ಅರೇ, 'ರಾಮಾಯಣ'ದಲ್ಲಿ ಈ ಯುದ್ಧ ಯಾವಾಗ ನಡೀತು? ಏನಿದು ಹೊಸ ಕಥೆ?
ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಚಿತ್ರದ ಫಸ್ಟ್ ಟೀಸರ್ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನ ಚಿತ್ರದಲ್ಲಿ ಶ್ರೀರಾಮನ ಪಾತ್ರ ಪರಿಚಯ ಮಾಡಿಸುವ ಸಣ್ಣ ಝಲಕ್ ಇದು. 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಆದರೆ ಟೀಸರ್ ನೋಡಿದವರು ಬೇಸರಗೊಂಡಿದ್ದಾರೆ.
ಭಾರೀ ನಿರೀಕ್ಷೆ ಹುಟ್ಟಾಕಿರುವ ಸಿನಿಮಾ ಟೀಸರ್ ಮೊದಲ ನೋಟದಲ್ಲೇ ನಿರಾಸೆ ಮೂಡಿಸಿದೆ. ಭಾರೀ ಟೀಕೆಗೆ ಗುರಿಯಾಗಿದೆ. ಎಐ ಬಳಸಿ ದೃಶ್ಯಗಳನ್ನು ಕಟ್ಟಿಕೊಡಲಾಗಿದ್ಯಾ? ಸಾವಿರಾರು ಕೋಟಿ ರೂ. ಬಜೆಟ್ ಚಿತ್ರದ ಗ್ರಾಫಿಕ್ಸ್ ಈ ರೀತಿ ಇರುತ್ತಾ? ಇದು 'ಆದಿಪುರುಷ್' ಪಾರ್ಟ್-2 ಚಿತ್ರನಾ? ಅಂತೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಇಷ್ಟವಾಗುತ್ತಿಲ್ಲ ಎನ್ನುವವರು ಇದ್ದಾರೆ. ಇನ್ನು ಟೀಸರ್‌ನಲ್ಲಿರುವ ಯುದ್ಧ ಸನ್ನಿವೇಶದ ಬಗ್ಗೆ ಚರ್ಚೆ ಜೋರಾಗಿದೆ. 'ರಾಮಾಯಣ'ದಲ್ಲಿ ಈ ಯುದ್ಧ ಯಾವಾಗ ಬರುತ್ತದೆ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ತಂದೆ ದಶರಥ, ಸಹೋದರರಾದ ಭರತ, ಲಕ್ಷ್ಮಣ, ಶತ್ರುಘ್ಞನರ ಜೊತೆ ಸೇರಿ ಶ್ರೀರಾಮ ಯುದ್ಧಭೂಮಿಯಲ್ಲಿ ಕಾಣಿಸಿಕೊಂಡಿರುವ ಸನ್ನಿವೇಶದ ಝಲಕ್ ಟೀಸರ್‌ನಲ್ಲಿದೆ. ಪರಶು(ಕೊಡಲಿ) ಮಾದರಿಯ ದೊಡ್ಡ ಆಯುಧದ ದಾಳಿಯನ್ನು ಶ್ರೀರಾಮ ತಡೆಯುವುದನ್ನು ನೋಡಬಹುದು. ಅರೇ, ಶ್ರೀರಾಮ ಈ ರೀತಿ ಯಾವ ಯುದ್ಧದಲ್ಲಿ ಭಾಗವಹಿಸಿದ್ದ? ಎಂದು ಕೆಲವರು ಪ್ರಶ್ನೆ ಎತ್ತಿದ್ದಾರೆ. ಈ ಹಿಂದೆ 'ರಾಮಾಯಣ' ಆಧರಿಸಿ ಸಾಕಷ್ಟು ಸಿನಿಮಾ, ನಾಟಕ, ಧಾರಾವಾಹಿಗಳು ಬಂದಿವೆ. ಅದರಲ್ಲಿ ಇಂತಹ ಯುದ್ಧದ ಸನ್ನಿವೇಶ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಕೆಲವರು ಉತ್ತರವನ್ನು ಕೊಟ್ಟಿದ್ದಾರೆ.
ಬಹುಶಃ ಇದು ಶ್ರೀರಾಮ ಹಾಗೂ ಪರಶುರಾಮನ ನಡುವಿನ ಯುದ್ಧದ ಸನ್ನಿವೇಶ ಇರಬಹುದು. ವಾಲ್ಮೀಕಿ ರಾಮಾಯಣದ ಪ್ರಕಾರ ಮಿಥಿಲೆಯಲ್ಲಿ ಸೀತೆಯನ್ನು ರಾಮ ವಿವಾಹವಾದ ಬಳಿಕ ಅಯೋಧ್ಯೆಗೆ ಮರಳುವಾಗ ಪರಶುರಾಮ ಎದುರಾಗುತ್ತಾನೆ. ಆಗ ನಡೆಯುವ ಯುದ್ಧದ ಸನ್ನಿವೇಶ ಆಗಿರಬಹುದು. 'ರಾಮಾಯಣ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗ್ತಿದೆ. ಹಾಗಾಗಿ ಇಂತಹ ಸಾಕಷ್ಟು ಬೇರೆ ಬೇರೆ ಸನ್ನಿವೇಶಗಳನ್ನು ಸೇರಿಸಿರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ರಾಮಾಯಣ ಕಥೆ ಹೇಳುವಾಗ ಇಂತಹ ಸಾಕಷ್ಟು ಸನ್ನಿವೇಶಗಳನ್ನು ಬಿಟ್ಟು ಮುಖ್ಯವಾದ ಕಥೆಯನ್ನು ಹೇಳುತ್ತಾರೆ. ಆದರೆ ನಿತೇಶ್ ತಿವಾರಿ ಈ ಸರಣಿ ಚಿತ್ರಗಳಲ್ಲಿ ಇಂತಹ ಮತ್ತಷ್ಟು ಸನ್ನಿವೇಶಗಳನ್ನು ಸೇರಿಸಿರುವ ಸಾಧ್ಯತೆಯಿದೆ.
ಇದೇ ಚಿತ್ರದಲ್ಲಿ ರಾವಣ ಹಾಗೂ ಶೂರ್ಪನಖಿಯ ಪತಿ ವಿದ್ಯುತ್ಜಿಹ್ವನ ನಡುವಿನ ಯುದ್ಧದ ಸನ್ನಿವೇಶವನ್ನು ತೋರಿಸಿದ್ದಾರೆ ಎನ್ನಲಾಗ್ತಿದೆ. ರಾವಣನಾಗಿ ಯಶ್ ನಟಿಸಿರುವುದು ಗೊತ್ತೇಯಿದೆ. ವಿದ್ಯುತ್ಜಿಹ್ವ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ರಾವಣನ ಪಾತ್ರ ಪರಿಚಯಿಸಲು ಈ ಯುದ್ಧ ದೃಶ್ಯವನ್ನು ಬಳಸಿಕೊಳ್ಳಲಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಂದಹಾಗೆ 'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ಸೀತಾಪಹರಣದವರೆಗಿನ ಕಥೆಯನ್ನು ಮಾತ್ರ ಹೇಳಲಾಗುತ್ತಿದೆ. ವನವಾಸಕ್ಕೆ ಹೋಗುವ ಮುನ್ನ ಶ್ರೀರಾಮ ಯುದ್ಧಗಳಲ್ಲಿ ಭಾಗಿ ಆಗಿದ್ದು ಕಮ್ಮಿ. ಹಾಗಾಗಿ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ಪ್ರೇಕ್ಷಕರನ್ನು ರಂಜಿಸಲು ಇಂತಹ ರೋಚಕ ಸನ್ನಿವೇಶಗಳನ್ನು ಬಳಸಿಕೊಳ್ಳಲಾಗ್ತಿದೆ.
ಇನ್ನು ಟೀಸರ್‌ನಲ್ಲಿ ಈ ಸನ್ನಿವೇಶದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಪರಶುರಾಮನ ಎದುರು ರಾಮ ಯುದ್ಧಕ್ಕೆ ನಿಂತಿರುವಾಗ ಹಿಂದಿ ನಿಂತಿರುವ ಸೈನಿಕರು ಬೇರೆ ದಿಕ್ಕಿಗೆ ತಿರುಗಿ ನಿಂತಿರುವುದು ಯಾಕೆ? ಇಂತಹ ಲಾಜಿಕ್ ಇಲ್ಲದ ಸನ್ನಿವೇಶಗಳು ಚಿತ್ರದಲ್ಲಿ ಇನ್ನೆಷ್ಟು ಇದ್ಯೋ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ 'ರಾಮಾಯಣ' ಟೀಸರ್ ಬಗ್ಗೆ ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











