ಯಶ್ 'ರಾಮಾಯಣ' ಚಿತ್ರಕ್ಕೆ ಸಂಕಷ್ಟ?; ಕಾಪಿರೈಟ್ ಉಲ್ಲಂಘನೆ ಆರೋಪ ಸಂಬಂಧ ನೋಟಿಸ್
ನಿತೇಶ್ ವಿವಾರಿ ನಿರ್ದೇಶನದ ಬಾಲಿವುಡ್ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಧಿಕೃತವಾಗಿ ಸಿನಿಮಾ ಘೋಷಣೆ ಆಗದೇ ಇದ್ದರೂ ತೆರೆಮರೆಯಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ರಣ್‌ಬೀರ್ ಕಪೂರ್ ಶ್ರೀರಾಮನಾಗಿ ಸಾಯಿ ಪಲ್ಲವಿ ಸೀತಾಮಾತೆಯಾಗಿ ನಟಿಸುತ್ತಿದ್ದಾರೆ. ಕನ್ನಡ ನಟ ಯಶ್ ಸಹ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ 'ರಾಮಾಯಣ' ಕಾವ್ಯವನ್ನು ತೆರೆಗೆ ತರಲಾಗುತ್ತಿದೆ. 3 ಭಾಗಗಳಾಗಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಮುಂದಿನ ವರ್ಷವೇ ಮೊದಲ ಭಾಗ ಬಿಡುಗಡೆ ಆಗುವ ನಿರೀಕ್ಷೆಯಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಸಹ ಶುರುವಾಗಿದೆ. ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಇದೀಗ ಚಿತ್ರಕ್ಕೆ ಸಮಸ್ಯೆ ಎದುರಾಗಿದೆ.

ನಮಿತ್ ಮಲ್ಹೋತ್ರಾ ಹಾಗೂ ಯಶ್ ಜಂಟಿಯಾಗಿ 'ರಾಮಾಯಣ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆದರೆ ಈಗ ತೆಲುಗು ನಿರ್ಮಾಪಕ ಅಲ್ಲು ಅರವಿಂದ್, ಮಧು ಮಂತೆನಾ ಹಾಗೂ ನಮಿತ್ ಮಲ್ಹೋತ್ರಾ ಸಿನಿಮಾ ಮಾಡಲು ಬಹಳ ಹಿಂದೆಯೇ ಪ್ರಯತ್ನಿಸಿದ್ದರು. ನಿತೇಶ್ ತಿವಾರಿ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ತಡನಾಗುತ್ತಾ ಬಂದಿತ್ತು. ಆದರೆ ಕಳೆದ ವರ್ಷ ದಿಢೀರನೇ ನಮಿತ್ ಮಲ್ಹೋತ್ರಾ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಮಾಡುವ ಚರ್ಚೆ ಶುರುವಾಯಿತು. ಇತ್ತೀಚೆಗೆ ಯಶ್ ಸಹ ನಿರ್ಮಾಪಕ ಎನ್ನುವುದು ಗೊತ್ತಾಯಿತು.
ಮಧು ಮಂತೆನಾ, ನಮಿತ್ ಮಲ್ಹೋತ್ರಾ ಹಾಗೂ ಅಲ್ಲು ಅರವಿಂದ್ ಸೇರಿ ರಾಮಾಯಣ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದರು. ತಮ್ಮದೇ ವಿಎಫ್‌ಎಕ್ಸ್ ಸಂಸ್ಥೆಯಲ್ಲಿ ನಮಿತ್ ಚಿತ್ರದ ಪ್ರೀ ವಿಷ್ಯುವಲೈಷನ್ ಪೂರ್ಣಗೊಳಿಸಿದ್ದರು. ಆದರೆ ಬಳಿಕ ಮಧು ಹಾಗೂ ಅಲ್ಲು ಅರವಿಂದ್ ಚಿತ್ರದಿಂದ ಹೊರ ಬಂದಿದ್ದರು. ಬಳಿಕ ಯಶ್ ಜೊತೆ ಸೇರಿ ನಮಿತ್ ಸಿನಿಮಾ ಮಾಡಲು ಮುಂದಾದಂತೆ ಕಾಣುತ್ತಿದೆ.
ಸದ್ಯ ಮಧು ಹಾಗೂ ಅರವಿಂದ್ ಸೇರಿ ನಮಿತ್ ಮಲ್ಹೋತ್ರಾ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ. ಒಪ್ಪಂದದ ಭಾಗವಾಗಿ ಮಧು ಮಂಥೇನಾ ಮತ್ತು ಅಲ್ಲು ಅರವಿಂದ್ ಅವರಿಗೆ ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್‌ನಿಂದ ಹಣ ವಾಪಸ್ ಕೊಡಬೇಕು ಎನ್ನುವುದು ನೋಟಿಸ್ ಸಾರಾಂಶ. ನಮ್ಮ ಅನುಮತಿ ಇಲ್ಲದೇ ಚಿತ್ರದ ಯಾವುದೇ ಹಕ್ಕು ನಿಮಗೆ ಸಿಗಲ್ಲ. ನಿತೀಶ್ ತಿವಾರಿ ಅಥವಾ ಬೇರೆಯವರು ಚಿತ್ರವನ್ನು ನಿರ್ದೇಶನ ಮಾಡಿದರೂ ನಮ್ಮ ಹಕ್ಕು ಉಲ್ಲಂಘಿಸಿ ಸಿನಿಮಾ ಮುಂದುವರೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದುವರೆಗೆ ಪ್ರೊಡಕ್ಷನ್ ಹೌಸ್‌ನಿಂದ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮೂರು ಜನ ಒಟ್ಟಿಗೆ ಸೇರಿ ಸಿನಿಮಾ ಮಾಡಲು ಮುಂದಾಗಿ ಚಿತ್ರಕಥೆ ಸಿದ್ಧಪಡಿಸಿದ್ದರು. ಈಗ ನಮಿತ್ ಏಕಾಂಗಿ ಆಗಿ ಸಿನಿಮಾ ಮಾಡಲು ಮುಂದಾಗಿರುವುದಕ್ಕೆ ಉಳಿದ ಇಬ್ಬರು ಹಕ್ಕುಗಳಿಗೆ ಪಾಲು ಕೇಳುತ್ತಿದ್ದಾರೆ. ಈ ಸಂಬಂಧ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಎದುರಾಗಿದೆ. ಈ ಬಗ್ಗೆ ಮಧು ಮಂಥೆನಾ ಪರ ವಕೀಲರು ಪ್ರಕಟನೆ ನೀಡಿದ್ದಾರೆ.
'ರಾಮಾಯಣ' ಚಿತ್ರತಂಡ ಮಧು ಮಂಥೇನಾ ಜೊತೆ ಯಾವುದೇ ಒಪ್ಪಂದ ಇನ್ನು ಮಾಡಿಕೊಂಡಿಲ್ಲ. ಮಧು, ಅರವಿಂದ್ ಎಲ್ಲರೂ ಸೇರಿ ಚಿತ್ರಕಥೆ ಸಿದ್ಧಪಡಿಸಲು ಸಾಕಷ್ಟು ಸಮಯ, ಹಣ ಹಾಗೂ ಶ್ರಮ ವ್ಯಯಿಸಿದ್ದಾರೆ. ಆದರೆ ನಿತೇಶ್ ತಿವಾರಿ ಅದೇ ಸ್ಕ್ರಿಪ್ಟ್ ಬಳಸಿ ಈಗ ಸಿನಿಮಾ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಕೇಳಿದ್ದಾರೆ.

ಅಂದಹಾಗೆ 'ರಾಮಾಯಣ' ಚಿತ್ರದಲ್ಲಿ ಕೈಕೇಯಿ ಆಗಿ ಲಾರಾ ದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್‌ಸಿಂದ್, ಹನುಮಂತನಾಗಿ ಸನ್ನಿ ಡಿಯೋಲ್, ವಿಭೀಷಣ ಆಗಿ ವಿಜಯ್ ಸೇತುಪತಿ, ದಶರಥ ಆಗಿ ಅರುಣ್ ಗೋವಿಲ್ ಹೀಗೆ ಘಟಾನುಘಟಿ ಕಲಾವಿದರು ನಟಿಸುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











