'ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ 'ಬ್ರಹ್ಮಾಸ್ತ್ರ' ಸೆಡ್ಡು: ವೀಕೆಂಡ್ನಲ್ಲಿ ಭರ್ಜರಿ ಗಳಿಕೆ
ಬಾಲಿವುಡ್ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಬ್ರಹ್ಮಾಸ್ತ್ರ' ತೆರೆ ಕಂಡು ಎರಡು ವಾರಗಳಾಗಿದ್ದು, ಚಿತ್ರ ಬಾಕ್ಸ್ ಆಫೀಸ್ನಲ್ಲಿ ನಿರಂತರವಾಗಿ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ 'ಬ್ರಹ್ಮಾಸ್ತ್ರ'ರ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಲ್ಲದೇ ಬಾಕ್ಸ್ ಆಫೀಸ್ನಲ್ಲೂ 'ಬ್ರಹ್ಮಾಸ್ತ್ರ' ಚಿತ್ರದ ಗಳಿಕೆ ಮುಂದುವರಿದಿದೆ.
'ಬ್ರಹ್ಮಾಸ್ತ್ರ' ಚಿತ್ರ ತೆರೆಕಂಡು ನಿನ್ನೆ(ಸಪ್ಟೆಂಬರ್ 18) ಹತ್ತು ದಿನ ಕಳೆದಿದ್ದು, ವಾರದ ದಿನಗಳಲ್ಲಿ ಇಳಿಕೆಗೊಂಡಿದ್ದ 'ಬ್ರಹ್ಮಾಸ್ತ್ರ' ಬಾಕ್ಸ್ ಆಫೀಸ್ ಕಲೆಕ್ಷನ್ ವೀಕೆಂಡ್ನಲ್ಲಿ ಏರಿಕೆ ಕಂಡಿದೆ. ವಿಶ್ವದಾದ್ಯಂತ ಸಪ್ಟೆಂಬರ್ 9ರಂದು ತೆರೆ ಕಂಡಿದ್ದ 'ಬ್ರಹ್ಮಾಸ್ತ್ರ' ಚಿತ್ರ, ಈವರೆಗೂ ಬಾಕ್ಸ್ ಆಫೀಸ್ನಲ್ಲಿ ಒಟ್ಟು ₹350 ಕೋಟಿ ಗಳಿಕೆ ಮಾಡಿದೆ. ಇನ್ನು ಭಾರತದಲ್ಲೇ 218 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ದಾಖಲೆ ಸೃಷ್ಟಿಸಿದೆ.
ಇನ್ನು ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಕಂಡ 'ಬ್ರಹ್ಮಾಸ್ತ್ರ' ಮೊದಲ ವೀಕೆಂಡ್ನಲ್ಲಿ ₹225 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಿತ್ತು. ಈ ವೀಕೆಂಡ್ನಲ್ಲೂ 'ಬ್ರಹ್ಮಾಸ್ತ್ರ' ಬಾಕ್ಸ್ ಆಫೀಸ್ ಬೇಟೆ ಮುಂದುವರಿದಿದೆ. ಕಳೆದ ಹತ್ತು ದಿನಗಳಿಂದ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಬ್ರಹ್ಮಾಸ್ತ್ರ' ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡಿದ್ದು, ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಬಂಡವಾಳ ವಾಪಸ್ ಬಾಚಿಕೊಳ್ಳುತ್ತಾ ಬ್ರಹ್ಮಾಸ್ತ್ರ..?
410 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ 'ಬ್ರಹ್ಮಾಸ್ತ್ರ' ಚಿತ್ರ, ಈಗಾಗಲೇ ಶೇ.80 ರಷ್ಟು ಬಂಡವಾಳವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಹತ್ತನೇ ದಿನವೂ 'ಬ್ರಹ್ಮಾಸ್ತ್ರ' ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿದ್ದು, ನಿನ್ನೆ(ಸಪ್ಟೆಂಬರ್ 10) 16.30 ಕೋಟಿ ರೂಪಾಯಿ ಗಳಿಸಿದೆ ಎಂದು ಎಂದು ಅಂದಾಜಿಸಲಾಗಿದೆ. ಈ ಮೂಲಕ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಚಿತ್ರ ಭಾರತದಲ್ಲಿ 215.50 ಕೋಟಿ ಗಳಿಸಿದೆ.

ಹತ್ತು ದಿನಗಳ ಸಂಪೂರ್ಣ ವರದಿ
ಮೊದಲ ದಿನ (ಸಪ್ಟೆಂಬರ್ 9)- 36.42 ಕೋಟಿ ರೂ.
ಎರಡನೇ ದಿನ (ಸಪ್ಟೆಂಬರ್ 10)-42.41 ಕೋಟಿ ರೂ.
ಮೂರನೇ ದಿನ (ಸಪ್ಟೆಂಬರ್ 11)-45.66 ಕೋಟಿ ರೂ.
ನಾಲ್ಕನೇ ದಿನ (ಸಪ್ಟೆಂಬರ್ 12)-16.50 ಕೋಟಿ ರೂ.
ಐದನೇ ದಿನ (ಸಪ್ಟೆಂಬರ್ 13)-12.68 ಕೋಟಿ ರೂ.
ಆರನೇ ದಿನ (ಸಪ್ಟೆಂಬರ್ 14)-10.53 ಕೋಟಿ ರೂ.
ಏಳನೇ ದಿನ (ಸಪ್ಟೆಂಬರ್ 15)-9.02 ಕೋಟಿ ರೂ.
ಎಂಟನೇ ದಿನ (ಸಪ್ಟೆಂಬರ್ 16)-10.30 ಕೋಟಿ ರೂ.
ಒಂಬತ್ತನೇ ದಿನ (ಸಪ್ಟೆಂಬರ್ 17)-15.38 ಕೋಟಿ ರೂ.
ಹತ್ತನೇ ದಿನ (ಸಪ್ಟೆಂಬರ್ 18)-16.30 ಕೋಟಿ ಎಂದು ಅಂದಾಜಿಸಲಾಗಿದೆ.

'ಕಾಶ್ಮೀರ್ ಫೈಲ್ಸ್' ಹಿಂದಿಕ್ಕಲು ಇನ್ನೆಷ್ಟು ಗಳಿಸಬೇಕು..?
ಬಾಲಿವುಡ್ನ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ಚಿತ್ರಗಳ ಪಟ್ಟಿಗೆ 'ಬ್ರಹ್ಮಾಸ್ತ್ರ'ವೂ ಸೇರಿಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ಈ ವರ್ಷದಲ್ಲಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಿರುವ 'ಕಾಶ್ಮೀರ್ ಫೈಲ್ಸ್' ಚಿತ್ರಕ್ಕೂ ಬ್ರಹ್ಮಾಸ್ತ್ರ ಸೆಡ್ಡು ಹೊಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 'ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಹಿಂದಿಕ್ಕಲಿದೆ. 'ಕಾಶ್ಮೀರ್ ಫೈಲ್ಸ್' ಚಿತ್ರ ಭಾರತದಲ್ಲಿ 252 ಕೋಟಿ ರೂ ಕಲೆಕ್ಷನ್ ಮಾಡಿತ್ತು. 'ಬ್ರಹ್ಮಾಸ್ತ್ರ' ಈಗಾಗಲೇ 215.50 ಕೋಟಿ ರೂ ಗಳಿಕೆ ಮಾಡಿದ್ದು, ಇನ್ನು ಮೂರ್ನಾಲ್ಕು ದಿನದಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಿಂದಿಕ್ಕುವ ಸಾಧ್ಯತೆ ಇದೆ.

ದಕ್ಷಿಣ ಭಾರತದಲ್ಲಿ ರಾಜಮೌಳಿ ಮೋಡಿ
ತೆರೆ ಕಾಣುವ ಮುನ್ನವೇ ವಿವಾದದ ಸುಳಿಯಲ್ಲಿ ಸಿಲುಕಿ ಬಾಯ್ಕಾಟ್ ಬಿಸಿ ಅನುಭವಿಸಿದ್ದ 'ಬ್ರಹ್ಮಾಸ್ತ್ರ' ಚಿತ್ರ ಸದ್ಯ ಬಾಕ್ಸ್ ಆಫೀಸ್ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಹಾಗೂ ಚಿತ್ರದ ಬಗ್ಗೆ ಜನರ ಪ್ರತಿಕ್ರಿಯೆಯಿಂದ 'ಬ್ರಹ್ಮಾಸ್ತ್ರ' ಚಿತ್ರತಂಡ ಗೆಲುವಿನ ನಗೆ ಬೀರಿದೆ. ಇನ್ನು ಖ್ಯಾತ ನಿರ್ದೇಶಕ ರಾಜಮೌಳಿ ಕೂಡ 'ಬ್ರಹ್ಮಾಸ್ತ್ರ' ಚಿತ್ರತಂಡದೊಂದಿಗೆ ಕೈ ಜೋಡಿಸಿ, ದಕ್ಷಿಣ ಭಾರತದಲ್ಲಿ ಚಿತ್ರದ ಪ್ರಚಾರ ನಡೆಸಿದ್ದರು. 'ಬ್ರಹ್ಮಾಸ್ತ್ರ' ಗೆಲುವಿಗೆ ಇದು ಕೂಡ ಕಾರಣ ಎನ್ನುವ ಮಾತುಗಳು ಕೂಡ ಹರಿದಾಡುತ್ತಿದೆ.


Click it and Unblock the Notifications











