ಯಶ್ ನಟನೆಯ 'ರಾಮಾಯಣ' ಚಿತ್ರಕ್ಕೆ ಕಾಯುತ್ತಿರುವವರಿಗೆ ನಿರಾಸೆ ಕಾದಿದ್ಯಾ?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. 2 ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 4000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.
ವಾಲ್ಮೀಕಿ ರಾಮಾಯಣ ಕಾವ್ಯ ಆಧರಿಸಿ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ತೆರೆಗೆ ಬರಲಿದೆ. 2027ರ ಬೆಳಕಿನ ಹಬ್ಬಕ್ಕೆ 2ನೇ ಭಾಗ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಜೋರಾಗಿ ನಡೀತಿದೆ.

ರಾವಣನಾಗಿ ನಟಿಸುವುದು ಮಾತ್ರವಲ್ಲ ನಟ ಯಶ್ ಚಿತ್ರದ ನಿರ್ಮಾಣಕ್ಕೆ ಕೂಡ ಕೈಜೋಡಿಸಿದ್ದಾರೆ. 'ಟಾಕ್ಸಿಕ್' ಸಿನಿಮಾ ಜೊತೆ ಜೊತೆಗೆ ರಾಮಾಯಣ ಚಿತ್ರದಲ್ಲಿ ಯಶ್ ನಟಿಸಿದ್ದಾರೆ. ಮೊದಲ ಭಾಗದಲ್ಲಿ ರಾವಣನಾಗಿ ಸ್ವಲ್ಪ ಸಮಯ ಮಾತ್ರ ಯಶ್ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. 2ನೇ ಭಾಗದಲ್ಲಿ ಹೆಚ್ಚು ಹೊತ್ತು ರಾವಣನಾಗಿ ಅಬ್ಬರಿಸಲಿದ್ದಾರೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಗೈ ನಾರ್ರಿಸ್ ನಿರ್ದೇಶನದಲ್ಲಿ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಹಾಗೂ ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
'ರಾಮಾಯಣ' ಚಿತ್ರದ ಎರಡೂ ಭಾಗಗಳನ್ನು ಒಟ್ಟಿಗೆ ಚಿತ್ರೀಕರಿಸಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿತ್ತು. ಆದರೆ ಕಾರಣಾಂತರಗಳಿಂದ 2ನೇ ಭಾಗದ ಚಿತ್ರೀಕರಣ ತಡವಾಗಲಿದ್ದು 2027ರ ದೀಪಾವಳಿಗೆ ಸಿನಿಮಾ ರಿಲೀಸ್ ಅನುಮಾನ ಎನ್ನಲಾಗ್ತಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ & ವಾರ್' ಚಿತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕಾಗಿ ಕಾಲ್‌ಶೀಟ್ ಕೊಡಲು ಮುಂದಾಗಿದ್ದು 'ರಾಮಾಯಣ- 2' ಸಿನಿಮಾ ಚಿತ್ರೀಕರಣ ತಡವಾಗಬಹುದು ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಹಳ ಅದ್ಧೂರಿ ಸಿನಿಮಾ 'ರಾಮಾಯಣ'. ಹಾಲಿವುಡ್ ಸಿನಿಮಾಗಳಿಗೆ ಪೈಪೋಟಿ ಎನ್ನುವಂತೆ ಈ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಸಾಕಷ್ಟು ಗ್ರಾಫಿಕ್ಸ್ ವರ್ಕ್ ಇರಲಿದೆ. ಅದೇ ಕಾರಣಕ್ಕೆ ಪೋಸ್ಟ್ ಪ್ರೊಡಕ್ಷನ್ ಹೆಚ್ಚು ಸಮಯ ಬೇಡುತ್ತದೆ. ಹಾಗಾಗಿ ಬೇಗ ಚಿತ್ರೀಕರಣ ಮುಗಿಸಿದರೆ ಮಾತ್ರ ಅಂದುಕೊಂಡ ಸಮಯದಲ್ಲಿ ಸಿನಿಮಾ ಬಿಡುಗಡೆ ಸಾಧ್ಯ. Deccan Chronicle ವರದಿ ಪ್ರಕಾರ 'ರಾಮಾಯಣ' ಚಿತ್ರದ 2 ಭಾಗಗಳನ್ನು ಪೂರ್ಣಗೊಳಿಸಿ ನಂತರ ಬನ್ಸಾಲಿ ನಿರ್ದೇಶನದ 'ಲವ್ & ವಾರ್' ಚಿತ್ರದಲ್ಲಿ ನಟಿಸಲು ಮನಸ್ಸು ಮಾಡಿದ್ದರು. ಆದರೆ ರಾಮಾಯಣ ಚಿತ್ರೀಕರಣವು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ, ರಣಬೀರ್ ಈಗ ತಮ್ಮ ಡೇಟ್ಸ್ ಬನ್ಸಾಲಿ ಚಿತ್ರಕ್ಕೆ ನೀಡಲು ನಿರ್ಧರಿಸಿದ್ದಾರೆ.
ಈಗಾಗಲೇ 'ರಾಮಾಯಣ' ಚಿತ್ರದ ಗ್ಲಿಂಪ್ಸ್ ಬಂದು ಗಮನ ಸೆಳೆದಿದೆ. ಶ್ರೀರಾಮನಾಗಿ ರಣ್‌ಬೀರ್ ಸಣ್ಣ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ದೇಶ ವಿದೇಶಗಳ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕಾಗಿ ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದಹಾಗೆ ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ.
ವರ್ಷದ ಅಂತರದಲ್ಲಿ 'ರಾಮಾಯಣ' ಸರಣಿ ಸಿನಿಮಾಗಳನ್ನು ನೋಡಲು ಬಯಸುತ್ತಿದ್ದವರಿಗೆ ಪಾರ್ಟ್-2 ರಿಲೀಸ್ ತಡವಾಗುತ್ತೆ ಎನ್ನುವ ಸುದ್ದಿ ಬೇಸರ ತಂದಿದೆ. ಈ ಸುದ್ದಿ ನಿಜವಾಗುತ್ತಾ ಅಥವಾ ರಣ್‌ಬೀರ್ ಕಪೂರ್ ತಮ್ಮ ನಿರ್ಧಾರ ಬದಲಿಸುತ್ತಾ ಕಾದು ನೋಡಬೇಕಿದೆ. ಮಾರ್ಚ್ 19ಕ್ಕೆ ಯಶ್ ನಿರ್ಮಿಸಿ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











