Maidaan Teaser: ಅಜಯ್ ದೇವಗನ್ ಜೊತೆ 'ಮೈದಾನ'ಕ್ಕೆ ರಕ್ಷಿತ್: ತೆರೆಮೇಲೆ ಭಾರತೀಯ ಫುಟ್ಬಾಲ್‌ನ 'ಸುವರ್ಣ ಯುಗ'
ಅಜಯ್ ದೇವಗನ್ ನಟನೆಯ 'ಭೋಲಾ' ಸಿನಿಮಾ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೊಂದು ಕಡೆ 'ಮೈದಾನ್' ಸಿನಿಮಾ ಟೀಸರ್ ಧೂಳೆಬ್ಬಿಸಿದೆ. ಅಜಯ್ ದೇವಗನ್ ಕನಸಿನ ಸಿನಿಮಾ ಇದು. ಭಾರತೀಯ ಫುಟ್ಬಾಲ್‌ನ 'ಸುವರ್ಣ ಯುಗ'ದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. 60ರ ದಶಕದ ಭಾರತ ಫುಟ್ಬಾಲ್ ತಂಡದ ಕೋಚ್ ಸೈಯದ್ ಅಬ್ದುಲ್ ರಹೀಂ ಹೋರಾಟದ ಕಥೆ ಇಲ್ಲಿದೆ.
ಬಹಳ ಹಿಂದೆ ಸೆಟ್ಟೇರಿದ್ದ 'ಮೈದಾನ್' ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರೋದು ತಡವಾಗಿತ್ತು. ಇದೀಗ ರಿಲೀಸ್ ಡೇಟ್ ಸಮೇತ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಜೂನ್ 23ಕ್ಕೆ ಸಿನಿಮಾ ತೆರೆಗಪ್ಪಳಿಸ್ತಿದ್ದು ಕನ್ನಡ ನಟ ರಕ್ಷಿತ್ ಶೆಟ್ಟಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಟೀಸರ್ ಶೇರ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಮಿತ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪ್ರಿಯಾಮಣಿ, ಗಜ್‌ರಾಜ್ ರಾವ್, ರುದ್ರಾನಿಲ್ ಘೋಷ್ ಕೂಡ ಚಿತ್ರದಲ್ಲಿದ್ದಾರೆ.

ಫುಟ್ಬಾಲ್ ಪ್ರಪಂಚದ ಜನಪ್ರಿಯ ಕ್ರೀಡೆ. ಆದರೆ ಭಾರತ ತಂಡ ವಿಶ್ವಕಪ್ ಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗುತ್ತಿದೆ. ಆದರೆ ದಶಕಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. 1952ರಿಂದ 1962ರ ಕಾಲಘಟ್ಟವನ್ನು ಭಾರತೀಯ ಫುಟ್ಬಾಲ್‌ನ 'ಸುವರ್ಣ ಯುಗ' ಎನ್ನಲಾಗುತ್ತದೆ. 1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಡಲು ಭಾರತ ತಂಡ ನೇರವಾಗಿ ತೇರ್ಗಡೆ ಹೊಂದಿತ್ತು. ಆದರೆ ಟೂರ್ನಿಯಲ್ಲಿ ಆಡದಿರಲು ಎಐಎಫ್‌ಎಫ್ ನಿರ್ಧರಿಸಿತ್ತು. ಆದರೆ ಆ ನಂತರ ತಂಡ ಎಂದೂ ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ.
ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಸೈಯದ್ ಅಬ್ದುಲ್ ರಹೀಂ ತರಬೇತಿಯಲ್ಲಿ ಭಾರತ ಫುಟ್ಬಾಲ್ ತಂಡ 1951 ಹಾಗೂ 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ 1956ರ ಸಮ್ಮರ್ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಗಿಟ್ಟಿಸಿಕೊಂಡಿತ್ತು. ಈ ಸಾಧನೆಯನ್ನೇ ಕೇಂದ್ರವಾಗಿಟ್ಟುಕೊಂಡು 'ಮೈದಾನ್' ಸಿನಿಮಾ ನಿರ್ಮಾಣವಾಗಿದೆ. ಭಾರತ ಫುಟ್ಬಾಲ್ ತಂಡದ ಕೋಚ್ ಸೈಯದ್ ಅಬ್ದುಲ್ ರಹೀಂ ಅಲಿಯಾಸ್ ರಹೀಂ ಸಾಬ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ.
ಶಾರುಕ್ ಖಾನ್ ನಟನೆಯ 'ಚಕ್‌ದೇ ಇಂಡಿಯಾ' ಚಿತ್ರವನ್ನು 'ಮೈದಾನ್' ಸಿನಿಮಾ ನೆನಪಿಸುತ್ತದೆ. 1952ರಲ್ಲಿ ಫಿನ್‌ಲ್ಯಾಂಡ್‌ನ ಹೆಲ್‌ಸಿಂಕಿ ಸ್ಟೇಡಿಯಂನಲ್ಲಿ ನಡೆದ ಯುಗೊಸ್ಲೋವಿಯಾ ಜೊತೆಗಿನ ಭಾರತ ತಂಡದ ಒಲಂಪಿಕ್ಸ್ ಪಂದ್ಯದಿಂದ ಟೀಸರ್ ಶುರುವಾಗುತ್ತದೆ. ಅಂದಿನ ಪಂದ್ಯದಲ್ಲಿ ಭಾರತದ ಆಟಗಾರರು ಬರಿಗಾಲಿನಲ್ಲಿ ಆಡಿದ್ದರು. ಮಳೆಯನ್ನು ಲೆಕ್ಕಿಸದೇ ಗುರಿಯತ್ತ ಸಾಗಿದ್ದರು. ಹೀಗೆ ಟೀಸರ್ ಕುತೂಹಲಭರಿತವಾಗಿ ಸಾಗುತ್ತದೆ. 1956ರ ಸಮ್ಮರ್ ಒಲಂಪಿಕ್ಸ್‌ನಲ್ಲಿ ರಹೀಂ ಸಾಬ್ ತಂಡವನ್ನು ಸೆಮಿಫೈನಲ್‌ವರೆಗೂ ಕೊಂಡೊಯ್ದ ಕಥೆ ಚಿತ್ರದಲ್ಲಿದೆ.

2019ರಲ್ಲಿ 'ಮೈದಾನ್' ಸಿನಿಮಾ ಸೆಟ್ಟೇರಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಶೂಟಿಂಗ್ ತಡವಾಗಿತ್ತು. ಚಿತ್ರಕ್ಕಾಗಿ ದೊಡ್ಡ ಸ್ಟೇಡಿಯಂ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ಒಂದು ಹಂತದಲ್ಲಿ ಸಿನಿಮಾ ನಿಂತೇ ಹೋಯಿತು ಎನ್ನಲಾಗಿತ್ತು. ಆದರೆ ಕೊನೆಗೂ ಸಿನಿಮಾ ರಿಲೀಸ್ ಆಗುತ್ತಿದೆ. ಭಾರತದ ಕ್ರೀಡೆ ಅಂದ್ರೆ ಬರೀ ಕ್ರಿಕೆಟ್ ಎನ್ನುವಂತಾಗಿದೆ. ಆದರೆ ಭಾರತ ಫುಟ್ಬಾಲ್ ತಂಡದ ಶ್ರೇಷ್ಠ ಸಾಧನೆಯನ್ನು ತೆರೆಗೆ ತರಲಾಗುತ್ತಿದೆ. ಭಾರತೀಯರ ಸ್ವಾಭಿಮಾನ, ಕೆಚ್ಚು, ಹೋರಾಟ ಮನೋಭಾವವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ.
ರಹೀಂ ಸಾಬ್ ಪತ್ನಿ ಪಾತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಚಿತ್ರಕ್ಕೆ ಎ. ಆರ್ ರಹಮಾನ್ ಸಂಗೀತ ನಿರ್ದೇಶನವಿದೆ. ಜೀ ಸ್ಟುಡಿಯೋ ಜೊತೆ ಸೇರಿ ಬೋನಿ ಕಪೂರ್ 'ಮೈದಾನ್' ಸಿನಿಮಾ ನಿರ್ಮಿಸಿದ್ದಾರೆ. ಜೀ ಸ್ಟುಡಿಯೋ ಸಂಸ್ಥೆಯೇ ಚಿತ್ರವನ್ನು ವಿತರಣೆ ಮಾಡುತ್ತಿದೆ. ನಿರ್ದೇಶಕ ಅಮಿತ್ ಶರ್ಮಾ ಜೊತೆಗೆ ಅಮನ್ ರಾಯ್, ಅತುಲ್ ಶಾಹಿ ಚಿತ್ರಕಥೆ ಬರೆದಿದ್ದಾರೆ. ರಿತೇಶ್ ಶಾ ಹಾಗೂ ಸಿದ್ದಾಂತ್ ಮಾಗೊ ಸಂಭಾಷನೆ ಇದೆ.


Click it and Unblock the Notifications











