ಸೂರ್ಯ ಅಭಿಮಾನಿಗಳಿಗೆ ಭಾರೀ ನಿರಾಸೆ, ಈ ಸೂಪರ್ ಸ್ಟಾರ್ ಪಾಲಾಯಿತು ಬಾಲಿವುಡ್‌ನ ಧೂಮ್-04...!
ಬಾಲಿವುಡ್‌ನ ಯಶಸ್ವೀ ಸರಣಿಗಳಲ್ಲಿ 'ಧೂಮ್' ಕೂಡ ಒಂದು. 20 ವರ್ಷಗಳ ಹಿಂದೆ ತೆರೆಗೆ ಬಂದು ಬಾಲಿವುಡ್‌ನಲ್ಲಿ ಹೊಸ ಇತಿಹಾಸ ಬರೆದಿದ್ದ ಧೂಮ್‌ನ ಮೊದಲ ಭಾಗ ಜಾನ್ ಅಬ್ರಾಹಿಂ ಹೆಸರಿಗೆ ಇರುವ ಬೆಲೆ ಹೆಚ್ಚಿಸಿತ್ತು. ಅಭಿಷೇಕ್ ಬಚ್ಚನ್ ಅವರಿಗೆ ಕೂಡ ಈ ಚಿತ್ರದ ಮೂಲಕ ಗೆಲುವು ಸಿಕ್ಕಿತ್ತು.
ಧೂಮ್‌ನಂತೆಯೇ ಆ ನಂತರ ಬಂದ ಸಿಕ್ವೆಲ್‌ಗಳು ಕೂಡ ಯಶಸ್ವಿಯಾದವು. 2006ರಲ್ಲಿ ಬಂದ ಧೂಮ್ 2ನಲ್ಲಿ ಅಭಿಷೇಕ್ ಬಚ್ಚನ್ ಜೊತೆ ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಇದ್ದರು. ಆ ನಂತರ ಬಂದ ಧೂಮ್ 3ದಲ್ಲಿ ಖಳನಾಯಕನ ಜಾಗಕ್ಕೆ ಅಮೀರ್ ಖಾನ್ ಬಂದರು. ಡಬಲ್ ರೋಲ್‌ನಲ್ಲಿ ಮಿಂಚಿದರು. ಕತ್ರಿನಾ ಕೈಫ್ ಕೂಡ ಈ ಚಿತ್ರದಲ್ಲಿ ಅಮೀರ್ ಖಾನ್‌ಗೆ ಜೊತೆಯಾದರು.

ಇದೀಗ ಈ ಚಿತ್ರದ ನಾಲ್ಕನೇ ಭಾಗಕ್ಕೆ ತಯಾರಿ ಶುರುವಾಗಿದೆ. ಕಾಲಿವುಡ್ ಸ್ಟಾರ್ ಸೂರ್ಯ ಅವರ ಅಭಿಮಾನಿಗಳಿಗೆ ನಿರಾಸೆಯಾಗುವ ಸುದ್ದಿಯೂ ಹೊರ ಬಿದ್ದಿದೆ. ಹೌದು, ಅಸಲಿಗೆ ಧೂಮ್ 4 ಚಿತ್ರ ಸೂರ್ಯ ನಾಯಕ ಎಂಬ ಸುದ್ದಿ ಕಳೆದ ಹದಿನೈದು ದಿನಗಳಿಂದ ಮಾಯಾನಗರಿ ಮುಂಬೈನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಸೂರ್ಯ ಚಿತ್ರದ ಖಳನಾಯಕನಾಗಿ ಮಿಂಚುವುದು ಖಚಿತವೆಂದು ಬಾಲಿವುಡ್ ಮಾತನಾಡಿಕೊಂಡಿತ್ತು. ಆದರೆ ಈಗ ಈ ಮಾತು ಸುಳ್ಳಾಗಿದೆ. ಸೂರ್ಯ ಬದಲು ಧೂಮ್ ನಿರ್ಮಾಣ ಸಂಸ್ಥೆ ವೈಆರ್‌ಎಫ್ ತಮ್ಮದೇ ಬಾಲಿವುಡ್ ಸ್ಟಾರ್‌ಗೆ ಮಣೆ ಹಾಕಿದೆ. ರಣ್‌ಬೀರ್ ಕಪೂರ್ ಜೊತೆ ಧೂಮ್ -04 ಮಾಡಲು ಅಣಿಯಾಗಿದೆ.
ಇನ್ನೂ ಧೂಮ್ 4 ಚಿತ್ರಕ್ಕೆ ರಣ್‌ಬೀರ್ ಕಪೂರ್ ನಾಯಕನಾಗಿ ಆಯ್ಕೆಯದ ಬೆನ್ನಲ್ಲಿಯೇ ಈ ಬಾರಿ ಧೂಮ್‌ನಲ್ಲಿ ಅಭಿಷೇಕ್ ಬಚ್ಚನ್ ಇರಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಧೂಮ್ ಸರಣಿ ಅಭಿಷೇಕ್ ಬಚ್ಚನ್ ಪಾಲಿಗೆ ತುಂಬಾನೇ ಲಕ್ಕಿ. ಇನ್ನೂ ಪೊಲೀಸ್ ಪಾತ್ರದಲ್ಲಿ ಕಳೆದ ಮೂರು ಸರಣಿಯಲ್ಲಿ ಇವರನ್ನು ನೋಡಿರುವ ಹಿನ್ನೆಲೆ ಅಭಿಷೇಕ್ ಬದಲು ಆ ಪಾತ್ರದಲ್ಲಿ ಬೇರೆಯವರನ್ನು ಊಹಿಸಿಕೊಳ್ಳುವುದು ಕಷ್ಟ. ಅಲಿ ಪಾತ್ರ ನಿರ್ವಹಿಸಿದ್ದ ಉದಯ್ ಚೋಪ್ರಾ ವಿಚಾರದಲ್ಲಿ ಕೂಡ ಈ ಮಾತು ಅನ್ವಯವಾಗುತ್ತೆ. ಆದರೆ, ಬೇಸರದ ಸಂಗತಿ ಅಂದರೆ ಆದಿತ್ಯ ಚೋಪ್ರಾ ಈ ಬಾರಿ ಅಭಿಷೇಕ್ ಬಚ್ಚನ್ ಅವರನ್ನು ಕೈ ಬಿಡುವ ಮನಸು ಮಾಡಿದ್ದಾರೆ. ಕೇವಲ ಅಭಿಷೇಕ್ ಬಚ್ಚನ್ ಮಾತ್ರ ಅಲ್ಲ ಉದಯ್ ಚೋಪ್ರಾ ಅವರನ್ನು ಕೂಡ ಧೂಮ್ ಸರಣಿಯಿಂದ ಕೊಕ್ ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಬದಲು ಈ ಯುಗದ ಹೊಸ ತಲೆಮಾರಿನ ನಾಯಕರನ್ನು ಧೂಮ್ 4ಕ್ಕೆ ಆಯ್ಕೆ ಮಾಡಲಿದ್ದಾರೆ ಆದಿತ್ಯ ಚೋಪ್ರಾ. ಹೀಗೊಂದು ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ.

ಇನ್ನೂ ಧೂಮ್ ನ ಈ ನಾಲ್ಕನೇ ಭಾಗದ ನಿರ್ದೇಶನದ ಜವಾಬ್ಧಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲವಾದರೂ, ಧೂಮ್ 4 ಚಿತ್ರವನ್ನು ಹಾಲಿವುಡ್ ಮಾದರಿಯಲ್ಲಿ ನಿರ್ಮಾಣ ಮಾಡುವ ಚಿಂತನೆಯನ್ನು ಆದಿತ್ಯ ಚೋಪ್ರಾ ಮಾಡಿದ್ದಾರೆ. ಚಿತ್ರಕ್ಕೆ ಯಥೇಚ್ಚವಾಗಿ ಹಣ ಸುರಿಯಲು ಕೂಡ ಮುಂದಾಗಿದ್ದಾರೆ. ಸದ್ಯ ಚಿತ್ರದ ಕಥೆಯನ್ನು ಅಂತಿಮಗೊಳಿಸಿರುವ ಆದಿತ್ಯ ಚೋಪ್ರಾ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸವನ್ನು ಶುರು ಮಾಡಿದ್ದಾರೆ. ತಾರಾಗಣದ ಆಯ್ಕೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ 2025ರ ಅಂತ್ಯದಲ್ಲಿ ಶುರುವಾಗಲಿರುವ ಧೂಮ್ 4, ರಣ್‌ಬೀರ್ ಕಪೂರ್ ಅಭಿನಯದ 25ನೇ ಸಿನಿಮಾ ಅನ್ನುವುದು ವಿಶೇಷ. ಈ ಕಾರಣಕ್ಕೆ ಈ ಚಿತ್ರಕ್ಕೆ ರಣ್‌ಬೀರ್ ಕಪೂರ್ ತುಸು ಹೆಚ್ಚೇ ಉತ್ಸುಕರಾಗಿದ್ಧಾರೆ. ಸದ್ಯ ರಣ್ಬೀರ್ ಕಪೂರ್ ಯಶ್ ನಿರ್ಮಾಣದ ರಾಮಾಯಣದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಲವ್ & ವಾರ್ ಚಿತ್ರ ಕೂಡ ಇದೆ. ಇವೆರಡು ಚಿತ್ರ ಮುಕ್ತಾಯವಾದ ನಂತರ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದ ಮುಂದುವರೆದ ಭಾಗ ಶುರುವಾಗಲಿದೆ.


Click it and Unblock the Notifications











