ರಾಮಾಯಣ ಚಿತ್ರವನ್ನ ಯಶ್ ನಿರ್ಮಾಣ ಮಾಡಬಾರದು ಎಂದ ಕಿರುತೆರೆಯ ಸೀತೆ..!
ದೀಪಿಕಾ ಚಿಕ್ಲಿಯಾ ಎಂಬ ಹೆಸರು ಕೇಳಿದರೆ ಸಾಮಾನ್ಯವಾಗಿ ಯಾರಿಗೂ ಗೊತ್ತಾಗಲ್ಲ. ಯಾರು ಎಂದು ಥಟ್ಟನೆ ಹೊಳೆಯಲ್ಲ. ಆದರೆ ಅದೇ ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ ಧಾರಾವಾಹಿಯ ಸೀತಾ ಮಾತೆ ಎಂದರೆ ಸಾಕು ಎಲ್ಲರ ಕಣ್ಮುಂದೆ ದೀಪಿಕಾ ಅವರ ಭಾವ ಚಿತ್ರ ಬಂದು ಹೋಗುತ್ತೆ. ಅನೇಕರಲ್ಲಿ ಭಕ್ತಿಯ ಭಾವ ಮೂಡುತ್ತೆ.
ಅಷ್ಟರ ಮಟ್ಟಿಗೆ ಜನಮಾನಸದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವವರು ದೀಪಿಕಾ ಚಿಕ್ಲಿಯಾ. ಇಂಥ ದೀಪಿಕಾ ಚಿಕ್ಲಿಯಾ ಈಗ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದಲ್ಲಿ ಮೂಡಿ ಬರಲಿರುವ ರಾಮಾಯಣ ಚಿತ್ರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಯಶ್ ಮಾತ್ರ ಅಲ್ಲ ರಾಮಾಯಣವನ್ನ ಚಿತ್ರರೂಪಕವನ್ನಾಗಿಸುವ ಪ್ರಯತ್ನವನ್ನ ಯಾರು ಮಾಡ್ಲೇಬಾರದು ಎಂದಿದ್ದಾರೆ.

ಹೌದು.. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದೀಪಿಕಾ ಚಿಕ್ಲಿಯಾ, ರಾಮಾಯಣದ ವಿಚಾರದಲ್ಲಿ ಚಿತ್ರರಂಗ ಖುದ್ದು ಗೊಂದಲಕ್ಕೀಡಾಗುತ್ತೆ. ಪ್ರೇಕ್ಷಕರನ್ನ ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತೆ ಅಂದಿದ್ದಾರೆ.
ರಾಮಾಯಣದ ಕಥೆಯನ್ನ ನಾವೆಲ್ಲ ಕೇಳಿದ್ದೇವೆ. ಈ ಹಿಂದೆ ನೋಡಿದ್ದೇವೆ. ಇನ್ನೂ ಇದು ಬದಲಾದ ಕಾಲ. ಈ ಕಾಲದಲ್ಲಿ ಅವತ್ತು ಸರಳವಾಗಿ ರಾಮಾಯಣದ ಕಥೆ ಹೇಳಿದಂತೆ ಹೇಳುವುದು ಅಸಾಧ್ಯ ಯಾಕೆಂದರೆ ಭಾರತದ ಮಹಾಕಾವ್ಯ ರಾಮಾಯಣಕ್ಕೆ ಏನಾದರೊಂದು ಹೊಸತನದ ಸ್ಪರ್ಶ ನೀಡಲು ನಮ್ಮಲ್ಲಿನ ನಿರ್ದೇಶಕರು ನಿರ್ಮಾಪಕರು ಮುಂದಾಗುತ್ತಾರೆ, ಈ ಪ್ರಯತ್ನದಲ್ಲಿ ಎಡವುತ್ತಾರೆ ಎಂದಿರುವ ದೀಪಿಕಾ, ನಾನು ರಾಮಾಯಣದ ಕಥೆಯನ್ನ ಬೆಳ್ಳಿಪರದೆ ಮೇಲೆ ನೋಡಿ ಅನೇಕ ಬಾರಿ ಭ್ರಮನಿರಸನಗೊಂಡಿದ್ದೇನೆ ಎಂದು ಕೂಡ ಹೇಳಿದ್ದಾರೆ

ಇದೇ ಸಮಯದಲ್ಲಿ ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದಲ್ಲಿ ಬಂದು, ವ್ಯಾಪಕವಾಗಿ ಟೀಕೆಗೊಳಗಾದ ಓಂ ರೌತ್ ನಿರ್ದೇಶನದ ಆದಿಪುರುಷ್ ಚಿತ್ರವನ್ನು ಉದಾಹರಣೆಯನ್ನಾಗಿ ನೀಡಿರುವ ದೀಪಿಕಾ ಚಿಕ್ಲಿಯಾ, ಹೊಸತನದ ಬೆನ್ನತ್ತಿ ಆದಿಪುರುಷ್ ಚಿತ್ರದಲ್ಲಿ ಮಾಡಬಾರದ್ದನ್ನೆಲ್ಲ ಮಾಡಿದರು ಎಂದಿದ್ದಾರೆ. ಚಿತ್ರದಲ್ಲಿ ಸೀತೆ ಪಾತ್ರ ನಿರ್ವಹಿಸಿದ್ದ ಕೃತಿ ಸನೋನ್ ಗೆ ಪಿಂಕ್ ಸೀರೆಯನ್ನ ಉಡಿಸಿದ ನಿರ್ದೇಶಕರು ರಾವಣನ ವೇಷ ಭೂಷಣವನ್ನೇ ಬದಲಿಸಿದರು ಎಂದಿದ್ದಾರೆ.ಹೀಗೆ ಮಾಡುವುದರಿಂದ ರಾಮಾಯಣ ಅಂತಹ ಮಹಾಕಾವ್ಯಕ್ಕೆ ಚ್ಯುತಿ ತದಂತೆ ಆಗುತ್ತೆ ಎಂದು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ ಕಿರುತೆರೆಯ ಸೀತೆ ಪಾತ್ರಧಾರಿ ದೀಪಿಕಾ ಚಿಕ್ಲಿಯಾ.
ಇನ್ನೂ ಎಲ್ಲರಿಗೂ ರಾಮಾಯಣದ ಮೇಲ್ಯಾಕೇ ಕಣ್ಣು ಎಂದು ಪ್ರಶ್ನೆಯನ್ನ ಮಾಡಿರುವ ದೀಪಿಕಾ ಚಿಕ್ಲಿಯಾ ನಮ್ಮ ನೆಲದಲ್ಲಿ ದೇಶಕ್ಕಾಗಿ ಹುತಾತ್ಮರಾದ ಅನೇಕ ವೀರ ಯೋಧರ ಕಥೆಗಳಿವೆ, ಆ ಕಥೆಗಳನ್ನ ಬೆಳ್ಳಿತೆರೆಯ ಮೇಲೆ ತರುವ ಪ್ರಯತ್ನ ಮಾಡಿ ಎಂಬ ಸಲಹೆಯನ್ನು ಕೂಡ ದೀಪಿಕಾ ನೀಡಿದ್ದಾರೆ. ರಾಮಾಯಣದ ಬದಲು ನಿಮ್ಮ ಗಮನವನ್ನ ಬೇರೆ ಬೇರೆ ಕಥೆಗಳತ್ತ ಕೊಡಿ ಆಗ ಹೊಸತನದ ಕಥೆಯನ್ನ ಹೇಳಿದಂತೆಯೂ ಆಗುತ್ತೆ, ನಿಮ್ಮ ಮೇಲಿನ ಒತ್ತಡ ಕೂಡ ಕಡಿಮೆಯಾಗುತ್ತೆ ಎಂಬ ಅಭಿಪ್ರಾಯವನ್ನು ಕೂಡ ದೀಪಿಕಾ ಚಿಕ್ಲಿಯಾ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ರಮಾನಂದ್ ಸಾಗರ ನಿರ್ದೇಶನದ ರಾಮಾಯಣದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಅವರ ಈ ಮಾತು ಬಾಲಿವುಡ್‌ನಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.


Click it and Unblock the Notifications











