ಅಕ್ಷಯ್ ಖನ್ನಾಗೆ ಫುಲ್ ಡಿಮ್ಯಾಂಡ್ ; ರೇಸ್ 4ನಲ್ಲಿ ಧುರಂಧರ್‌ನ ರೆಹಮಾನ್ ಡಕಾಯತ್ ?
ಬಾಲಿವುಡ್ ಅಂಗಳದಲ್ಲಿ ಈಗ 'ರೇಸ್' ಸರಣಿಯದ್ದೇ ಸದ್ದು. ಸಸ್ಪೆನ್ಸ್, ಆಕ್ಷನ್ ಮತ್ತು ಟ್ವಿಸ್ಟ್ಗಳಿಗೆ ಹೆಸರಾದ ಈ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್. ಈಗಾಗಲೇ ಮೂರು ಭಾಗಗಳು ಯಶಸ್ವಿಯಾಗಿ ತೆರೆಕಂಡಿವೆ. ಈಗ ನಾಲ್ಕನೇ ಭಾಗದ ತಯಾರಿಗೆ ವೇದಿಕೆ ಸಿದ್ಧವಾಗಿದೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಿದೆ. ತಾರಾಗಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ..
ದೊಡ್ಡ ಚರ್ಚೆಯೇ ನಡೆಯುತ್ತಿದೆ. ಯಾರಿರಬಹುದು ಈ ಸಲದ ರೇಸ್ನಲ್ಲಿ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಚಿತ್ರತಂಡ ಕೂಡ ಅಷ್ಟೇ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಈ ಹಿಂದಿನ ಭಾಗಗಳಲ್ಲಿ ಬಂದ ಕಲಾವಿದರು ಮತ್ತೆ ಕಾಣಿಸಿಕೊಳ್ಳುತ್ತಾರಾ? ಅಥವಾ ಹೊಸ ಮುಖಗಳು ಈ ಸರಣಿಗೆ ಸೇರ್ಪಡೆ ಆಗ್ತಾರಾ? ಈ ಪ್ರಶ್ನೆಗೆ ಉತ್ತರ ಹುಡುಕಲು ಅಭಿಮಾನಿಗಳು ಕಾತರರಾಗಿದ್ದಾರೆ. ಅದರಲ್ಲೂ ಮೊದಲ ಭಾಗದ ಆ ಮ್ಯಾಜಿಕ್ ಮತ್ತೆ ಮರುಕಳಿಸುತ್ತಾ ಎನ್ನುವ ಆಸೆ ಸಿನಿಪ್ರೇಮಿಗಳದ್ದು.

ಕುತೂಹಲದ ಕೇಂದ್ರಬಿಂದು ಅಕ್ಷಯ್ ಖನ್ನಾ
''ರೇಸ್'' ಸಿನಿಮಾ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ಅಕ್ಷಯ್ ಖನ್ನಾ ಮಾಡಿದ್ದ ಆ ನೆಗೆಟಿವ್ ರೋಲ್. ಅವರ ಅಭಿನಯ ಮತ್ತು ಆ ಪಾತ್ರದ ಖದರ್ ಇಂದಿಗೂ ಯಾರೂ ಮರೆತಿಲ್ಲ. ಅಕ್ಷಯ್ ಖನ್ನಾ ಅವರ ಸ್ಟೈಲ್ ಈ ಸರಣಿಗೆ ಒಂದು ತೂಕ ತಂದುಕೊಟ್ಟಿತ್ತು. ಹೀಗಾಗಿ ''ರೇಸ್ 4''ನಲ್ಲಿ ಅವರು ಇರಲೇಬೇಕು ಎಂಬುದು ಫ್ಯಾನ್ಸ್ ಬೇಡಿಕೆ.
ಇತ್ತೀಚೆಗೆ ಸೈಫ್ ಅಲಿ ಖಾನ್ ಈ ಸರಣಿಗೆ ಮರಳಿದ್ದಾರೆ ಎಂಬ ಸುದ್ದಿ ಬಂದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸೈಫ್ ಮತ್ತು ಅಕ್ಷಯ್ ಕಾಂಬಿನೇಷನ್ ಮತ್ತೆ ನೋಡಲು ಸಾಧ್ಯವೇ ಎಂದು ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಅಕ್ಷಯ್ ಖನ್ನಾ ಅವರ ವಾಪಸಾತಿ ಬಗ್ಗೆ ದೊಡ್ಡ ಮಟ್ಟದ ಗಾಸಿಪ್ಗಳು ಹುಟ್ಟಿಕೊಂಡಿವೆ.
ನಿರ್ಮಾಪಕ ರಮೇಶ್ ತೌರಾನಿ ಹೇಳಿದ್ದೇನು?
ಎಲ್ಲಾ ಗಾಸಿಪ್‌ಗಳಿಗೆ ಫುಲ್ ಸ್ಟಾಪ್ ಇಡಲು ಸ್ವತಃ ನಿರ್ಮಾಪಕ ರಮೇಶ್ ತೌರಾನಿ ಮುಂದೆ ಬಂದಿದ್ದಾರೆ. ಅಕ್ಷಯ್ ಖನ್ನಾ ಅವರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
"ಅಕ್ಷಯ್ ಖನ್ನಾ ಅವರು ಅದ್ಭುತ ನಟ. ''ರೇಸ್'' ಮೊದಲ ಭಾಗದಲ್ಲಿ ಅವರ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಆದರೆ ನಾಲ್ಕನೇ ಭಾಗದಲ್ಲಿ ಅವರು ಇರುತ್ತಾರೋ ಇಲ್ಲವೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ ತೌರಾನಿ. ಇದರ ಅರ್ಥ ಅವರು ಇನ್ನೂ ಅಕ್ಷಯ್ ಖನ್ನಾ ಅವರನ್ನು ಅಧಿಕೃತವಾಗಿ ಸಂಪರ್ಕಿಸಿಲ್ಲ ಎಂದೇ ಕಾಣುತ್ತಿದೆ.

ಚಿತ್ರಕಥೆಗೆ ತಕ್ಕಂತೆ ಕಲಾವಿದರ ಆಯ್ಕೆ
ನಿರ್ಮಾಪಕರ ಪ್ರಕಾರ ಸಿನಿಮಾದ ಕಥೆ ಪೂರ್ಣಗೊಂಡ ನಂತರವಷ್ಟೇ ತಾರಾಗಣ ಅಂತಿಮವಾಗಲಿದೆ. "ನಾವು ಕಥೆಗೆ ಯಾರು ಸೂಕ್ತವಾಗುತ್ತಾರೋ ಅವರನ್ನು ಆಯ್ಕೆ ಮಾಡುತ್ತೇವೆ. ಅಕ್ಷಯ್ ಖನ್ನಾ ಅವರಿಗೆ ಸೂಕ್ತವಾದ ಜಾಗವಿದ್ದರೆ ಖಂಡಿತಾ ಯೋಚಿಸುತ್ತೇವೆ" ಎಂದು ಅವರು ಮಾತು ಮುಗಿಸಿದ್ದಾರೆ.
ಸದ್ಯಕ್ಕೆ ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ಇರುವುದು ಪಕ್ಕಾ ಆಗಿದೆ. ಉಳಿದಂತೆ ಯಾರು ಇರಲಿದ್ದಾರೆ ಎಂಬುದು ಸದ್ಯದಲ್ಲೇ ರಿವೀಲ್ ಆಗಲಿದೆ. ಅಲ್ಲಿಯವರೆಗೆ ಅಕ್ಷಯ್ ಖನ್ನಾ ಅಭಿಮಾನಿಗಳು ಸ್ವಲ್ಪ ಕಾಯಲೇಬೇಕು. ''ರೇಸ್ 4'' ಪಕ್ಕಾ ಮಾಸ್ ಎಂಟರ್ಟೈನರ್ ಆಗಿರೋದಂತೂ ಗ್ಯಾರಂಟಿ.


Click it and Unblock the Notifications











