ಅಶ್ಲೀಲ ವಿಡಿಯೋ ಪ್ರಕರಣ: ಹೆಸರು ಕೈಬಿಡುವಂತೆ ರಾಜ್ ಕುಂದ್ರಾ ಮನವಿ
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದೊಂದು ವರ್ಷದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಿಟ್ಟಿದ್ದಾರೆ. ಜನ ಮಾಸ್ಕ್ ಧರಿಸುವುದನ್ನು ಮರೆತಿರುವ ಕಾಲದಲ್ಲಿ ಮೂಗು ಮಾತ್ರವಲ್ಲ ಪೂರ್ಣ ಮುಖ ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ ರಾಜ್ ಕುಂದ್ರಾ.
ಆರಾಮವಾಗಿ ಐಪಿಎಲ್, ಬ್ಯುಸಿನೆಸ್ ಎಂದಿದ್ದ ರಾಜ್ ಕುಂದ್ರಾ ಕಳೆದ ವರ್ಷ ಮುಂಬೈ ಪೊಲೀಸರಿಂದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದ ಬಳಿಕ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ.
ಆದರೆ ಇದೀಗ ಆ ಹೀನ ಪ್ರಕರಣದಿಂದ ತಮ್ಮ ಹೆಸರು ಕೈಬಿಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ ರಾಜ್ ಕುಂದ್ರಾ. ಆದರೆ ಸರ್ಕಾರದ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ರಾಜ್ ಕುಂದ್ರಾ ಅಪರಾಧಿಯಂತೆ ತೋರುತ್ತಿದ್ದಾರೆಂದು ಸರ್ಕಾರಿ ವಕೀಲರು ವಾದಿಸಿದ್ದಾರೆ.
ಆದರೆ ರಾಜ್ ಕುಂದ್ರಾ ಪರ ವಕೀಲರು, ನಾವು ಅರ್ಹತೆ ಮೇರೆಗೆ ಪ್ರಕರಣ ವಾದಿಸಲು ನಾವು ಸಿದ್ಧರಾಗಿದ್ದೇವೆ. ಮೇಲ್ನೋಟಕ್ಕೆ ರಾಜ್ ಕುಂದ್ರಾ ಅಪರಾಧಿ ಎಂದು ಹೇಳಲಾಗುತ್ತಿದೆಯೇ ಹೊರತು ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದಿದ್ದಾರೆ.
ಕಳೆದ ವರ್ಷ ಜುಲೈ 19 ರಂದು ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಸತತ ಎರಡು ತಿಂಗಳುಗಳ ಕಾಲ (62 ದಿನ) ಜೈಲಿನಲ್ಲಿದ್ದ ರಾಜ್ ಕುಂದ್ರಾ ಸೆಪ್ಟೆಂಬರ್ 21, 2021 ರಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು.

ರಾಜ್ ಕುಂದ್ರಾ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್ ಹೊಂದಿದ್ದು ಆ ಶುಲ್ಕಸಹಿತ ಅಪ್ಲಿಕೇಶನ್‌ಗಾಗಿ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಲಂಡನ್‌ನಲ್ಲಿನ ತಮ್ಮ ಸಹೋದರ ಸಂಬಂಧಿಯ ಸಂಸ್ಥೆಯ ಮೂಲಕ ಅಪ್ಲಿಕೇಶನ್‌ಗಳನ್ನು ಅಪ್‌ಲೋಡ್ ಮಾಡಿ ದಿನವೊಂದಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಮುನ್ನಾ ಮುಂಬೈನ ಒಂದು ಮನೆಯ ಮೇಲೆ ದಾಳಿ ಮಾಡಿ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದ ಆರೋಪದಲ್ಲಿ ಮಾಡೆಲ್ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
ರಾಜ್ ಕುಂದ್ರಾ ಬಂಧನದ ಬಳಿಕ ಗ್ಲಾಮರಸ್ ವಿಡಿಯೋ, ಚಿತ್ರಗಳಿಗೆ ಖ್ಯಾತರಾದ ನಟಿ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕೆಲವು ನಟಿಯರು ಅತ್ಯಾಚಾರ ಯತ್ನದ ಆರೋಪಗಳನ್ನೂ ಮಾಡಿದರು. ಆದರೆ ನಟಿ ಗೆಹನಾ ವಸಿಷ್ಠ ಮಾತ್ರ ರಾಜ್ ಕುಂದ್ರಾ ಪರವಾಗಿ ಹೇಳಿಕೆಗಳನ್ನು ನೀಡಿದರು. ರಾಜ್ ಕುಂದ್ರಾ ಹೊರಗೆ ಬಂದ ಬಳಿಕ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಪೂನಂ ಪಾಂಡೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದರು.


Click it and Unblock the Notifications











