Ramayana Teaser: ಕೊನೆಗೂ ಬಂತು 'ರಾಮಾಯಣ' ಟೀಸರ್; ಯಶ್ ಅಭಿಮಾನಿಗಳಿಗೆ ಮಾತ್ರ ನಿರಾಸೆ
ಅಂತೂ ಇಂತೂ ಅಭಿಮಾನಿಗಳು ಕೇಳುತ್ತಿದ್ದ 'ರಾಮಾಯಣ' ಟೀಸರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲಿ ಅಭಿಮಾನಿಗಳ ಮನಗೆದ್ದಿದೆ. ಕೆಲವರು ಟೀಕಿಸಲು ಆರಂಭಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆ ಕೂಡ ಟೀಸರ್ ಸದ್ದು ಮಾಡ್ತಿದೆ. ಚಿತ್ರದಲ್ಲಿ ರಾಮನ ಪಾತ್ರ ಪರಿಚಯಿಸುವ ಟೀಸರ್ ಮಾತ್ರ ಸದ್ಯ ರಿಲೀಸ್ ಆಗಿದೆ. ಹಾಗಾಗಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಆರ್ಭಟವೇ ಜೋರಾಗಿದೆ.
ಟೀಸರ್ ಕೊನೆಯಲ್ಲಿ ರಾವಣನಾಗಿ ಯಶ್ ನಡೆದು ಹೋಗುವ ಸಣ್ಣ ಝಲಕ್ ಮಾತ್ರ ಇದೆ. ಆದರೆ ಹಿಂಬದಿ ಮಾತ್ರ ತೋರಿಸಿದ್ದು ಲಂಕಾಸುರನ ಲುಕ್ ರಿವೀಲ್ ಆಗಿಲ್ಲ. ಹಾಗಾಗಿ ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 4000 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಆದರೆ ಟೀಸರ್ ನೋಡಿ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಂದಷ್ಟು ಶಾಟ್ಸ್ ನಿಜಕ್ಕೂ ಅದ್ಭುತ ಎನಿಸುವಂತಿದೆ. ಮತ್ತೆ ಕೆಲವು ಪೇಲವ ಎನ್ನುವಂತಿದೆ.

ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರಕ್ಕೆ ಹೋಲಿಸಿ ಕೆಲವರು 'ರಾಮಾಯಣ' ಟೀಸರ್ ಟ್ರೋಲ್ ಮಾಡುತ್ತಿದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್ ಹೇಳಿ ಮಾಡಿಸಿದ ನಟ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಮರ್ಯಾದ ಪುರುಷೋತ್ತಮನ ಅವತಾರದಲ್ಲಿ ಗಮನ ಸೆಳೆಯುತ್ತಾರೆ. ಆದರೆ ರಾಮನಾ ತೇಜಸ್ಸು ಕಾಣುತ್ತಿಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಚಿತ್ರತಂಡ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
"ರಾಮನು ಸರ್ವಕಾಲಿಕ ಶ್ರೇಷ್ಠ. ಯಾವಾಗಲೂ ಹೆಚ್ಚಿನ ಒಳಿತಿನ ಲಾಭಕ್ಕಾಗಿ, ಬಯಕೆಗಿಂತ ಕರ್ತವ್ಯ ಮತ್ತು ಸ್ವಯಂಗಿಂತ ತ್ಯಾಗಕ್ಕಾಗಿ ಆತನ ಆಯ್ಕೆಗಳು ಇದ್ದವು. ಅವನ ಪರಂಪರೆಯು ಕಾಲಾನಂತರದಲ್ಲಿ ಮಾನವೀಯತೆಯನ್ನು ವರ್ಧಿಸುತ್ತದೆ. ಜಗತ್ತಿಗೆ ಶಾಂತಿಯನ್ನು ತರಲು ಮಾನವ ಚೇತನದ ಒಳ್ಳೆಯತನದಲ್ಲಿ ನಂಬಿಕೆಯನ್ನು ತರುತ್ತದೆ" ಎಂದು ಬರೆದು ಚಿತ್ರತಂಡ ಟೀಸರ್ ಹಂಚಿಕೊಂಡಿದೆ.
ದೀಪಾವಳಿ ಸಂಭ್ರಮದಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. 2ನೇ ಭಾಗ ಸಿನಿಮಾ ನೋಡಲು ಮುಂದಿನ ವರ್ಷ ದೀಪಾವಳಿವರೆಗೆ ಕಾಯಬೇಕು. ಇನ್ನು ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿರುವುದು ಖಚಿತವಾಗಿದೆ. ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದು ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 8 ಬಾರಿ ಅಕಾಡೆಮಿ ಪ್ರಶಸ್ತಿ ಪಡೆದ DNEG ಸಂಸ್ಥೆ ಚಿತ್ರಕ್ಕೆ ವಿಎಫ್‌ಎಕ್ಸ್ ವರ್ಕ್ ಮಾಡ್ತಿದೆ.
ದುಷ್ಟ ಶಕ್ತಿಗಳ ಅಟ್ಟಹಾಸ ಹೆಚ್ಚಾದಾಗ ಶ್ರೀರಾಮನೇ ಉತ್ತರ.. 5000 ಸಾವಿರ ವರ್ಷಗಳಿಂದ ನಮ್ಮ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವ, ನಮ್ಮ ರಕ್ಷಕ, ನಮ್ಮ ಹೀರೊ, ಶ್ರೀರಾಮನ ಕಥೆಯಿದು ಎಂದು ಟೀಸರ್‌ನಲ್ಲಿ ಹೇಳಿದ್ದಾರೆ. ರಾಮನ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೆಯುವುದು, ಬಳಿಕ ತಂದೆ ಕೊಟ್ಟ ಮಾತಿಗಾಗಿ ಸೀತಾ, ಲಕ್ಷ್ಮಣ ಸಮೇತನಾಗಿ ರಾಮನಾಗಿ 14 ವರ್ಷ ವನವಾಸಕ್ಕೆ ತೆರಳುವುದು, ತಂದೆ ದಶರಥನ ಅಸ್ಥಿ ವಿಸರ್ಜನೆ, ಒಂದು ಯುದ್ಧ ಸನ್ನಿವೇಶದ ಝಲಕ್ ಸೇರಿಸಿ ಟೀಸರ್ ಕಟ್ ಮಾಡಲಾಗಿದೆ.
ಕೆಲವೆಡೆ ರಾಕ್ಷಸರನ್ನು ತೋರಿಸಿರುವುದು, ಗ್ರಾಫಿಕ್ಸ್ ಎಲ್ಲವೂ ಯಾವುದೋ ವಿಡಿಯೋ ಗೇಮ್ ನೋಡಿದಂತೆ ಭಾಸವಾಗುತ್ತದೆ. ಇದು ಬರೀ ಟೀಸರ್ ಮಾತ್ರ. ಇಡೀ ಸಿನಿಮಾ ತೆರೆಮೇಲೆ ಯಾವ ರೀತಿ ಮೂಡಿ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಇನ್ನು ಅವಕಾಶವಿದೆ. ಟೀಸರ್ ನೋಡಿದ ಕೆಲವರು 1000 ಕೋಟಿ ರೂ. ಕಲೆಕ್ಷನ್ ಗ್ಯಾರಂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಹಾಗೂ ಕುಮಾರ್ ವಿಶ್ವಾಸ್ ಸಾಹಿತ್ಯ ಚಿತ್ರಕ್ಕಿದೆ.


Click it and Unblock the Notifications











