ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಟೈಟಲ್ ಬದಲಾಯ್ತು; ಹೊಸ ಟೈಟಲ್ ಏನು?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆಗಸ್ಟ್ 14ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಕೂಡ ನಟಿಸಿರುವುದು ವಿಶೇಷ. ಬಿಡುಗಡೆ ದಿನಾಂಕ ಹತ್ತಿರವಾದಂತೆ ಟೈಟಲ್ ಬದಲಾಗಿದೆ.
'ಕೂಲಿ' ಸಿನಿಮಾ ಬಿಡುಗಡೆ ಆಗುತ್ತಿರುವ ಅದೇ ದಿನ ಹಿಂದಿ ಸಿನಿಮಾ 'ವಾರ್-2' ಕೂಡ ರಿಲೀಸ್ ಆಗುತ್ತಿದೆ. ಆ ಚಿತ್ರವನ್ನು ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸಿರುವುದು ದಕ್ಷಿಣದಲ್ಲಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಎರಡೂ ಚಿತ್ರಗಳ ವಿತರಣೆ ಹಕ್ಕುಗಳನ್ನು ಖರೀದಿಸಲು ವಿತರಕರು ಮುಗಿಬಿದ್ದಿದ್ದಾರೆ. ಸಿನಿಮಾ ಭರ್ಜರಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡುವ ಸುಳಿವು ಸಿಕ್ತಿದೆ. ಓಟಿಟಿ ರೈಟ್ಸ್ ಕೂಡ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ತಮಿಳಿನಲ್ಲಿ ನಿರ್ಮಾಣವಾಗಿರುವ 'ಕೂಲಿ' ಸಿನಿಮಾ ಹಿಂದಿಗೂ ಡಬ್ ಆಗಿದೆ. ಆಮೀರ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರೆ ಪೂಜಾ ಹೆಗ್ಡೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಇನ್ನು ತಲೈವಾಗೆ ಉತ್ತರ ಭಾರತದಲ್ಲಿ ಒಳ್ಳೆ ಕ್ರೇಜ್ ಇದೆ. ಹಾಗಾಗಿ ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಅದಕ್ಕೆ ತಕ್ಕಂತೆ ಡಬ್ಬಿಂಗ್, ಮಾರ್ಕೆಟಿಂಗ್, ಪ್ರಮೋಷನ್ ಹಾಗೂ ರಿಲೀಸ್ ಪ್ರಯತ್ನ ನಡೀತಿದೆ.
ಮುಂಬೈಗೆ ಕೂಡ ಚಿತ್ರತಂಡ ತೆರಳಿ ಪ್ರಚಾರ ಮಾಡಲಿದೆ. ಇದೆಲ್ಲದರ ನಡುವೆ ಹಿಂದಿ ವರ್ಷನ್ ಟೈಟಲ್ ಬದಲಿಸಲಾಗಿದೆ. ದಕ್ಷಿಣದ ನಾಲ್ಕು ಭಾಷೆಗಳಲ್ಲಿ 'ಕೂಲಿ' ಎನ್ನುವ ಟೈಟಲ್ ಇರಲಿದೆ. ಆದರೆ ಹಿಂದಿಯಲ್ಲಿ ಅದೇ ಟೈಟಲ್‌ನಲ್ಲಿ 2 ಸಿನಿಮಾಗಳು ಬಂದುಹೋಗಿದೆ. ಹಾಗಾಗಿ ಪ್ರೇಕ್ಷಕರು ಕನ್‌ಫ್ಯೂಸ್ ಆಗುತ್ತಾರೆ ಎಂದು ಹೆಸರು ಬದಲಿಸಲು ಚಿತ್ರತಂಡ ಮುಂದಾಗಿದೆ. ಈಗಾಗಲೇ 'ಚಿಕಿತ್ತು' ಹಿಂದಿ ಸಾಂಗ್ ಟೀಸರ್ ಪ್ರೋಮೊದಲ್ಲಿ ಟೈಟಲ್ ಬದಲಿಸಿರುವುದು ಗೊತ್ತಾಗುತ್ತಿದೆ.

ಈ ಹಿಂದೆ 'ಕೂಲಿ' ಟೈಟಲ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ರಾಮನಗರದಲ್ಲಿ ಕೂಡ ಸಿನಿಮಾ ಚಿತ್ರೀಕರಣವಾಗಿತ್ತು. ಬಳಿಕ 'ಕೂಲಿ ನಂ 1' ಎಂಬ ಟೈಟಲ್‌ನಲ್ಲಿ ನಟ ಗೋವಿಂದ ಸಿನಿಮಾ ಮಾಡಿದ್ದರು. ಇದೇ ಟೈಟಲ್‌ನಲ್ಲಿ ವರುಣ್ ಧವನ್ ಕೂಡ ಒಂದು ಸಿನಿಮಾ ಮಾಡಿದ್ದು ಗೊತ್ತೇಯಿದೆ. ಹಾಗಾಗಿ ಈ ಬದಲಾವಣೆ ಎನ್ನಲಾಗ್ತಿದೆ.
ಅಂದಹಾಗೆ ಈ 'ಕೂಲಿ' ಚಿತ್ರದ ಹಿಂದಿ ವರ್ಷನ್‌ಗೆ 'ಮಜ್ದೂರ್' ಎಂದು ಮರುನಾಮಕರಣ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ಅರ್ಥವಾಗುತ್ತದೆ. ಸುಖಾಸುಮ್ಮನೆ ಟೈಟಲ್ ಬದಲಿಸಬೇಡಿ. ಇದು ಸಿನಿಮಾ ಪ್ರಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರತಂಡ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. 'ಕೂಲಿ' ಎಂಬ ಅರ್ಥವನ್ನೇ 'ಮಜ್ದೂರ್' ಪದ ಕೂಡ ಕೊಡುತ್ತದೆ.
ಅನಿರುದ್ದ್ ರವಿಚಂದರ್ 'ಕೂಲಿ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಸಾಂಗ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಶ್ರುತಿ ಹಾಸನ್, ರೆಬಾ ಮೊನಿಕಾ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ಕೈದಿ', 'ಮಾಸ್ಟರ್', 'ವಿಕ್ರಂ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಈ ಸಿನಿಮಾ ಬಗ್ಗೆ ಕೂಡ ನಿರೀಕ್ಷೆ ಹೆಚ್ಚಾಗಿದೆ. ತಮಿಳು ಚಿತ್ರರಂಗದಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡುವ ಮೊದಲ ಸಿನಿಮಾ ಇದಾಗಲಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











