ಸೆನ್ಸಾರ್ ಮುಗಿಸಿದ 'ರಾಮಾಯಣ' ಟೀಸರ್; ಇಲ್ಲಿದೆ ಬಿಗ್ ಅಪ್ಡೇಟ್
ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಧಿಕೃತವಾಗಿ ಚಿತ್ರದ ಯಾವುದೇ ಪೋಸ್ಟರ್ ಹಾಗೂ ಟೀಸರ್ ಹೊರಬಂದಿಲ್ಲ. ಇದೀಗ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಈಗಾಗಲೇ ಸೆನ್ಸಾರ್ ಸರ್ಟಿಫಿಕೇಟ್ ಸಹ ಸಿಕ್ಕಿದೆ.
ಯಾವುದೇ ಸಿನಿಮಾ ಟೀಸರ್, ಟ್ರೈಲರ್ ಬಿಡುಗಡೆಗೂ ಮುನ್ನ ಸೆನ್ಸಾರ್ ಮಂಡಳಿಗೆ ತೋರಿಸಬೇಕು. ಅದರಲ್ಲಿ ಏನಾದರೂ ಆಕ್ಷೇಪಾರ್ಹ ವಿಚಾರಗಳಿದ್ದರೆ ಅದನ್ನು ಗಮನಿಸಿ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚಿಸುತ್ತದೆ. ಆ ಬಳಿಕವೇ ಅದನ್ನು ಬಿಡುಗಡೆ ಮಾಡಲು ಅವಕಾಶ ಇದೆ. ಅದೇ ರೀತಿ ಇದೀಗ 'ರಾಮಾಯಣ' ಚಿತ್ರದ ಫಸ್ಟ್ ಗ್ಲಿಂಪ್ಸ್ ಸೆನ್ಸಾರ್ ಕಾರ್ಯ ಮುಗಿಸಿದೆ.

ನಿಮಿತ್ ಮಲ್ಹೋತ್ರಾ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಶ್ ಕೂಡ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಎರಡು ಭಾಗಗಳಾಗಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ಈಗಾಗಲೇ ಕಾವ್ಯ, ನಾಟಕ, ಸಿನಿಮಾ, ಧಾರಾವಾಹಿ ರೂಪದಲ್ಲಿ ರಾಮಾಯಣ ಕಾವ್ಯ ಬಂದು ಹೋಗಿದೆ. ಆದರೆ ಅದೇ ಕಥೆಯನ್ನು ಹೊಸ ತಂತ್ರಜ್ಞಾನದ ಸಹಾಯದಿಂದ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ತ್ರೀಡಿಯಲ್ಲಿ ಕೂಡ ಸಿನಿಮಾ ತೆರೆಗೆ ಬರ್ತಿದೆ.
ಸದ್ಯ 'ರಾಮಾಯಣ ತ್ರೀಡಿ' ಸಿನಿಮಾ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಯಾವಾಗ ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ತ್ರೀಡಿ ಟೀಸರ್ ಆಗಿರುವುದರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುವ ತಯಾರಿ ನಡೀತಿದೆ. ದೊಡ್ಡ ಈವೆಂಟ್ ಮಾಡಿ ವೇದಿಕೆಯಲ್ಲಿ ವೀಡಿಯೋ ಪ್ರದರ್ಶನ ಮಾಡು ಸಾಧ್ಯತೆಯಿದೆ. ಅದೇ ಸಮಯದಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ತ್ರೀಡಿ ಕನ್ನಡಕ ಧರಿಸಿ ಟೀಸರ್ ನೋಡಬಹುದು.
ಈಗಾಗಲೇ ಒಂದಷ್ಟು ಸಿನಿಮಾ ಚಿತ್ರೀಕರಣ ನಡೆದಿದೆ. ಯಶ್ ಸದ್ಯ ರಾವಣನ ವೇಷ ಧರಿಸಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಆದರೆ ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ಯಾವುದೇ ದೃಶ್ಯಗಳು ಇರುವುದಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತರಿಸಬಹುದು. ಆದರೆ ರಾಮ, ಸೀತೆ, ರಾವಣರ ಲುಕ್ ರಿವೀಲ್ ಆಗುವ ಸಾಧ್ಯತೆ ದಟ್ಟವಾಗಿದೆ. ಅಂದಹಾಗೆ 2 ನಿಮಿಷ 36 ಸೆಕೆಂಡ್‌ಗಳ ವೀಡಿಯೋ ಇದಾಗಿದೆ. ಹಿಂದಿ ಭಾಷೆಯಲ್ಲಿ ಟೀಸರ್ ಇರಲಿದೆ. ಮುಂಬೈ ಸೆನ್ಸಾರ್ ಮಂಡಳಿಯಲ್ಲಿ ಸರ್ಟಿಫಿಕೇಟ್ ಸಿಕ್ಕಿದೆ.
'ಚಿಲ್ಲರ್ ಪಾರ್ಟಿ', 'ದಂಗಲ್', 'ಚಿಚೋರೆ', 'ಭವಲ್' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ನಿತೇಶ್ ತಿವಾರಿ ಮೇಲೆ ಭಾರೀ ನಿರೀಕ್ಷೆಯಿದೆ. ಹನುಮತನಾಗಿ ಸನ್ನಿ ಡಿಯೋಲ್, ಇಂದ್ರದೇವನಾಗಿ ಕುನಾಲ್ ಕಪೂರ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಕೈಕೆಯಿ ಆಗಿ ಲಾರಾ ದತ್ತಾ, ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್ ಹೀಗೆ ಘಟಾನಘಟಿ ಕಲಾವಿದರು ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ.

ತ್ರೀಡಿ ಸಿನಿಮಾ ಆಗಿರುವುದರಿಂದ ಸಣ್ಣ ಪುಟ್ಟ ಸೆಟ್‌ಗಳನ್ನು ನಿರ್ಮಿಸಿ ಗ್ರೀನ್ ಮ್ಯಾಟ್‌ನಲ್ಲಿ ಸಿನಿಮಾ ತೆರೆ ಹಿಡಿಯಲಾಗುತ್ತಿದೆ. ಚಿತ್ರವನ್ನು ದೇಶ ವಿದೇಶದ ಭಾಷೆಗಳಿಗೆ ಡಬ್ ಮಾಡುವ ಕೆಲಸ ನಡೀತಿದ. ಆದರೆ ಡಬ್ ಬದಲು ಹೊಸ ತಂತ್ರಜ್ಞಾನ ಬಳಸಿ ಹೊಸ ರೂಪ ಕೊಡಲು ತೀರ್ಮಾನಿಸಲಾಗಿದೆ. ಸಾಮಾನ್ಯವಾಗಿ ಡಬ್ ಮಾಡಿದರೆ ಕಲಾವಿದರ ಲಿಪ್ ಸಿಂಕ್ ಆಗುವುದಿಲ್ಲ. ಆದರೆ ರಾಮಾಯಣ ಚಿತ್ರದಲ್ಲಿ ಆಯಾ ಭಾಷೆಗಳಿಗೆ ಕಲಾವಿದರ ಲಿಪ್ ಸಿಂಕ್ ಆಗವಂತೆ ಮಾಡಲಾಗುತ್ತಿದೆ. ಆ ಮೂಲಕ ಹೊಸ ಅಧ್ಯಾಯಕ್ಕೆ ಚಿತ್ರ ನಾಂದಿ ಆಗುತ್ತದೆ.
ಅಂದರೆ ಕಲಾವಿದರ ಸಂಭಾಷಣೆಯನ್ನು ಎಐ ತಂತ್ರಜ್ಞಾನ ಬಳಸಿ ಆಯಾ ಭಾಷೆಯ ಡಬ್ ಮಾಡಿ, ಬಳಿಕ ಆಯಾ ಭಾಷೆಗೆ ಲಿಪ್ ಸಿಂಕ್ ಮಾಡುವ ಪ್ರಯತ್ನ ನಡೀತಿದೆ. ಇದನ್ನು ನೋಡಿದರೆ ನಮ್ಮದೇ ಭಾಷೆಯಲ್ಲಿ ಕಲಾವಿದರು ಮಾತನಾಡಿದಂತೆ ಇರುತ್ತದೆ. ಈ ಬಗ್ಗೆ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.


Click it and Unblock the Notifications











