ಮುಂಬೈನಲ್ಲಿ 'ರಾಮಾಯಣ' ಸಿನಿಮಾ ಶೂಟಿಂಗ್ ಆರಂಭ; ಫೋಟೊಗಳು ಲೀಕ್
ಬಾಲಿವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆ ಹುಟ್ಟಾಕ್ಕಿರುವ ಸಿನಿಮಾ ರಾಮಯಣ. ನಿತೇಶ್ ತಿವಾರಿ ಈ ಪೌರಾಣಿಕ ಕಥಾಹಂದರದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಈ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ರಾಮಾಯಣ ಕಾವ್ಯ ಆಧರಿಸಿ 3 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆಯಂತೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ದೊಡ್ಡಮಟ್ಟದಲ್ಲಿ ದೃಶ್ಯಕಾವ್ಯ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಗುಲ್ಲಾಗಿದೆ. ಚಿತ್ರದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಾರೆ ಎನ್ನುವುದು ಸಹಜವಾಗಿಯೇ ಸ್ಯಾಂಡಲ್‌ವುಡ್‌ನಲ್ಲೂ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಯಶ್ ಕೂಡ ಇನ್ನು ಮಾತನಾಡಿಲ್ಲ.

ಸದ್ಯ ಯಶ್ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಏಪ್ರಿಲ್ 15ರಿಂದ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಮುಂಬೈನಲ್ಲಿ ಭಾರೀ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಆರಂಭಿಸಿರುವುದಾಗಿ ವರದಿಯಾಗಿದೆ. 'ರಾಮಾಯಣ' ಚಿತ್ರದಲ್ಲಿ ಸದ್ಯ ಬೇರೆ ಕಲಾವಿದರ ದೃಶ್ಯಗಳನ್ನು ಸೆರೆಹಿಡಿಯಲಿದ್ದು ನಿಧಾನವಾಗಿ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಸದ್ಯ ಚಿಕ್ಕದಾಗಿ ಪೂಜೆ ನೆರವೇರಿಸಿ ಸಿನಿಮಾ ಚಿತ್ರೀಕರಣ ಆರಂಭಿಸಿರುವುದಾಗಿ ಹೇಳಲಾಗುತ್ತಿದೆ.
ಮುಂಬೈ ಸ್ಟುಡಿಯೋವೊಂದರಲ್ಲಿ ಗುರುಕುಲದ ಸೆಟ್ ನಿರ್ಮಿಸಿ ರಾಮಾಯಣ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ರಾಮ-ಲಕ್ಷ್ಮಣರು ಬಾಲ್ಯದಲ್ಲಿ ಓದಿ ಬೆಳೆಯುವ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಬಹಳ ಗುಟ್ಟಾಗಿ ಶೂಟಿಂಗ್ ಮಾಡುತ್ತಿದ್ದು ಯಾವುದೇ ವಿಷಯ ಬಹಿರಂಗವಾಗದಂತೆ ಚಿತ್ರತಂಡ ಎಚ್ಚರಿಕೆ ವಹಿಸಿದೆ. ಆದರೆ ಸೆಟ್ ಹೊರಭಾಗದ ಒಂದಷ್ಟು ಫೋಟೊಗಳು ಲೀಕ್ ಆಗಿದೆ.
ರಾಮನವಮಿ ಸಂಭ್ರಮದಲ್ಲಿ ಅಧಿಕೃತವಾಗಿ ರಾಮಾಯಣ ಸಿನಿಮಾ ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದಕ್ಕೂ ಮುನ್ನ ಒಂದಷ್ಟು ಚಿತ್ರೀಕರಣ ಮಾಡಿ ಪೋಸ್ಟರ್ ಅಥವಾ ಟೀಸರ್ ಬಿಡುಗಡೆ ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ನಟ ರಣ್‌ಬೀರ್ ಕಪೂರ್ ಶ್ರೀರಾಮನಾಗಿ ನಟಿಸಲು ಸಾಕಷ್ಟು ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಬಿಲ್ವಿದ್ಯೆ ಕಲಿಯುತ್ತಿದ್ದಾರೆ, ಜೊತೆಗೆ ಹಳೇ ಕಾಲದ ಭಾಷೆಯನ್ನು ಮಾತನಾಡುವ ಶೈಲಿಯನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ತಮ್ಮ ಪಾತ್ರಕ್ಕಾಗಿ ರಣ್‌ಬೀರ್ ಥ್ರಿಡಿ ಸ್ಕ್ಯಾನ್‌ಗಳು ಒಳಪಡುತ್ತಿದ್ದಾರೆ.
ಏಪ್ರಿಲ್ 15ರ ವೇಳೆಗೆ ರಣ್‌ಬೀರ್ ಕಪೂರ್ ಕೂಡ ರಾಮಾಯಣ ಚಿತ್ರೀಕರಣದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ. ಇನ್ನು ದಶರಥನಾಗಿ ಅರುಣ್ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿದೆ.
ಬರೋಬ್ಬರಿ 11 ಕೋಟಿ ರೂ. ವೆಚ್ಚದ ಅಯೋಧ್ಯೆ ಸೆಟ್ ನಿರ್ಮಾಣ ಶುರುವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ಕಾಡು, ಮಿಥಿಲೆಯ ಸೆಟ್ ನಿರ್ಮಾಣಕ್ಕೂ ಚಿತ್ರತಂಡ ಮುಂದಾಗಿದೆಯಂತೆ. ಚಿತ್ರವನ್ನು 3 ಭಾಗಗಳಾಗಿ ತೆರೆಗೆ ತರುತ್ತಿದ್ದು ಮೊದಲ ಭಾಗದಲ್ಲಿ ರಾಮ, ಸೀತೆ ಬಾಲ್ಯದಿಂದ ಆರಂಭಿಸಿ ಅವರ ಮದುವೆಯವರೆಗೂ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ಮೊದಲ ಭಾಗದಲ್ಲಿ ರಾವಣನ ಬಗ್ಗೆ ಹೆಚ್ಚು ತೋರಿಸುವುದಿಲ್ಲ. ಕೇವಲ ಗೆಸ್ಟ್ ಅಪಿಯರೆನ್ಸ್ ರೀತಿ ಸೀತಾಪಹರಣ ಘಟ್ಟವನ್ನು ಮಾತ್ರ ತೋರಿಸುತ್ತಾರೆ. ಹಾಗಾಗಿ ಸದ್ಯಕ್ಕೆ ರಾವಣನಾಗಿ ಸದ್ಯಕ್ಕೆ ಯಶ್ ಚಿತ್ರೀಕರಣದಲ್ಲಿ ಭಾಗಿ ಆಗುವುದಿಲ್ಲ ಎನ್ನುವ ವಾದವೂ ಇದೆ. ರಾಮನವಮಿ ದಿನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ದೃಶ್ಯಕಾವ್ಯ ತೆರೆಗೆ ತರಲಾಗುತ್ತಿದೆ.

ಈಗಾಗಲೇ ಕಾವ್ಯಗಳಾಗಿ ನಾಟಕವಾಗಿ ಸಿನಿಮಾಗಳಾಗಿ ಧಾರಾವಾಹಿಗಳಾಗಿ ಆನಿಮೇಷನ್ ಸಿನಿಮಾಗಳಾಗಿ ರಾಮಾಯಣ ಕಾವ್ಯವನ್ನು ನೋಡಿದ್ದೇವೆ. ಕಳೆದ ವರ್ಷ ಕೂಡ 'ಆದಿಪುರುಷ್' ಸಿನಿಮಾ ಬಂದಿತ್ತು. ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ನಿತೇಶ್ ತಿವಾರಿ ಸಾರಥ್ಯದಲ್ಲಿ 'ರಾಮಾಯಣ' ಸಿನಿಮಾ ಕುತೂಹಲ ಮೂಡಿಸಿದೆ.


Click it and Unblock the Notifications











