ಮುಂಬೈಗೆ ವಾಪಸ್ ಆದ ದೀಪಿಕಾ ಪಡುಕೋಣೆ-ರಣ್ವೀರ್ ದಂಪತಿ
ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪುಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ ಮುಂಬೈನಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಬೆಂಗಳೂರಿಗೆ ಆಗಮಿಸಿದ್ದರು. ಲಾಕ್ ಡೌನ್ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ದೀಪಿಕಾ ಪತಿ ರಣ್ವೀರ್ ಜೊತೆ ತನ್ನ ತವರಿಗೆ ಮರಳಿದ್ದರು.
ಬೆಂಗಳೂರಿಗೆ ಬರುತ್ತಿದ್ದಂತೆ ದೀಪಿಕಾ ಕುಟುಂಬ ಕೊರೊನಾ ಸೋಂಕಿಗೆ ತುತ್ತಾಗಿತ್ತು. ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ವಲ ಹಾಗೂ ಸಹೋದರಿ ಅನಿಷಾಗೆ ಕೊರೊನಾ ಸೋಂಕು ತಗುಲಿತ್ತು. ದೀಪಿಕಾಗೂ ಕೋವಿಡ್ ಪಾಸಿಟಿವ್ ಆಗಿತ್ತು ಎನ್ನುವ ವರದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ದೀಪಿಕಾ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.
ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಡಿಸ್ಚಾರ್ಜ್ ಆಗಿರುವ ಪ್ರಕಾಶ್ ಪಡುಕೋಣೆ ಚೇತರಿಸಿಕೊಳ್ಳುತ್ತಿದ್ದಾರೆ.

ಸದ್ಯ ಇಡೀ ಕುಟುಂಬ ಚೇತರಿಸಿಕೊಳ್ಳುತ್ತಿದೆ. ಈ ನಡುವೆ ದೀಪಿಕಾ ಪತಿ ಜೊತೆ ಮುಂಬೈಗೆ ವಾಪಸ್ ಆಗಿದ್ದಾರೆ.
ರಣ್ವೀರ್ ಮತ್ತು ದೀಪಿಕಾ ಇಬ್ಬರು ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇಬ್ಬರೂ ಕಪ್ಪು ಉಡುಪು ಧರಿಸಿದ್ದು, ರಣ್ವೀರ್ ಪತ್ನಿ ದೀಪಿಕಾ ಕೈ ಹಿಡಿದು ಕರೆದುಕೊಂಡು ಹೋಗುತ್ತಿವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿಗಷ್ಟೆ ದೀಪಿಕಾ ತನ್ನ ಲಿವ್ ಲವ್ ಲಾಫ್ ಫೌಂಡೇಶನ್ ನ ಲಿಂಕ್ ಶೇರ್ ಮಾಡುವ ಮೂಲಕ ಸಾಂಕ್ರಾಮಿಕ ರೋಗದ ಆತಂಕವನ್ನು ನಿಭಾಯಿಸುವ ಬಗ್ಗೆ ಪೋಸ್ಟ್ ಮಾಡಿದ್ದರು. ಏಪ್ರಿಲ್ ತಿಂಗಳಲ್ಲಿ ಮುಂಬೈನಲ್ಲಿ ಲಾಕ್ ಡೌನ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಬಾಲಿವುಡ್ ಸ್ಟಾರ್ಸ್ ಮುಂಬೈ ತೊರೆದು ತಮ್ಮ ನೆಚ್ಚಿನ ಊರುಗಳಿಗೆ ತೆರಳಿದ್ದರು. ಆದರೀಗ ಬಹುತೇಕ ಮಂದಿ ವಾಪಸ್ ಆಗಿದ್ದಾರೆ.
ಸದ್ಯ ಸಿನಿಮಾ ಕೆಲಸಗಳು ಸ್ಥಗಿತಗೊಂಡ ಕಾರಣ ಎಲ್ಲರೂ ಮನೆಯಲ್ಲೇ ಇದ್ದು, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇನ್ನು ಬಾಲಿವುಡ್ ನ ಅನೇಕ ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಅಕ್ಷಯ್ ಕುಮಾರ್, ಕತ್ರಿನಾ ಕೈಫ, ಆಮೀರ್ ಖಾನ್, ಶಿಲ್ಪಾ ಶೆಟ್ಟಿ, ವಿಕ್ಕಿ ಕೌಶಲ್ ಸಾಕಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು.


Click it and Unblock the Notifications











