ಮೊದಲಿಗೆ ನಾನು ಶ್ರೀರಾಮನ ಪಾತ್ರವನ್ನು ರಿಜೆಕ್ಟ್ ಮಾಡಿದ್ದೆ; ರಣ್‌ಬೀರ್ ಕಪೂರ್
ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 4000 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಈ ಪೌರಾಣಿಕ ಸರಣಿ ಸಿನಿಮಾವನ್ನು ತೆರೆಗೆ ತರಲಾಗ್ತಿದೆ. ಸದ್ಯ ಟೀಸರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಮೆರಿಕಾದಲ್ಲಿ 2 ದಿನ ಮುನ್ನ ಟೀಸರ್ ರಿಲೀಸ್ ಮಾಡಿ ಅಲ್ಲಿನ ಮಾಧ್ಯಮಗಳ ಜೊತೆ ಚಿತ್ರತಂಡ ಮಾತನಾಡಿದೆ.
ನಿತೇಶ್ ತಿವಾರಿ ಈ ಅದ್ಧೂರಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿಸಿ 2ನೇ ಭಾಗದ ದೃಶ್ಯಗಳನ್ನು ಸೆರೆಹಿಡಿಯುವ ಪ್ರಯತ್ನ ನಡೀತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಶ್ರೀರಾಮನ ಪಾತ್ರ ಮಾಡಲು ನಿರಾಕರಿಸಿದ್ದಾಗಿ ರಣ್‌ಬೀರ್ ಕಪೂರ್ ನೆನಪು ಮಾಡಿಕೊಂಡಿದ್ದಾರೆ.

ಬಹುಕೋಟಿ ವೆಚ್ಚದ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರಾದರೂ ಒಲ್ಲೆ ಎನ್ನುವುದುಂಟೆ. ಆದರೆ ರಣ್‌ಬೀರ್ ಮಾತ್ರ ಈ ಪಾತ್ರ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿದ್ದರಂತೆ. ಲಾಸ್ ಏಂಜಲೀಸ್‌ನಲ್ಲಿ ಹಾಲಿವುಡ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
ರಣ್‌ಬೀರ್ ಮಾತನಾಡಿ "ಸುಮಾರು 4 ವರ್ಷಗಳ ಹಿಂದೆ ನಿರ್ಮಾಪಕ ನಮಿತ್ ನನಗೆ ಈ ಅವಕಾಶ ನೀಡಿದಾಗ, ನನ್ನ ತಕ್ಷಣದ ಪ್ರತಿಕ್ರಿಯೆ 'ಇಲ್ಲ' ಎಂದಾಗಿತ್ತು. ಕಾರಣ ಆ ಪಾತ್ರಕ್ಕೆ ಸೂಕ್ತ ಅಲ್ಲ, ಸರಿ ಅಲ್ಲ, ಆ ಪಾತ್ರಕ್ಕೆ ಸಂಪೂರ್ಣವಾಗಿ ನನ್ನಿಂದ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದು ಇನ್ನು ನೆನಪಿದೆ" ಎಂದಿದ್ದಾರೆ.
ಮೊದಲಿಗೆ ಬೇಡ ಅಂದರೂ ಮಗಳು ರಹಾ ಕಾರಣಕ್ಕೆ ಎಲ್ಲವೂ ಬದಲಾಯಿತು ಎಂದು ರಣ್‌ಬೀರ್ ತಿಳಿಸಿದ್ದಾರೆ. "ಆರಂಭದಲ್ಲಿ ಶ್ರೀರಾಮನ ಪಾತ್ರ ಮಾಡಲು ಭಯವಾದರೂ ಬಳಿಕ ಅದು ಕೃತಜ್ಞತೆಯಾಗಿ ಬದಲಾಯಿತು. ಏಕೆಂದರೆ ಇಂತಹ ಅವಕಾಶಗಳು ನನ್ನ ಜೀವನದಲ್ಲಿ ತುಂಬಾ ಅಗತ್ಯವಾಗಿತ್ತು. ನನ್ನ ಜೀವನಶೈಲಿಯನ್ನು ಬದಲಾಯಿಸಬೇಕಾದ ಮಗ್ಗುಲಲ್ಲಿ ನಾನು ಇದ್ದೆ. ನಾನು ಆಗ ತಾನೆ ಮೊದಲ ಬಾರಿಗೆ ತಂದೆಯಾದೆ. ಶ್ರೀರಾಮನ ಪಾತ್ರದಲ್ಲಿ ನಟಿಸುವ ಹಾಗೂ ತಂದೆಯಾಗುವುದು ಕಾಕತಾಳಿಯ ಎನ್ನುವಂತಾಗಿತ್ತು. ಇದು ನನ್ನ ಜೀವನಕ್ಕೆ ಒಂದು ಮಹತ್ವದ ತಿರುವು ನೀಡಲು ಅಗತ್ಯವಾಗಿತ್ತು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಹನುಮಜಯಂತಿ ಹಿನ್ನೆಲೆಯಲ್ಲಿ ನಾಳೆ(ಏಪ್ರಿಲ್ 2) 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗ್ತಿದೆ. ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಕುಡ ಪ್ರದರ್ಶನ ಮಾಡುವ ಪ್ರಯತ್ನ ನಡೀತಿದೆ. ಲಾಸ್ ಏಂಜಲೀಸ್‌ನಲ್ಲಿ ಪ್ರದರ್ಶನವಾಗಿದ್ದ ಟೀಸರ್ ನೋಡಿ ಅಲ್ಲಿನ ಪ್ರೇಕ್ಷಕರು, ಪತ್ರಕರ್ತರು ಮೆಚ್ಚಿಕೊಂಡಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರಲಾಗ್ತಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ಶೂರ್ಪನಖಿಯಾಗಿ ರಕುಲ್ ಪ್ರೀತ್‌ಸಿಂಗ್ ಹಾಗೂ ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್ ನಟಿಸುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಮುಂದಿ ವರ್ಷ ಬೆಳಕಿನ ಹಬ್ಬಕ್ಕೆ ಸೀಕ್ವೆಲ್ ಬಿಡುಗಡೆ ಆಗಲಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ಅದ್ಧೂರಿ ಸಿನಿಮಾ ಇದಾಗಿದೆ. ಯಶ್ ಕೂಡ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
'ರಾಮಾಯಣ' ಚಿತ್ರಕ್ಕೆ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಗ್ರಾಫಿಕ್ಸ್ ವರ್ಕ್ ನಡೀತಿದೆ. ಆಧುನಿಕ ತಂತ್ರಜ್ಞಾನ ಬಳಿಸಿ ನಮ್ಮ ಪೌರಾಣಿಕ ಕಥೆಯನ್ನು ಇಡೀ ವಿಶ್ವದ ಸಿನಿರಸಿಕರ ಮುಂದಿಡಲಾಗುತ್ತಿದೆ. ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ.


Click it and Unblock the Notifications











