Animal Teaser: 'ನನ್ನಂತ ಕೆಟ್ಟವನು ಇಲ್ಲ': ಗ್ಯಾಂಗ್‌ಸ್ಟರ್ ಆಗಿ ರಣ್‌ಬೀರ್ ಕಪೂರ್ ಆರ್ಭಟ
'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಅನಿಮಲ್'. ಬಹುಕೋಟಿ ವೆಚ್ಚದಲ್ಲಿ ಈ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ನಿರ್ಮಾಣವಾಗ್ತಿದೆ. ರಣ್‌ಬೀರ್ ಕಪೂರ್ ಚಿತ್ರದಲ್ಲಿ ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಸಾಥ್ ಸಿಕ್ಕಿದೆ.
ಟೀ ಸೀರಿಸ್ ಫಿಲ್ಮ್ಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ 1 ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಡಿಸೆಂಬರ್ 1ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ರಶ್ಮಿಕಾ ಮಂದಣ್ಣ ನಟನೆಯ 3ನೇ ಬಾಲಿವುಡ್ ಸಿನಿಮಾ ಇದು. ಇದಕ್ಕೂ ಮುನ್ನ 'ಗುಡ್‌ಬೈ' ಹಾಗೂ 'ಮಿಷನ್ ಮಜ್ನು' ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದರು. ಆದರೆ 2 ಸಿನಿಮಾ ಸದ್ದು ಮಾಡಲಿಲ್ಲ.

'ಅನಿಮಲ್' ತಂದೆ ಮಗನ ವಿಭಿನ್ನ ಬಾಂಧವ್ಯದ ಕತೆಯಿದೆ. ಅನಿಲ್ ಕಪೂರ್ ಚಿತ್ರದಲ್ಲಿ ರಣ್‌ಬೀರ್ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕೋಟ್ಯಾಧಿಪತಿ ಬಲ್‌ಬೀರ್ ಸಿಂಗ್ ಮಗ ಕ್ರಿಮಿನಲ್ ಆಗುತ್ತಾನೆ. ಮಗನನ್ನು ಬೆಳೆಸಿದ ರೀತಿ ಸರಿಯಾಗಲಿಲ್ಲ ಎಂದು ತಂದೆ ಅಂದುಕೊಳ್ಳುತ್ತಾನೆ. ಆದರೆ ಮಗ ಮಾತ್ರ ತಂದೆಯನ್ನು ಬಿಟ್ಟುಕೊಡಲ್ಲ. ನೀವು ನನ್ನನ್ನು ಸರಿಯಾಗಿಯೇ ಬೆಳೆಸಿದ್ದೀರಾ ಎನ್ನುತ್ತಾನೆ. ಹಾಗಾದ್ರೆ ಆ ಕ್ರಿಮಿನಲ್ ಮುಂದೆ ಗ್ಯಾಂಗ್‌ಸ್ಟರ್ ಆಗಿ ಏನೆಲ್ಲಾ ಮಾಡ್ತಾನೆ? ಅನ್ನೋದು ಸಿನಿಮಾ ಕತೆ.
ಚಿತ್ರದಲ್ಲಿ ರಣ್‌ಬೀರ್ ಸಿಂಗ್ ಮಡದಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 'ಅನಿಮಲ್' ಟೀಸರ್‌ನ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿರೋ ಕೊಡಗಿನ ಚೆಲುವೆ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ. ರಣ್‌ಬೀರ್ ಕಪೂರ್ ರಗಡ್ ಕಿಲ್ಲಿಂಗ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಗೆಲ್ಲೋದು ಗ್ಯಾರೆಂಟಿ ಎನ್ನುತ್ತಿದ್ದಾರೆ. ಈ ಹಿಂದೆ ಬಂದಿದ್ದ ಪ್ರೀ ಟೀಸರ್ ನಿರಾಸೆ ಮೂಡಿಸಿತ್ತು. ಭಾರೀ ಟ್ರೋಲ್‌ಗೆ ಗುರಿಯಾಗಿತ್ತು. ಆದರೆ ಹೊಸ ಟೀಸರ್ ಸಿನಿಮಾ ಬಗ್ಗೆ ನಿರೀಕ್ಷೆ ಮೂಡುವಂತೆ ಮಾಡಿದೆ.

ರಣ್‌ಬೀರ್ ಎದುರು ಬಾಡಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ್ದಾರೆ. ತ್ರಿಪ್ತಿ ದಿಮ್ರಿ, ಶಕ್ತಿ ಕಪೂರ್, ಸುರೇಶ್ ಒಬಿರಾಯ್, ಬಬ್ಲು ಪೃಥ್ವಿರಾಜ್, ಸೌರಬ್ ಸಚ್‌ದೇವ್ ಸೇರಿದಂತೆ ದೊಡ್ಡ ತಾರಾಗಣ 'ಅನಿಮಲ್' ಚಿತ್ರಲ್ಲಿದೆ. ರಣ್‌ಬೀರ್ ಕಪೂರ್ ಕ್ಲೀನ್ ಶೇವ್‌ನಲ್ಲಿ ಯಂಗ್ ಲುಕ್‌ನಲ್ಲಿ ಹಾಗೂ ಗಡ್ಡ ಬಿಟ್ಟು ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ ಕೆಲವರು 'ಅರ್ಜುನ್ ರೆಡ್ಡಿ' ಸಿನಿಮಾ ನೆನೆಪಿಸುವಂತಿದೆ ಎನ್ನುತ್ತಿದ್ದಾರೆ.
2021ರಲ್ಲಿ 'ಅನಿಮಲ್' ಸಿನಿಮಾ ಘೋಷಣೆಯಾಗಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ಶೂಟಿಂಗ್ ಶುರುಮಾಡಿ ಮನಾಲಿ, ಮುಂಬೈ, ದೆಹಲಿ, ಪಂಜಾಬ್ ಬಳಿಕ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್‌ನಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿತ್ತು. ಮೊದಲಿಗೆ ಪರಿಣಿತಿ ಚೋಪ್ರಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ರಶ್ಮಿಕಾ ಮಂದಣ್ಣ ತಂಡ ಸೇರಿಕೊಂಡಿದ್ದರು. ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್ ಮತ್ತು ಗುರಿಂದರ್ ಸೀಗಲ್ ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಬಿಜಿಎಂ ಚಿತ್ರಕ್ಕಿದೆ.
ಇನ್ನು 'ಅನಿಮಲ್' ಚಿತ್ರತಂಡ ನಟ ರಣ್‌ಬೀರ್ ಕಪೂರ್‌ಗೆ 'ಸೂಪರ್ ಸ್ಟಾರ್' ಎನ್ನುವ ಬಿರುದು ನೀಡಿದೆ. ಸಿನಿಮಾ ಪೋಸ್ಟರ್‌ಗಳಲ್ಲಿ ಅದನ್ನು ನೋಡಬಹುದು. ಕೆಲವರು ರಣ್‌ಬೀರ್‌ಗೆ ಈ ಟೈಟಲ್ ನೀಡಿದ್ದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ. ಡಿಸೆಂಬರ್ ಮೊದಲ ವಾರ ಥಿಯೇಟರ್‌ಗಳಿಗೆ 'ಅನಿಮಲ್' ಎಂಟ್ರಿ ಆಗುತ್ತದೆ. 'ಅನಿಮಲ್' ಸಿನಿಮಾ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಕನ್ನಡ ಟೀಸರ್ ಕೂಡ ರಿಲೀಸ್ ಆಗಿದೆ.


Click it and Unblock the Notifications











