ಲ. ಟಿವಿ ಪರದೆಯಿಂದಲೂ ಈ ಸಮಸ್ಯೆಗಳು ಕಾಣೆಯಾಗಿವೆ. ಕೇವಲ ಮೋದಿಯವರನ್ನ ಮಾತ್ರ ಟಿವಿಯಲ್ಲಿ 24 ಗಂಟೆ ತೋರಿಸುತ್ತಾರೆ. ಅದನ್ನ ಹೊರತು ಪಡಿಸಿದರೆ ಐಶ್ವರ್ಯ ರೈ ಕುಣಿಯುವುದನ್ನ ತೋರಿಸುತ್ತಾರೆ, ಇಲ್ಲವೆಂದರೆ ಅಮಿತಾಭ್ ಬಚ್ಚನ್ ಅವರನ್ನ ತೋರಿಸುತ್ತಾರೆ ಎಂದರು
ಸದ್ಯಕ್ಕೆ ರಾಹುಲ್ ಗಾಂಧಿ ಅವರ ಈ ಮಾತು ಅನೇಕರನ್ನ ಕೆರಳಿಸಿದೆ. ಐಶ್ವರ್ಯ ರೈ ಅವರನ್ನ ರಾಹುಲ್ ಗಾಂಧಿ ನರ್ತಕಿ ಎಂದ ಹಿನ್ನೆಲೆ ಐಶ್ವರ್ಯ ರೈ ಹಾಗೂ ಅಮಿತಾಭ್ ಬಚ್ಚನ್ ಅಭಿಮಾನಿಗಳು ರಾಹುಲ್ ಗಾಂಧಿ ವಿರುದ್ಧತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.ಇನ್ನೂ ಕೆಲವರು ರಾಹುಲ್ ಗಾಂಧಿ ಅವರನ್ನ ಟ್ರೋಲ್ ಕೂಡ ಮಾಡುತ್ತಿದ್ದಾರೆ.
ಇನ್ನೂ ಮಹಿಳೆಯರ ಪರ ಧ್ವನಿ ಎತ್ತುವುದರಲ್ಲಿ ಹೆಸರುವಾಸಿಯಾಗಿರುವ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಕೂಡ ಮೌನ ವಹಿಸಿದ್ದಕ್ಕೆ ಅಭಿಮಾನಿಗಳಿಂದ ಟೀಕೆ ವ್ಯಕ್ತವಾಗಿದೆ. ಸ್ವಂತ ನಿಮ್ಮ ಸೊಸೆಯ ಬಗ್ಗೆ ರಾಹುಲ್ ಗಾಂಧಿ ಹೀಗೆಲ್ಲ ಮಾತನಾಡಿದ್ದಾರೆ ಆದರೂ ನಿಮ್ಮ ರಕ್ತ ಕುದಿಯುತ್ತಿಲ್ಲವಾ..? ಎಂಬ ಪ್ರಶ್ನೆಯನ್ನೂ ಸಾಮಾಜಿಕ ಜಾಲತಾಣದ ಬಣ ಜಯಾ ಬಚ್ಚನ್ ಅವರನ್ನ ಕೇಳ್ತಿದೆ. ಉತ್ತರ ಇನ್ನೂ ಬಂದಿಲ್ಲ


Click it and Unblock the Notifications











