ಆ 'ವ್ಯಕ್ತಿ'ಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೆರಳಿ ಕೆಂಡವಾದ ರಾಕುಲ್ ಪ್ರೀತ್ ಸಿಂಗ್, ಇಷ್ಟೇ ಪ್ರಪಂಚ ಅಂದರು ಜನ..!
ಒಂದಿಲ್ಲೊಂದು ವಿಚಾರದಿಂದ ಸದಾ ಸುದ್ದಿಯಾಗುವ ನಾಯಕಿಯರಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡಾ ಒಬ್ಬರು. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಾಕುಲ್ ಪ್ರೀತ್ ಸಿಂಗ್ ಇಲ್ಲಿಯವರೆಗೆ ಹಲವಾರು ಪಾತ್ರಗಳನ್ನು ಸಲೀಸಾಗಿ ನಿರ್ವಹಿಸಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.
ಆದರೂ ಕೂಡ ಇವರ ವೃತ್ತಿಜೀವನದ ಗ್ರಾಫ್ ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ಇದಕ್ಕೆ ಕಾರಣ ಹತ್ತು ಹಲವು ಇರಬಹುದಾದರೂ ಸದ್ಯಕ್ಕೆ ರಾಕುಲ್ ಪ್ರೀತ್ ಸಿಂಗ್ ಮಾಧ್ಯಮದವರ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಐಫಾ ಪ್ರಶಸ್ತಿ ಸಮಾರಂಭದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಮುಖ ಕಿವುಚಿಕೊಂಡು ಸುದ್ದಿಯಾಗಿದ್ದಾರೆ.

ಹೌದು ಅಸಲಿಗೆ ರಾಕುಲ್ ಪ್ರೀತ್ ಸಿಂಗ್ ಅವರ ಮಾವ ವಾಶು ಭಗ್ನಾನಿ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಬಡೇ ಮಿಯಾ ಚೋಟೆ ಮಿಯಾ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಮತ್ತು ಚಿತ್ರದ ನಿರ್ಮಾಪಕ ವಾಶು ಭಗ್ನಾನಿ ನಡುವೆ ವಿವಾದ ಭುಗಿಲೆದ್ದಿದೆ. ಒಂದು ಕಡೆ 07.30 ಕೋಟಿ ಹಣವನ್ನು ನೀಡಬೇಕೆಂದು ನಿರ್ಮಾಪಕ ವಾಶು ಭಗ್ನಾನಿ ನನಗೆ ನೀಡಬೇಕೆಂದು ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಎಂಪ್ಲಾಯೀಸ್ (FWICE) ಗೆ ದೂರು ಸಲ್ಲಿಸಿದ್ದರೆ, ಚಿತ್ರದ ನಿರ್ಮಾಪಕ ವಾಶು ಭಗ್ನಾನಿ ಅವರು ಅಲಿ ಅಬ್ಬಾಸ್ ಜಾಫರ್ ವಿರುದ್ಧ ಪ್ರತಿ ದೂರನ್ನು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದಾರೆ.
ಅಲಿ ಅಬ್ಬಾಸ್ ಜಾಫರ್ ವಿರುದ್ಧ ವಂಚನೆಯ ಆರೋಪ ಮಾಡಿರುವ ವಾಶು ಭಗ್ನಾನಿ, ಚಿತ್ರದ ಖರ್ಚು-ವೆಚ್ಚವನ್ನು ಚಿತ್ರೀಕರಣದ ಸಮಯದಲ್ಲಿ ಅಲಿ ಅಬ್ಬಾಸ್ ಜಾಫರ್ ತಮ್ಮ ಹತೋಟಿಗೆ ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ. ಸುಲಿಗೆ, ಬ್ಲ್ಯಾಕ್ ಮೇಲ್, ಬೆದರಿಕೆ, ಕಿರುಕುಳ, ಮಾನ ಹಾನಿಯ ಆರೋಪವನ್ನು ಮಾಡಿರುವ ವಾಶು ಭಗ್ನಾನಿ 9.50 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ನಮೂದಿಸಿದ್ದಾರೆ.ಅಬುಧಾಬಿಯ ಶೆಲ್ ಕಂಪನಿಯ ಮೂಲಕ ಈ ಹಣವನ್ನು ಅಲಿ ಅಬ್ಬಾಸ್ ಜಾಫರ್ ಬಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಐಫಾ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಅಬುದಾಬಿಗೆ ರಾಕುಲ್ ಬಂದಾಗ, ಪತ್ರಕರ್ತರೊಬ್ಬರು ರಾಕುಲ್ ಅವರಲ್ಲಿ ಅವರ ಮಾವನ ಈ ಹಣದ ವ್ಯವಹಾರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಗ್ರೀನ್ ಕಾರ್ಪೆಟ್ ಮೇಲೆ ಇದ್ದ ರಾಕುಲ್‌ಗೆ ಆರಂಭದಲ್ಲಿ ಸಾಮಾನ್ಯ ಪ್ರಶ್ನೆಯನ್ನು ಕೇಳಿ ಆ ನಂತರ ನಿಮ್ಮ ಮಾವ ವಾಶು ಭಗ್ನಾನಿ ಅವರ ವಿವಾದದ ಕುರಿತು ನೀವೇನು ಹೇಳ್ತೀರಾ ಎಂದಿದ್ದಾರೆ. ಇದಕ್ಕೆ ಕೆಂಡಾಮಂಡಲವಾದ ರಾಕುಲ್ ಪ್ರಶ್ನೆಗೆ ಉತ್ತರಿಸದೇ ಕೋಪ ಮಾಡಿಕೊಂಡು ಮುಂದೆ ಸಾಗಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತರೇಹವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ರಾಕುಲ್ ಪರ ವಹಿಸಿಕೊಂಡು ಮಾತನಾಡಿದರೆ, ಇನ್ನೂ ಹಲವರು ರಾಕುಲ್ ಪ್ರೀತ್ ಸಿಂಗ್ ಅವರ ಈ ನಡೆಯನ್ನು ಕಂಡು ಕಾಲೆಳೆಯುತ್ತಿದ್ದಾರೆ. ಮುಖ ತಿರುಗಿಸಿಕೊಂಡು ಹೋಗುವ ಬದಲು, ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಉಳಿದಂತೆ ರಾಕುಲ್ ಪ್ರೀತ್ ಸಿಂಗ್ ಕೈಯಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ. ವಾಶು ಭಗ್ನಾನಿ ಮಗ ಜಾಕಿ ಭಗ್ನಾನಿ ಅವರ ಜೊತೆ ಸಪ್ತಪದಿ ತುಳಿದು ಬಾಲಿವುಡ್ ಸೊಸೆಯಾದ ನಂತರ ರಾಕುಲ್ ಅವರನ್ನು ದಕ್ಷಿಣ ಭಾರತೀಯ ಚಿತ್ರರಂಗ ಬಹುತೇಕ ಮರೆತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸೌತ್‌ನಲ್ಲಿ ಯಾವ ಚಿತ್ರವನ್ನು ರಾಕುಲ್ ಪ್ರೀತ್ ಸಿಂಗ್ ಸದ್ಯಕ್ಕೆ ಒಪ್ಪಿಕೊಂಡಿಲ್ಲ. ಬದಲಿಗೆ ಅಜಯ್ ದೇವಗನ್ ಅಭಿನಯದ ದೇ ದೇ ಪ್ಯಾರ್ ದೇ ಚಿತ್ರದ ಸಿಕ್ವೆಲ್‌ನ ರಾಕುಲ್ ಪ್ರೀತ್ ಸಿಂಗ್ ಒಪ್ಪಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡತೆ ಆದರೆ ಈ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.


Click it and Unblock the Notifications











