ನನ್ನ ಪತಿ ನಿಜವಾದ ಹೋರಾಟಗಾರ: ರಾಜು ಶ್ರೀವಾತ್ಸವ್ ಪತ್ನಿ ಕಣ್ಣೀರು
ಬಾಲಿವುಡ್ ಚಿತ್ರರಂಗದ ಹಾಸ್ಯನಟ, ಭಾರತೀಯ ಚಿತ್ರರಂಗದ ನಗುವಿನ ಒಡೆಯ ರಾಜು ಶ್ರೀವಾತ್ಸವ್ ಇಂದು(ಸಪ್ಟೆಂಬರ್ 21) ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ಕಳೆದ ಒಂದೂವರೆ ತಿಂಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ವೆಂಟಿಲೇಟರ್‌ನಲ್ಲಿದ್ದರು. ವೈದ್ಯರೂ ಕೂಡ ಅವರ ಆರೋಗ್ಯ ಚೇತರಿಕೆಗೆ ಶತ ಪ್ರಯತ್ನ ನಡೆಸಿದ್ದರು. ಆದರೆ ರಾಜು ಶ್ರೀವಾತ್ಸವ್ ಅವರಿಗೆ ಏಕಾಏಕಿ ಜ್ವರ ಕಾಣಿಸಿಕೊಂಡಿದ್ದು, ದುರಾದೃಷ್ಟವಶಾತ್ ಇಂದು ಕೊನೆಯುಸಿರೆಳೆದಿದ್ದಾರೆ.
ದೆಹಲಿಯ ಏಮ್ಸ್ ನಲ್ಲಿ ರಾಜು ಶ್ರೀವಾತ್ಸವ ನಿಧನರಾಗಿದ್ದು, ಪತಿ ಸಾವಿನ ಬಳಿಕ ರಾಜು ಶ್ರೀವಾತ್ಸವ್ ಅವರ ಪತ್ನಿ ಶಿಖಾ ಮಾತನಾಡಿದ್ದಾರೆ. ಅವರು ಕೊನೆಯ ದಿನಗಳಲ್ಲಿ ಆರೋಗ್ಯ ಸುಧಾರಿಸಲು ತುಂಬಾ ಹೋರಾಡಿದರು. ಆಸ್ಪತ್ರೆಯಲ್ಲಿ ಸುಮಾರು 41 ದಿನಗಳ ಕಾಲ ಅವರು ಹೋರಾಟ ನಡೆಸಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಅವರು ಆಸ್ಪತ್ರೆಯಿಂದ ಹೊರಬರಲಿ ಎಂದು ನಿತ್ಯವೂ ಪಾರ್ಥಿಸಿದ್ದೆ. ಆದರೆ ಅದು ಫಲಿಸಲಿಲ್ಲ ಎಂದು ಭಾವುಕರಾದರು. ತನ್ನ ಆರೋಗ್ಯದ ಚೇತರಿಕೆಗೆ ಹೋರಾಡಿದ ನನ್ನ ಪತಿ ನಿಜವಾದ ಹೋರಾಟಗಾರ ಎಂದು ಶಿಖಾ ಹೇಳಿದರು.
ಭಾರತೀಯ ಚಿತ್ರರಂಗದಲ್ಲಿ ನಾಯಕ ನಟ, ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ರಾಜು ಶ್ರೀವಾತ್ಸವ್ ಬಾಲಿವುಡ್‌ನ ಅನೇಕ ನಟ ದಿಗ್ಗಜರ ಜೊತೆ ನಟಿಸಿದ್ದಾರೆ. 'ಮೈನೆ ಪ್ಯಾರ್ ಕಿಯಾ', 'ಬಾಜಿಗರ್', 'ಬಾಂಬೆ ಟು ಗೋವಾ' ಸೇರಿದಂತೆ ಬಾಲಿವುಡ್‌ನ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದು, ಸ್ಯಾಂಡ್ ಅಪ್ ಕಾಮಿಡಿಯಲ್ಲೂ ಭರ್ಜರಿ ಹೆಸರು ಮಾಡಿದ್ದರು. ಅಲ್ಲದೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕರ ಧ್ವನಿ ಹಾಗೂ ಅವರ ಸ್ಟೈಲ್ ಅನ್ನು ಅನುಕರಣೆ ಮಾಡುತ್ತಿದ್ದರು.

ಅದ್ಭುತ ಹಾಸ್ಯ ನಟನ ನಿಧನಕ್ಕೆ, ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋನು ಸೂದ್, ಬಾಲಿವುಡ್ ನಟಿ ರವೀನಾ ಟಂಡನ್, ಶಿಲ್ಪಾ ಶೆಟ್ಟಿ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೇರಿದಂತೆ ಬಾಲಿವುಡ್ ತಾರೆಯರು ಹಾಗೂ ಇತರ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಜು ಶ್ರೀವಾತ್ಸವ್ ಅವರು ಇತ್ತೀಚೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಭಾರತೀಯ ಜನತಾ ಪಾರ್ಟಿಯ ಸದಸ್ಯನಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಪಕ್ಷದ ಕಾರ್ಯಕರ್ತನ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ರಾಜು ಶ್ರೀವಾತ್ಸವ್‌ರಂತಹ ಅದ್ಭುತ್ ವ್ಯಕ್ತಿ. ಇಷ್ಟು ಬೇಗ ನಮ್ಮನ್ನಗಲಿದ್ದಾರೆ. ಆದರೆ ಅಪಾರ ಜನರ ಮನಸ್ಸಿನಲ್ಲಿ ಅಮರರಾಗಿದ್ದಾರೆ. ಅವರ ಸೇವೆಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದು ಸಂತಾಪ ಸೂಚಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಾಸ್ಯ ನಟ ರಾಜು ಶ್ರೀವಾತ್ಸವ್ ಅವರ ಅಗಲಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ರಾಜು ಶ್ರೀವಾತ್ಸವ್ ಬಗ್ಗೆ ಟ್ವೀಟ್ ಮಾಡಿರುವ ಅವರು, ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ರಾಜು ಶ್ರೀವಾತ್ಸವ್ ಪ್ರಬುದ್ಧ ಕಲಾವಿದರಲ್ಲದೆ, ಉತ್ಸಾಹಭರಿತ ವ್ಯಕ್ತಿಯಾಗಿದ್ದರು. ಸಾಮಾಜಿಕ ಕ್ಷೇತ್ರದಲ್ಲೂ ತುಂಬಾ ಕ್ರಿಯಾಶೀಲರಾಗಿದ್ದರು.ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂತಾಪ ಸೂಚಿದ್ದಾರೆ.
ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ರಾಜಕೀಯ ಗಣ್ಯರು ರಾಜು ಶ್ರೀವಾತ್ಸವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


Click it and Unblock the Notifications











