'ಅವತಾರ್'ಗಿಂತ 'ರಾಮಾಯಣ' ಬಜೆಟ್ ಹೆಚ್ಚು; ನಿರ್ಮಾಪಕರಿಂದಲೇ ಅಧಿಕೃತ ಮಾಹಿತಿ
ಹಾಲಿವುಡ್ ಸಿನಿಮಾಗಳನ್ನು ನೋಡಿದಾಗ ಅಬ್ಬಬ್ಬಾ, ಎಷ್ಟು ಕೋಟಿ ಖರ್ಚು ಮಾಡಿ ಇಂತ ಸಿನಿಮಾಗಳನ್ನು ಮಾಡ್ತಾರೆ ಅನಿಸೋದು ನಿಜ. ಸಾವಿರಾರು ಕೋಟಿ ಹಣವನ್ನು ನೀರಿನಂತೆ ಚೆಲ್ಲಿ ತೆರೆಮೇಲೆ ಅದ್ಭುತ ಪ್ರಪಂಚವನ್ನೇ ಸೃಷ್ಟಿಸುತ್ತಾರೆ. ಭಾರತದಲ್ಲಿ ಅಷ್ಟು ದೊಡ್ಡ ಬಜೆಟ್ ಸಿನಿಮಾಗಳ ನಿರ್ಮಾಣ ಕಷ್ಟ ಎನ್ನುವ ಕಾಲ ಇತ್ತು. ಆದರೆ ಈಗ ಅದು ಸಾಧ್ಯವಾಗ್ತಿದೆ.
ರಣ್‌ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ಬಜೆಟ್ ಕೇಳಿದವರು ಶಾಕ್ ಆಗಿದ್ದಾರೆ. ಇಷ್ಟು ದಿನ 300 ಕೋಟಿ ರೂ., 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಕಳೆದ ವಾರ ಬಾಲಿವುಡ್ ಮಾಧ್ಯಮಗಳಲ್ಲಿ 1500 ಕೋಟಿ ರೂ. ಬಜೆಟ್ ಎಂದು ಸುದ್ದಿ ಆಗಿತ್ತು. ಆದರೆ ಇದೀಗ ಸ್ವತಃ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಲೆಕ್ಕ ಕೊಟ್ಟಿದ್ದಾರೆ.

ಭಾರತದಲ್ಲಿ ನಿರ್ಮಾಣವಾಗುತ್ತಿರುವ ಹಾಲಿವುಡ್ ಸಿನಿಮಾ 'ರಾಮಾಯಣ' ಎಂದು ಚಿತ್ರತಂಡ ಹೇಳುತ್ತಲೇ ಬರ್ತಿತ್ತು. ಅಂದರೆ ಹಾಲಿವುಡ್ ಸಿನಿಮಾಗಳ ರೀತಿ ಬಹುಕೋಟಿ ವೆಚ್ಚದಲ್ಲಿ ಅಂಥದ್ದೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಡುತ್ತಿರುವ ಸಿನಿಮಾ ಎನ್ನಲಾಗ್ತಿತ್ತು. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗುತ್ತದೆ. ಹಾಲಿವುಡ್ ಸಂಸ್ಥೆಗಳು ಚಿತ್ರ ನಿರ್ಮಾಣ ಹಾಗೂ ಬಿಡುಗಡೆಗೆ ಕೈ ಜೋಡಿಸುತ್ತವೆ ಎಂದು ಸುದ್ದಿ ಆಗಿತ್ತು. ಅದಕ್ಕೆ ತಕ್ಕಂತೆ ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಎರಡು ಭಾಗಗಳಾಗಿ 'ರಾಮಾಯಣ' ಕಾವ್ಯವನ್ನು ತೆರೆಮೇಲೆ ತರಲಾಗುತ್ತಿದೆ. ಐಮ್ಯಾಕ್ಸ್ ವರ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದು. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತಹ ಪ್ರಾಜೆಕ್ಟ್. ಚಿತ್ರದ ಮೊದಲ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬಂದರೆ 2ನೇ ಭಾಗ 2027ರ ಬೆಳಕಿನ ಹಬ್ಬಕ್ಕೆ ತೆರೆಗೆ ಬರಲಿದೆ. ಚಿತ್ರಕ್ಕೆ ಕನ್ನಡ ನಟ ಯಶ್ ಕೂಡ ಸಹ ನಿರ್ಮಾಪಕರಾಗಿ ಕೈಜೋಡಿಸಿರುವುದು ವಿಶೇಷ.

ನಿತೇಶ್ ತಿವಾರಿ ಈ ಪೌರಾಣಿಕ ಕಥಾಹಂದರದ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ. ಆರ್ ರಹಮಾನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸನ್ನಿ ಡಿಯೋಲ್, ಕಾಜಲ್ ಅಗರ್‌ವಾರ್, ಅರುಣ್ ಗೋವಿಲ್, ರವಿ ದುಬೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಂದ ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ಸೂಪರ್ ಹಿಟ್ ಆಗಿದೆ. ಹಾಲಿವುಡ್ ಸಿನಿಮಾಗಳ ರೀತಿ 'ರಾಮಾಯಣ' ಚಿತ್ರದ ಪ್ರಚಾರ, ಮಾರ್ಕೆಟಿಂಗ್, ವಿತರಣೆ ಪ್ಲ್ಯಾನ್ ಮಾಡಲಾಗ್ತಿದೆ. ಸದ್ಯ ಚಿತ್ರದ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಸಂದರ್ಶನವೊಂದರಲ್ಲಿ ಭಾಗಿ ಆಗಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
'ರಾಮಾಯಣ' ಭಾಗ 1 ಹಾಗೂ ಭಾಗ-2 ಚಿತ್ರಗಳಿಗೆ ನಾವು ಒಟ್ಟು 500 ಮಿಲಿಯನ್ ಡಾಲರ್ ಅಂದರೆ ಅಂದಾಜು 4000 ಕೋಟಿ ರೂ. ಹಣ ಹೂಡುತ್ತಿದ್ದೇವೆ. ಇಡೀ ಪ್ರಪಂಚ ನೋಡಬೇಕಾದ ಶ್ರೇಷ್ಠ ಕಥೆಯನ್ನು ದೊಡ್ಡದಾಗಿ ತೆರೆಗೆ ತರುತ್ತಿದ್ದೇವೆ. ಕೆಲ ಸಿನಿಮಾಗಳಿಗಿಂತ ಇದು ಚಿಕ್ಕ ಬಜೆಟ್ ಸಿನಿಮಾ ಅಂತ ನನಗೆ ಅನ್ನಿಸುತ್ತೆ. ಆದರೆ ಕಡಿಮೆ ವೆಚ್ಚದಲ್ಲಿ ದೊಡ್ಡ ಸಿನಿಮಾ ಮಾಡ್ತಿದ್ದೀವಿ. ನನಗೆ ಇದು ಹಣದ ವಿಚಾರ ಅಲ್ಲವೇ ಅಲ್ಲ ಎಂದು ನಿಮಿತ್ ಮಲ್ಹೋತ್ರಾ ಹೇಳಿದ್ದಾರೆ.
DNEG ಸಂಸ್ಥೆ 'ರಾಮಾಯಾಣ' ಚಿತ್ರದ ವಿಎಫ್‌ಎಕ್ಸ್ ವರ್ಕ್ ಮಾಡುತ್ತಿರುವುದು ವಿಶೇಷ. ನಟ ಯಶ್ ಕೂಡ 'ರಾಮಾಯಣ' ಚಿತ್ರದ ಮೇಲೆ ಬಹಳ ಭರವಸೆಯಿಂದ ಇದ್ದಾರೆ. ರಾವಣನಾಗಿ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಭಾರೀ ಮೊತ್ತದ ಬಂಡವಾಳ ಚಿತ್ರಕ್ಕಾಗಿ ಹೂಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಕಂಡು ಕೇಳರಿಯದ ಸಿನಿಮಾ ಇದಾಗಲಿದೆ.


Click it and Unblock the Notifications











